ಮೈಸೂರು ಮೇಯರ್ ಚುನಾವಣೆ: ಸಾರಾ ಅಭಿಪ್ರಾಯ ಸಂಗ್ರಹ
ಮೈಸೂರು

ಮೈಸೂರು ಮೇಯರ್ ಚುನಾವಣೆ: ಸಾರಾ ಅಭಿಪ್ರಾಯ ಸಂಗ್ರಹ

August 22, 2021

ಮೈಸೂರು, ಆ.21(ಎಸ್‍ಬಿಡಿ)- ಮೈಸೂರು ನಗರಪಾಲಿಕೆ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಜೆಡಿಎಸ್ ಸಭೆ ನಡೆದಿದ್ದು, `ಮೈತ್ರಿ’ ವಿಚಾರ ಪಕ್ಷದ ನಾಯಕರ ಅಂಗಳ ತಲುಪಿದೆ.

ಮೈಸೂರಿನಲ್ಲಿರುವ ಶಾಸಕ ಸಾ.ರಾ.ಮಹೇಶ್ ಕಚೇರಿಯಲ್ಲಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಚರ್ಚಿಸ ಲಾಗಿದೆ. ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇ ಗೌಡ, ಶ್ರೀಕಂಠೇಗೌಡ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚೆಲುವೇಗೌಡ, ಎಲ್ಲಾ ಕಾರ್ಪೊರೇಟರ್‍ಗಳು, ಮಾಜಿ ಮೇಯರ್‍ಗಳು, ಮಾಜಿ ಉಪಮೇಯರ್‍ಗಳು, ಅಬ್ದುಲ್ಲಾ ಸೇರಿದಂತೆ ಹಲವು ಪ್ರಮುಖರು ಸಭೆ ಯಲ್ಲಿ ಪಾಲ್ಗೊಂಡು ಮೇಯರ್ ಚುನಾವಣೆ `ಮೈತ್ರಿ’ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸದ್ಯ ಕಾರ್ಪೊರೇಟರ್‍ಗಳು, ಮುಖಂಡರ ಅಭಿ ಪ್ರಾಯ ಸಂಗ್ರಹಿಸಿದ ಶಾಸಕ ಸಾ.ರಾ.ಮಹೇಶ್, ಸಭೆಯ ಅಂಶಗಳನ್ನು ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗು ವುದು. ನಂತರ ಅವರ ನಿರ್ದೇಶನದಂತೆ ಮುಂದುವರೆ ಯಲು ಎಲ್ಲರೂ ಬದ್ಧವಾಗಿರುವಂತೆ ಕಾರ್ಪೊರೇಟರ್ ಗಳಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಮೇಯರ್‍ಗೆ ಪಟ್ಟು: ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸುವುದು ಅಥವಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿ ಕೊಳ್ಳುವುದು ಪಕ್ಷದ ನಾಯ ಕರ ನಿರ್ಧಾರಕ್ಕೆ ಬಿಟ್ಟಿದ್ದು. ಆದರೆ ಪ್ರಸಕ್ತ ಅವಧಿಯಲ್ಲಿ ನಮ್ಮ ಪಕ್ಷದವರೇ ಮೇಯರ್ ಆಗಿದ್ದ ಕಾರಣ ಯಾವ ಪಕ್ಷ ದೊಂದಿಗೆ ಮೈತ್ರಿಯಾದರೂ ಮೇಯರ್ ಸ್ಥಾನ ಉಳಿಸಿಕೊಳ್ಳ ಬೇಕು ಎಂದು ಅನೇಕ ಸದಸ್ಯರು ಅಭಿಪ್ರಾಯಿಸಿದ್ದಾರೆ. ಅದರಲ್ಲೂ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಈ ಅವಕಾಶವನ್ನು ಕಳೆದುಕೊಳ್ಳುವುದು ಸೂಕ್ತವಲ್ಲ. ಬೇರೆ ಪಕ್ಷದವರಿಗೆ ಅವಕಾಶ ಮಾಡಿಕೊಟ್ಟರೆ ನಮ್ಮ ಪಕ್ಷದ ಮಹಿಳಾ ಸದಸ್ಯರಿಗೆ ಅನ್ಯಾಯವಾಗು ತ್ತದೆ ಎಂದು ಕೆಲವರು ತಿಳಿಸಿದ್ದಾರೆ. ಇನ್ನು ಕೆಲ ಸದಸ್ಯರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಸೂಕ್ತವಲ್ಲ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.

ಮತ್ತೆ `ಕೈ’ ಹಿಡಿಯುವರೇ?: ಕಾಂಗ್ರೆಸ್ ಬೆಂಬಲ ದಿಂದ ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದಾದ ನಂತರ ಜೂ.11ಕ್ಕೆ ನಿಗದಿಯಾಗಿದ್ದ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯನ್ನು ಆಯ್ಕೆ ಮಾಡುವ ಇಂಗಿತ ಜೆಡಿಎಸ್ ಪಾಳಯ ದಲ್ಲಿತ್ತು. ಆದರೆ ಅಂದಿನ ಚುನಾವಣೆಗೂ ತಡೆಯಾದ ನಂತರ ಜೆಡಿಎಸ್‍ಗೆ ಮೇಯರ್ ಸ್ಥಾನ ಉಳಿಸಿಕೊಳ್ಳ ಬೇಕೆಂಬ ಒತ್ತಡ ಹೆಚ್ಚಾಗಿದೆ. ಅತ್ತ ಕಾಂಗ್ರೆಸ್‍ನಲ್ಲೂ ಮೇಯರ್ ಸ್ಥಾನ ನೀಡುವುದು ಖಚಿತವಾದರೆ ಮಾತ್ರ ಜೆಡಿಎಸ್‍ನೊಂದಿಗೆ ಮೈತ್ರಿ ಮುಂದುವರೆಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಇನ್ನು ಜೆಡಿಎಸ್ ಮೈತ್ರಿ ಬಯಸಿ ರುವ ಬಿಜೆಪಿ, ಮೇಯರ್ ಸ್ಥಾನ ಸಿಗದಿದ್ದರೆ ದೂರ ಸರಿಯುವುದು ನಿಶ್ಚಿತ ಎನ್ನಲಾಗಿದೆ. ಕಳೆದ ಮೇಯರ್ ಚುನಾವಣೆಯಲ್ಲಿ ನಡೆದಂತೆ ಕಡೇ ಕ್ಷಣದಲ್ಲಿ ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ತೀರಾ ಕಡಿಮೆ. ಈ ಸಂದರ್ಭ ದಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಪರಿಸ್ಥಿತಿ ನಿಭಾಯಿಸುವ ಚಿಂತನೆ ಜೆಡಿಎಸ್‍ನಲ್ಲಿದೆ. ನಾಯಕರ ಒಪ್ಪಿಗೆ ಪಡೆದು, ಸದಸ್ಯರ ಮನವೊಲಿಸಿ ಈ ಬಾರಿ ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟು, ಮುಂದಿನ ಎರಡು ಅವಧಿಯಲ್ಲೂ ಜೆಡಿಎಸ್‍ಗೆ ಮೇಯರ್ ಸ್ಥಾನ ಹಾಗೂ ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಪಡೆದುಕೊಳ್ಳುವ ಒಪ್ಪಂದದೊಂದಿಗೆ ಮೈತ್ರಿ ಮುಂದು ವರೆಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವ ದಲ್ಲಿ ಬಿಜೆಪಿ ನಾಯಕರು ನಿನ್ನೆಯಷ್ಟೇ ಸಾ.ರಾ. ಮಹೇಶ್ ಅವರನ್ನು ಭೇಟಿ ಮಾಡಿ, ಮೈತ್ರಿಯಾಗಲು ಕೇಳಿದ್ದಾರೆ. ಇಂದು ಸಾ.ರಾ. ಮಹೇಶ್ ತಮ್ಮ ಪಕ್ಷದ ಕಾರ್ಪೊರೇಟರ್‍ಗಳು ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಿಸಿ, ಅದನ್ನು ಪಕ್ಷದ ನಾಯಕರಿಗೆ ತಲುಪಿಸಿದ್ದಾರೆ. ಕಾಂಗ್ರೆಸ್‍ನ ಸ್ಥಳೀಯ ನಾಯಕರು ಇನ್ನೆರಡು ದಿನಗಳಲ್ಲಿ ಸಾರಾ ಅವರನ್ನು ನೇರವಾಗಿ ಭೇಟಿಯಾಗಿ ಚರ್ಚಿಸುವ ನಿರೀಕ್ಷೆ ಯಿದೆ. ಮೈತ್ರಿ ಸಂಬಂಧ ಸೋಮವಾರ ನಿರ್ಧಾರ ತಿಳಿಸುವುದಾಗಿ ಸಾರಾ, ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ. ಆದರೂ ಆ.25ರಂದು ಮೇಯರ್ ಚುನಾವಣೆ ನಡೆಯಲಿದ್ದು, ಹಿಂದಿನ ದಿನ `ಮೈತ್ರಿ’ ವಿಚಾರ ಸ್ಪಷ್ಟವಾಗಬಹುದು ಎನ್ನಲಾಗುತ್ತಿದೆ.

Translate »