ಮೈಸೂರು-ನಂಜನಗೂಡು ಹೆದ್ದಾರಿ  ಆರು ಪಥ ರಸ್ತೆಯಾಗಿ ಮೇಲ್ದರ್ಜೆಗೆ
ಮೈಸೂರು

ಮೈಸೂರು-ನಂಜನಗೂಡು ಹೆದ್ದಾರಿ ಆರು ಪಥ ರಸ್ತೆಯಾಗಿ ಮೇಲ್ದರ್ಜೆಗೆ

June 9, 2022

ಮೈಸೂರು,ಜೂ.8(ಪಿಎಂ)- ರಾಷ್ಟ್ರೀಯ ಹೆದ್ದಾರಿ-212ರ ಮೈಸೂರು-ನಂಜನಗೂಡು ರಸ್ತೆಯನ್ನು 4 ಪಥದಿಂದ 6 ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದು, ವಿಮಾನ ನಿಲ್ದಾಣಕ್ಕೆ ಸಂಪರ್ಕ ಹಾಗೂ ಕಡಕೊಳ ಮತ್ತು ತಾಂಡವಪುರ ಕೈಗಾರಿಕಾ ಪ್ರದೇಶಗಳಿಗೆ ಉತ್ತೇಜನ ನೀಡಲು ಈ ರಸ್ತೆ ಅಭಿವೃದ್ಧಿ ಸಹಕಾರಿ ಯಾಗಲಿದೆ. ಬುಧವಾರ ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವರನ್ನು ಖಾಸಗಿ ಹೋಟೆಲ್‍ನಲ್ಲಿ ಭೇಟಿ ಮಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರು ನಗರ ಮತ್ತು ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ಕೋರಿ ಮನವಿ ಸಲ್ಲಿಸಿದರು. ಇದಕ್ಕೆ ಕೇಂದ್ರ ಸಚಿವರು ಒಪ್ಪಿಗೆ ನೀಡಿದರು. ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಮಂಡಕಳ್ಳಿ ಮೈಸೂರು ವಿಮಾನ ನಿಲ್ದಾಣವೂ ಇದೆ. ಈ ವಿಮಾನ ನಿಲ್ದಾಣದಿಂದ ಹಲವು ವಿಮಾನಗಳು ಹಾರಾಟ ನಡೆಸುತ್ತವೆ. ಇದಲ್ಲದೆ, ರನ್‍ವೇ ವಿಸ್ತರಿಸುವ ಯೋಜನೆಯೂ ಇದೆ. ಜೊತೆಗೆ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಯೂ ಇದೆ. ಜೊತೆಗೆ ಊಟಿ ಮತ್ತು ಕೋಝಿಕ್ಕೋಡ್ ಕಡೆಗೆ ಕೈಗಾರಿಕಾ, ವಾಣಿಜ್ಯ ವಾಹನಗಳು ಮತ್ತು ಪ್ರವಾಸಿಗರ ವಾಹನಗಳು ಈಗಾಗಲೇ ಇಲ್ಲಿ ಸಂಚರಿಸುತ್ತಿವೆ. ಹಾಗಾಗಿ 6 ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕೆಂದು ಸಂಸದರು ಕೋರಿದ್ದರು. ಇದನ್ನು ಸಚಿವರು ಅನುಮೋದಿಸಿದ್ದಾರೆ. ಮೈಸೂರು ನಗರದ ಕುಕ್ಕರಹಳ್ಳಿ ಕೆರೆ ಬಳಿ ಬೋಗಾದಿ ರಸ್ತೆಯಲ್ಲಿರುವ ಮೈಸೂರು-ಚಾಮರಾಜನಗರ ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಕೆಳಸೇತುವೆ ನಿರ್ಮಾಣಕ್ಕೂ ಸಚಿವರು ಅನುಮೋದನೆ ನೀಡಿದ್ದಾರೆ. ಚೆನ್ನರಾಯಪಟ್ಟಣ-ಹೊಳೆನರಸೀಪುರ-ಅರಕಲಗೂಡು-ಕೊಡ್ಲಿಪೇಟೆ-ಮಡಿಕೇರಿ-ವಿರಾಜಪೇಟೆ ಮಾರ್ಗವಾಗಿ ಮಾಕುಟ್ಟ (ಕೇರಳ ಬಾರ್ಡರ್) ಸಂಪರ್ಕಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಿ, ಅಭಿವೃದ್ಧಿಪಡಿಸುವಂತೆ ಸಂಸದರು ಸಲ್ಲಿಸಿದ ಮನವಿಗೆ ಸಚಿವರು ಸಮ್ಮತಿ ಸೂಚಿಸಿದರು. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ-373ರ ಹಾಸನ-ಬೇಲೂರು ಹಾಗೂ ಎಡೆಗೌಡನಹಳ್ಳಿ-ಬಿಳಿಕೆರೆ ರಸ್ತೆಯನ್ನು 2 ಪಥದಿಂದ 4 ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲು ಸಚಿವರು ಅನುಮೋದನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ-275ರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪಟ್ಟಣ ವ್ಯಾಪ್ತಿಯಲ್ಲಿ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಸಚಿವರು ಅನು ಮೋದಿಸಿದ್ದಾರೆ. ಸದರಿ ವ್ಯಾಪ್ತಿಯಲ್ಲಿ ಹೆದ್ದಾರಿ ತುಂಬಾ ಕಿರಿದಾಗಿದ್ದು, ಸ್ಥಳೀಯವಾಗಿಯೂ ಸಂಚಾರ ದಟ್ಟಣೆ ಹೆಚ್ಚಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಪಿರಿಯಾಪಟ್ಟಣ ಪಟ್ಟಣ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕಾಗಿ ಸದರಿ ರಸ್ತೆ ಅಗಲೀಕರಣಗೊಳಿಸಿ, ಅಭಿವೃದ್ಧಿ ಪಡಿಸುವುದು ಅತೀ ಅಗತ್ಯ ಎಂದು ಸಂಸದರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

Translate »