ಹೊಟ್ಟೆಪಾಡಿಗಾಗಿ ಮೈಸೂರಿನ ಹೋಟೆಲ್‍ನಲ್ಲಿ ಪಾತ್ರೆ ತೊಳೆದಿದ್ದೆ…!
ಮೈಸೂರು

ಹೊಟ್ಟೆಪಾಡಿಗಾಗಿ ಮೈಸೂರಿನ ಹೋಟೆಲ್‍ನಲ್ಲಿ ಪಾತ್ರೆ ತೊಳೆದಿದ್ದೆ…!

November 22, 2021

ಮೈಸೂರು, ನ.21(ಆರ್‍ಕೆಬಿ)- ತೀರಾ ಬಡತನದಲ್ಲಿ ಜೀವನ ದೂಡುತ್ತಿದ್ದ ನನಗೆ ಮೈಸೂರಿನ ಕಿತ್ತಳೆ ವ್ಯಾಪಾರ ಜೀವನದ ದಾರಿ ತೋರಿಸಿತು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹರೇಕಳ ಹಾಜಬ್ಬ ತಮ್ಮ ಮೈಸೂರಿನ ಹಳೆಯ ನೆನಪು ಗಳನ್ನು ಹಂಚಿಕೊಂಡರು.

ಮೈಸೂರಿನ ನಂಜರಾಜ ಬಹ ದ್ದೂರ್ ಛತ್ರದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿದ್ದ ಕನ್ನಡ ಪುಸ್ತಕ ಹಬ್ಬದಲ್ಲಿ ಸನ್ಮಾನ ಸ್ವೀಕರಿ ಸಿದ ಬಳಿಕ `ಮೈಸೂರು ಮಿತ್ರ’ ನೊಂದಿಗೆ ತಮ್ಮ ಮೈಸೂರಿನ ನೆನಪುಗಳನ್ನು ಬಿಚ್ಚಿಟ್ಟರು.

ನನಗಾಗ 22 ವರ್ಷ ಇರಬಹುದು. 1979ರಲ್ಲಿ ಮೈಸೂರಿನ ದೇವರಾಜ ಮಾರುಕಟ್ಟೆ ಎದುರಿನ ಹೋಟೆಲೊಂದರಲ್ಲಿ ಪಾತ್ರೆ ತೊಳೆದು ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದೆ. ಅಷ್ಟೊಂದು ಬಡತನ ನನಗಿತ್ತು. ಹಲ ವರೊಂದಿಗೆ ಪಾತ್ರೆ ತೊಳೆಯುವ ಕೆಲಸ ಮಾಡು ತ್ತಿದ್ದೆ. ಚಾಪೆಯ ಮೇಲೆ ಮಲಗುತ್ತಿದ್ದೆ. ಊರಿನಲ್ಲಿ ಅಣ್ಣನಿಗೆ ಹುಷಾರಿರಲಿಲ್ಲ. ನಮಗೆ ಬಹಳ ಕಷ್ಟವಿತ್ತು. ಹಾಗಾಗಿ ಮೈಸೂರಿಗೆ ಬಂದೆ. ಹೋಟೆಲ್‍ನಲ್ಲಿ ಕೆಲಸಕ್ಕೆ ಸೇರಿದೆ ಎಂದು ಹೇಳುವಾಗ ಹಾಜಬ್ಬ ಅವರ ಕಣ್ಣು ತೇವವಾಯಿತು.

ಕೇವಲ 10 ದಿನ ಮಾತ್ರ ಹೋಟೆಲ್ ನಲ್ಲಿದ್ದೆ. ಊರಿಗೆ ಹೋಗುತ್ತೇನೆಂದು ಹೇಳಿದಾಗ ಹೋಟೆಲ್‍ನ ಧಣಿ ಸ್ವಲ್ಪ ಹಣ ಕೊಟ್ಟರು. ಅಂದಿನ ಕಾಲಕ್ಕೆ ಅದೇ ದೊಡ್ಡ ಹಣದಂತೆ ಕಾಣುತ್ತಿತ್ತು ಎಂದು ತಮಗೆ ಕೆಲಸ ನೀಡಿ, ಹೊಟ್ಟೆಗೂ ಅನ್ನ ನೀಡಿದ ಧಣಿಯನ್ನು ಸ್ಮರಿಸಿಕೊಂಡರು.
ಆ ವೇಳೆ ಮೈಸೂರಿನ ಮಾರುಕಟ್ಟೆಯಲ್ಲಿ ಕಿತ್ತಲೆ ವ್ಯಾಪಾರ ಮಾಡುತ್ತಿದ್ದವರನ್ನು ನೋಡಿದೆ. ನಾನೂ ಏಕೆ ಊರಿಗೆ ಹೋಗಿ ಕಿತ್ತಳೆ ವ್ಯಾಪಾರ ಮಾಡಬಾರದು ಎಂದೆನಿಸಿತು. ಕಿತ್ತಳೆ ವ್ಯಾಪಾರ ನನ್ನನ್ನು ಪ್ರೇರೇಪಿಸಿತು. 1980ರಲ್ಲಿ ಊರಿನಲ್ಲಿ ಸಾಲ ಪಡೆದು ಕಿತ್ತಳೆ ವ್ಯಾಪಾರ ಆರಂಭಿಸಿದೆ ಎಂದು ಮೈಸೂರಿನಿಂದಲೇ ಕಿತ್ತಳೆ ವ್ಯಾಪಾ ರಕ್ಕೆ ಪ್ರೇರಣೆಯಾದ ಬಗ್ಗೆ ಸಂತಸದಿಂದ ಹೇಳಿಕೊಂಡರು.

ಮೈಸೂರಿನಲ್ಲಿ ಮೂರು ಬಾರಿ ಪ್ರಶಸ್ತಿ ಬಂದಿದೆ. ರಮಾಗೋವಿಂದದಲ್ಲಿ ಎರಡು ಬಾರಿ, ರಂಗಾಯಣ ದಲ್ಲಿ ಒಮ್ಮೆ ಪ್ರಶಸ್ತಿ ನೀಡಿ ಸತ್ಕರಿಸಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಹಾಜಬ್ಬ, ತಮಗೆ ಮೈಸೂರು ಎಂದಿಗೂ ಮರೆಯಲಾಗದ ಊರು ಎಂದರು.
ಪದ್ಮಶ್ರೀ ಗೌರವ ದೊರೆತ ಬಗ್ಗೆ ಹೇಳಿದ ಅವರು, ನನ್ನ ಜೀವನದಲ್ಲಿ ನನಗೆ, ನನ್ನ ಶ್ರಮಕ್ಕೆ ಸರ್ಕಾರ ಮನ್ನಣೆ ನೀಡಿದೆ. ಇದಕ್ಕಾಗಿ ಪ್ರಧಾನ ಮಂತ್ರಿ, ರಾಷ್ಟ್ರ ಪತಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ನನಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದಾನೆ. ಮಗ ಪ್ರಿಂಟಿಂಗ್ ಪ್ರೆಸ್‍ಗೆ ಕೆಲಸಕ್ಕೆ ಹೋಗುತ್ತಿದ್ದಾನೆ. ಪತ್ನಿ 20 ವರ್ಷದಿಂದ ಮಲಗಿದ್ದಲ್ಲೇ ಮಲಗಿದ್ದಾರೆ. ಮಕ್ಕಳಿಗೆ ಮದುವೆ ಆಗಿಲ್ಲ ಎಂದರು. ಊರಿಗೆ ಶಾಲೆ ಬೇಕೆಂದು ಹಠ ತೊಟ್ಟು ತಾನು ಸಂಪಾದಿಸಿದ ಹಣದಿಂದ ಶಾಲೆ ಆರಂಭಿಸಿ, ಇದೀಗ ಶಾಲೆ 10ನೇ ತರಗತಿವರೆಗೆ ಇದೆ. ಆದಾಗ್ಯೂ ಅವರಿಗೆ ಊರಿಗೆ ಪಿಯು ಕಾಲೇಜು ಆಗಬೇಕೆಂಬ ಬಯಕೆ ಇದೆ. ಇದಕ್ಕೆ ಸರ್ಕಾರ ಮತ್ತು ಸಾರ್ವಜನಿಕರ ಸಹಕಾರವನ್ನು ಹಾಜಬ್ಬ ಕೋರಿದ್ದಾರೆ.

Translate »