ಮೈಸೂರು-ನಂ.ಗೂಡು ಹೆದ್ದಾರಿ ಟೋಲ್ ವಸೂಲಿ ಸಿಬ್ಬಂದಿ ಹತ್ಯೆ ಹಿನ್ನೆಲೆ ಟೋಲ್ ಪ್ಲಾಜಾದಲ್ಲಿ ಹೆಚ್ಚಿನ ಭದ್ರತೆಗೆ ಮೈಸೂರು ಎಸ್ಪಿ ಸೂಚನೆ
ಮೈಸೂರು

ಮೈಸೂರು-ನಂ.ಗೂಡು ಹೆದ್ದಾರಿ ಟೋಲ್ ವಸೂಲಿ ಸಿಬ್ಬಂದಿ ಹತ್ಯೆ ಹಿನ್ನೆಲೆ ಟೋಲ್ ಪ್ಲಾಜಾದಲ್ಲಿ ಹೆಚ್ಚಿನ ಭದ್ರತೆಗೆ ಮೈಸೂರು ಎಸ್ಪಿ ಸೂಚನೆ

October 14, 2020

ಮೈಸೂರು, ಅ.13(ಆರ್‍ಕೆ)- ಮೈಸೂರು-ನಂಜನ ಗೂಡು ಹೆದ್ದಾರಿಯ ಟೋಲ್ ಪ್ಲಾಜಾ ಸಿಬ್ಬಂದಿಗೆ ಭದ್ರತೆ ಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಅವರು ಪ್ಲಾಜಾ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡಿ, ನಾಲ್ವರು ಯುವಕರ ಗುಂಪೊಂದು ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಸೋಮ ವಾರ ನಂಜನಗೂಡು ಹೆದ್ದಾರಿಯ ಕೆಎನ್ ಹುಂಡಿ ಬಳಿಯ ಟೋಲ್ ಪ್ಲಾಜಾಗೆ ಭೇಟಿ ನೀಡಿ ಸ್ಥಳ ಪರಿಶೀ ಲಿಸಿದ ಅವರು, ಅಲ್ಲಿ ಗುತ್ತಿಗೆದಾರರು ಒದಗಿಸಿರುವ ಭದ್ರತಾ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ದಿನಕ್ಕೆ ಸಾವಿರಾರು ವಾಹನಗಳು ಓಡಾಡುವ ಹೆದ್ದಾರಿ ಟೋಲ್ ಸಂಗ್ರಹ ಬೂತ್‍ಗೆ ಒಂದು ಪಾಳಿಯಲ್ಲಿ ಕೇವಲ ನಾಲ್ವರು ಭದ್ರತಾ ಸಿಬ್ಬಂದಿ ಮಾತ್ರವೇ ಒದಗಿಸಿರುವುದು ಸರಿಯಲ್ಲ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಪ್ಲಾಜಾ ಸಿಬ್ಬಂದಿಯ ರಕ್ಷಣೆ ದೃಷ್ಟಿಯಿಂದ ಮತ್ತಷ್ಟು ಸಂಖ್ಯೆಯ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಎಸ್ಪಿ ರಿಷ್ಯಂತ್ ಅವರು ಟೋಲ್ ವಸೂಲಿ ಮಾಡುವ ಗುತ್ತಿಗೆ ದಾರ ಸಂಸ್ಥೆ ಮುಖ್ಯಸ್ಥರಿಗೆ ಖಡಕ್ ಸೂಚನೆ ನೀಡಿದರು.

ಪ್ಲಾಜಾದ ಸುಂಕ ವಸೂಲಿ ಕೌಂಟರ್‍ಗಳು, ಸಿಸಿ ಕ್ಯಾಮರಾ, ವಾಹನ ನಿಲ್ಲಿಸುವ ಗೇಟ್‍ಗಳ ಕಾರ್ಯನಿರ್ವಹಣೆ, ಸಿಬ್ಬಂದಿಗೆ ಒದಗಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದ ಅವರು, ರಾತ್ರಿಯಿಡೀ ಸಿಬ್ಬಂದಿ ಕಾರ್ಯ ನಿರ್ವಹಿಸ ಬೇಕಾಗಿರುವುದರಿಂದ ಅವರ ರಕ್ಷಣೆಗಾಗಿ ಅಗತ್ಯವಿರುವ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಇದೇ ವೇಳೆ ಸಲಹೆ ನೀಡಿ ದರು. ಈ ಕುರಿತು `ಮೈಸೂರು ಮಿತ್ರ’ನಲ್ಲಿ ಪ್ರತಿಕ್ರಿಯಿಸಿದ ರಿಷ್ಯಂತ್, ಟೋಲ್ ಸಂಗ್ರಹಿಸಲು ಗುತ್ತಿಗೆ ಪಡೆದಿರುವ ಸಂಸ್ಥೆಯವರೇ ಪ್ಲಾಜಾಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕು. ಅಲ್ಲಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗದು ಎಂದರು. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ದಾಗ ಕೇವಲ ನಾಲ್ವರು ಸೆಕ್ಯುರಿಟಿ ಗಾರ್ಡ್‍ಗಳನ್ನು ನೇಮಿಸಿರುವುದು ಕಂಡುಬಂತು. ತಕ್ಷಣ ಟೋಲ್ ಪ್ಲಾಜಾ ವ್ಯವಸ್ಥಾಪಕ ರಾಘವೇಂದ್ರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಪರಿಂಟೆಂಡಿಂಗ್ ಇಂಜಿನಿಯರ್ ಶ್ರೀಧರ್ ಅವರನ್ನು ಕರೆಸಿ ಮಾತನಾಡಿದ್ದೇನೆ ಎಂದರು.

ಪ್ಲಾಜಾದಲ್ಲಿ ಟೋಲ್ ವಸೂಲಿ ಮಾಡುವ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ಆ ಮಾರ್ಗ ಬರುವ ವಾಹನ ಚಾಲಕರೊಂ ದಿಗೆ ಸೌಜನ್ಯದಿಂದ ವರ್ತಿಸಿ, ಆದಾಗ್ಯೂ ಸುಂಕ ಕೊಡಲು ನಿರಾಕರಿಸಿ ಗಲಾಟೆ ಮಾಡಿದರೆ ವ್ಯತಿರಿಕ್ತವಾಗಿ ಮಾತನಾಡಿ ಜಟಾಪಟಿ ಮಾಡಿಕೊಳ್ಳುವ ಬದಲು ಅಂತಹವರನ್ನು ಕಳುಹಿಸಿಬಿಡಿ. ತಕ್ಷಣವೇ ಪೊಲೀಸರಿಗೆ ಪೋನ್ ಮಾಡಿದರೆ ನಾವು ಸ್ಥಳಕ್ಕೆ ಬಂದು ಸಿಸಿಟಿವಿ ಫುಟೇಜ್ ಪರಿಶೀಲಿಸಿ, ಅದರಲ್ಲಿ ದಾಖಲಾಗಿರುವ ಚಿತ್ರಣದ ಆಧಾರದ ಮೇಲೆ ನಿಯಮ ಉಲ್ಲಂಘಿಸಿದ ವಾಹನ ಚಾಲಕರನ್ನು ಪತ್ತೆ ಮಾಡಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೇನೆ.

ಸುಂಕ ಪಾವತಿಸದಿದ್ದರೆ ಕೇವಲ 50 ರೂ. ಮಾತ್ರ ನಷ್ಟವಾಗುತ್ತದೆ. ಅದಕ್ಕಾಗಿ ಜಗಳ ಮಾಡಿದರೆ ಸಿಬ್ಬಂದಿ ಪ್ರಾಣವೇ ಹೋಗುವ ಸಂಭವವಿರುತ್ತದೆ. ಆದ್ದರಿಂದ ಅಂತಹ ಗಲಾಟೆ ಸಂದರ್ಭ ಸೃಷ್ಟಿಯಾದರೆ ಪೊಲೀಸರಿಗೆ ಮಾಹಿತಿ ನೀಡಬೇಕೇ ಹೊರತು, ಜೋರಾಗಿ ಕೂಗಾಡಿ ರಂಪ ಮಾಡಿ ದ್ವೇಷ ಉಂಟಾಗುವಂತೆ ಮಾಡಬಾರದೆಂದು ಸಿಬ್ಬಂದಿಗೆ ಮನವರಿಕೆ ಮಾಡಿ ಎಂದು ಸಲಹೆ ನೀಡಿದ್ದೇನೆ ಎಂದರು. ನಮ್ಮ ಠಾಣಾ ಪೊಲೀಸರು, ಹೆದ್ದಾರಿ ಪೆಟ್ರೋಲ್ ವಾಹನ ಸಿಬ್ಬಂದಿ ಸಹ ಗಸ್ತು ತಿರುಗಿ ಆಗಿಂದಾಗ್ಗೆ ಟೋಲ್ ಪ್ಲಾಜಾಗೆ ಬಂದು ಹೋಗುತ್ತಾರೆ. ಆದರೆ ದಿನದ 24 ಗಂಟೆಯೂ ಪೊಲೀಸರನ್ನು ನಿಯೋಜಿಸಿ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಏSISಈ) ಯಿಂದ ಅಣೆಕಟ್ಟು, ವಿಮಾನ ನಿಲ್ದಾಣ, ಇಸ್ರೋದಂತಹ ಸರ್ಕಾರಿ ಸ್ವಾಮ್ಯದ ಆಸ್ತಿಗಳಿಗೆ ಭದ್ರತೆ ಒದಗಿಸ ಲಾಗುತ್ತದೆಯೇ ಹೊರತು, ಖಾಸಗಿ ಸಂಸ್ಥೆಗಳು, ಟೆಂಡರ್ ಮೂಲಕ ಕಾರ್ಯ ನಿರ್ವಹಿಸು ತ್ತಿರುವ ಖಾಸಗಿ ಸಿಬ್ಬಂದಿಗೆ ಪೊಲೀಸ್ ಭದ್ರತೆ ನೀಡಲು ಸಾಧ್ಯವಿಲ್ಲ ಎಂಬುದನ್ನು ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಮನದಟ್ಟು ಮಾಡಿದ್ದೇನೆ ಎಂದು ರಿಷ್ಯಂತ್ ಹೇಳಿದರು.

ಟೋಲ್ ಸುಂಕ ವಸೂಲಿ ಮಾಡುತ್ತಿರುವುದಕ್ಕೆ ಈ ಭಾಗದ ಕೆಲ ಸ್ಥಳೀಯರಲ್ಲಿ ಮೊದಲೇ ಅಸಮಧಾನ ಇದೆ. ಪರಿಸ್ಥಿತಿ ಸರಿದೂಗಿಸಿಕೊಂಡು ಸಾವಧಾನದಿಂದ ಕೆಲಸ ಮಾಡಬೇಕೇ ಹೊರತು, ಪ್ರತಿನಿತ್ಯ ಗಲಾಟೆ ಮಾಡಿಕೊಳ್ಳುವುದು ಆರೋಗ್ಯಕರವಲ್ಲ ಎಂಬುದನ್ನು ಅವರಿಗೆ ವಿವರಿಸಿ ಹೇಳಿದ್ದೇನೆ ಎಂದ ಅವರು, ಭಾನುವಾರದ ಘಟನೆ ಹಿನ್ನೆಲೆಯಲ್ಲಿ ಪ್ಲಾಜಾ ಬಳಿಗೆ ನಿರಂತರವಾಗಿ ಭೇಟಿ ನೀಡಿ ನಿಗಾ ವಹಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ರೈತರ ಉತ್ಪನ್ನ ಸಾಗಿಸುವ ವಾಹನಗಳು ಟೋಲ್ ಪಾವತಿಸುತ್ತಿಲ್ಲ
ಮೈಸೂರು, ಅ.13(ಆರ್‍ಕೆ)- ರೈತರ ಉತ್ಪನ್ನಗಳನ್ನು ಸಾಗಿಸುವ ವಾಹನಗಳ ಚಾಲಕರು ಹೆದ್ದಾರಿ ಟೋಲ್ ಪಾವತಿಸುತ್ತಿಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಸೂಪ ರಿಂಟೆಂಡಿಂಗ್ ಇಂಜಿನಿಯರ್ ಶ್ರೀಧರ್ ತಿಳಿಸಿದ್ದಾರೆ.

ಮೈಸೂರು-ನಂಜನಗೂಡು ಹೆದ್ದಾರಿಯ ಟೋಲ್ ಪ್ಲಾಜಾದ ಸುಂಕ ವಸೂಲಿ ಮಾಡುತ್ತಿದ್ದ ಸಿಬ್ಬಂದಿ ಹತ್ಯೆ ಕುರಿತಂತೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಕಬ್ಬು ಸಾಗಣೆ ಲಾರಿ, ಸೊಪ್ಪು, ತರಕಾರಿ ಸಾಗಿ ಸುವ ವಾಹನಗಳಿಗೆ ಸುಂಕವನ್ನು ಅವುಗಳ ಚಾಲಕರು ಪಾವತಿಸುತ್ತಿಲ್ಲ. ಟೋಲ್ ಸಿಬ್ಬಂದಿಯೂ ಬಲವಂತ ಮಾಡು ತ್ತಿಲ್ಲ. ಅಲ್ಲದೇ, ಸ್ಥಳೀಯ ದ್ವಿಚಕ್ರ ವಾಹನ ಸವಾರರು, ರೈತ ರಿಂದಲೂ ಟೋಲ್ ಸುಂಕ ವಸೂಲಿ ಮಾಡುತ್ತಿಲ್ಲ ಎಂದರು.

ಹೆದ್ದಾರಿ ಅಭಿವೃದ್ಧಿಪಡಿಸಿ ನಿರ್ವಹಣೆಯನ್ನೂ ಮಾಡ ಬೇಕಾಗಿರುವುದರಿಂದ ಕೇಂದ್ರ ಸರ್ಕಾ ರವು ಟೋಲ್ ಫೀ ಸಂಗ್ರಹಿಸಲು ಖಾಸಗಿ ಗುತ್ತಿಗೆದಾರರಿಗೆ ದೇಶಾ ದ್ಯಂತ ಜವಾಬ್ದಾರಿ ವಹಿಸಿದೆ. ಸಿಬ್ಬಂದಿಯನ್ನು ನಿಯೋಜಿಸಿ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ ಈ ರೀತಿಯ ನಷ್ಟವಾಗುತ್ತಿದ್ದರೆ ಅವರ್ಯಾರೂ ಈ ಕೆಲಸ ಮಾಡುವು ದಿಲ್ಲ ಎಂದರು. ಅದರ ಜೊತೆಗೆ ಸುತ್ತಮುತ್ತಲಿನ ಗ್ರಾಮ ದವರು, ಸ್ಥಳೀಯ ಮುಖಂಡರು, ಕೆಲ ಸರ್ಕಾರಿ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ವಾಹನಗಳಿಗೆ ಪಾಸ್ ಕೊಡಿಸಬೇಕೆಂದು ಕೇಳುತ್ತಿದ್ದಾರೆ. ಆದರೆ ನಮ್ಮ ಹಂತದಲ್ಲಿ ಪಾಸ್ ವಿತರಿಸಲು ಅಧಿಕಾರವಿಲ್ಲ ಎಂದು ಶ್ರೀಧರ್ ನುಡಿದರು. ಟೋಲ್ ಪ್ಲಾಜಾ ಸಿಬ್ಬಂದಿ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು, ಒಂದು ವೇಳೆ ಅಹಿತಕರ ಘಟನೆಗಳು ನಡೆಯುವ ಸಂಭವ ಉಂಟಾದಲ್ಲಿ ಗಲಾಟೆಗೆ ಮುಂದಾಗದೇ ಅಂತಹವರನ್ನು ಕಳುಹಿಸಿ ಎಂದು ಅಲ್ಲಿನ ವ್ಯವಸ್ಥಾಪಕರಿಗೆ ಈ ಮೊದಲಿನಿಂದಲೇ ಹೇಳುತ್ತಿದ್ದೇವೆ. ಅಲ್ಲದೆ, ಸಾಕಷ್ಟು ಸೆಕ್ಯುರಿಟಿ ಗಾರ್ಡ್‍ಗಳನ್ನು ನಿಯೋಜಿಸುವಂತೆಯೂ ಸಲಹೆ ನೀಡಲಾಗಿದೆ. ಆದರೆ ವಾಹನ ಸುಂಕ ಕೊಡಲು ನಿರಾಕರಿಸುವುದಲ್ಲದೇ, ಸುಂಕ ವಸೂಲಿ ಮಾಡುವ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡುವುದು ಅಮಾನವೀಯ ಕೃತ್ಯ ಎಂದು ಶ್ರೀಧರ್ ತಿಳಿಸಿದರು.

 

Translate »