ಮೈಸೂರು ಪಾಲಿಕೆ ಎಡವಟ್ಟಿಗೆ ಸಾರ್ವಜನಿಕರ ತೆರಿಗೆ ಹಣ ವ್ಯರ್ಥ
ಮೈಸೂರು

ಮೈಸೂರು ಪಾಲಿಕೆ ಎಡವಟ್ಟಿಗೆ ಸಾರ್ವಜನಿಕರ ತೆರಿಗೆ ಹಣ ವ್ಯರ್ಥ

January 5, 2022

ಮೈಸೂರು, ಜ.4(ಎಂಕೆ)- ಮೈಸೂರು ಮಹಾನಗರಪಾಲಿಕೆ ಹಾಗೂ ಮಳಿಗೆ ದಾರರ ನಡುವಿನ ಜಟಾಪಟಿಗೆ ಖರ್ಚಾ ದದ್ದು ಸಾರ್ವಜನಿಕರ ದುಡ್ಡು….!

ನಗರದ ಮಕ್ಕಾಜಿ ಚೌಕದಲ್ಲಿ 8 ವರ್ಷ ಗಳ ಹಿಂದೆ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ‘ಮಕ್ಕಾಜಿ ಚೌಕ ವಾಣಿಜ್ಯ ಸಂಕೀರ್ಣ’ ನಯಾ ಪೈಸೆಯ ಆದಾಯಕ್ಕೂ ಮುನ್ನವೇ ನಿರ್ವಹಣೆ ಇಲ್ಲದೆ ಅಲ್ಲಲ್ಲಿ ಕುಸಿದು ಬೀಳುತ್ತಿದೆ. ಪಾಲಿಕೆಗೆ ಆದಾಯ ನೀಡದ ವಾಣಿಜ್ಯ ಸಂಕೀರ್ಣ ಮಳಿಗೆದಾರರಿಗೆ ಲಾಭವನ್ನೂ ತರದೆ ಬಣಗುಡುತ್ತಿದ್ದು, ಜಟಾಪಟಿಯ ನಡುವೆ ಈ ಘನಕಾರ್ಯಕ್ಕೆ ಖರ್ಚಾಗಿದ್ದು ಮಾತ್ರ ಸಾರ್ವಜನಿಕರು ನೀಡಿದ ತೆರಿಗೆ ಹಣ.

ಬೆಂಗಳೂರಿನ ಮೆ.ಮೆವರಿಕ್ ಹೋಲ್ಡಿಂಗ್ಸ್ ಅಂಡ್ ಇನ್‍ವೆಸ್ಟ್‍ಮೆಂಟ್ ಪ್ರೈ.ಲಿ. ವತಿ ಯಿಂದ 2013ರಲ್ಲಿ ನಿರ್ಮಾಣಗೊಂಡಿ ರುವ ‘ಮಕ್ಕಾಜಿ ಚೌಕ ವಾಣಿಜ್ಯ ಸಂಕೀರ್ಣ’ ದಲ್ಲಿ ತಳ ಮಹಡಿ, ಮೇಲ್ಮಹಡಿ ಹಾಗೂ ಮೊದಲ ಮಹಡಿ ಸೇರಿ 191 ಮಳಿಗೆಗಳಿದ್ದು, ಅವುಗಳಲ್ಲಿ 30ಕ್ಕೂ ಹೆಚ್ಚು ಮಳಿಗೆಗಳು ಖಾಲಿ ಬಿದ್ದಿವೆ. ಮಳಿಗೆಗಳನ್ನು ಪಡೆದ ಕೆಲವರು ಬೇರೆಯವರಿಗೆ ಮಳಿಗೆಗಳನ್ನು ಬಾಡಿಗೆಗೆ ನೀಡಿ, ಆದಾಯ ಗಳಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಬಾಡಿಗೆ ಜಟಾಪಟಿ: ವಾಣಿಜ್ಯ ಸಂಕೀ ರ್ಣದ ಮಳಿಗೆಗಳಿಗೆ ದುಪ್ಪಟ್ಟು ಬಾಡಿಗೆ ಯನ್ನು ನಗರ ಪಾಲಿಕೆ ಕೇಳುತ್ತಿದೆ ಎಂದು ನ್ಯಾಯಾಲಯ ಮೆಟ್ಟಿಲೇರಿರುವ ಮಳಿಗೆ ದಾರರು ಕಳೆದ ಆರೇಳು ವರ್ಷದಿಂದ ಬಾಡಿಗೆ ರಹಿತವಾಗಿ ವ್ಯಾಪಾರ-ವಹಿ ವಾಟು ನಡೆಸುತ್ತ್ತಿದ್ದಾರೆ. ಇಂದಿನ ಮಾರು ಕಟ್ಟೆ ಆಧಾರದ ಮೇಲೆ ಬಾಡಿಗೆ ನೀಡಬೇಕು ಎನ್ನುತ್ತಿರುವ ಪಾಲಿಕೆ ಹಾಗೂ ಮಳಿಗೆ ದಾರರ ನಡುವಿನ ಜಟಾಪಟಿ ಯಾವಾಗ ಕೊನೆಯಾಗುತ್ತದೆಯೋ ಎನ್ನುವಂತಾಗಿದೆ.

ಛಾವಣಿ ಕುಸಿಯುತ್ತಿದೆ: ನಿರ್ವಹಣೆ ಇಲ್ಲದೆ ಕಟ್ಟಡದ ಹಲವೆಡೆ ಛಾವಣಿ ಕುಸಿದು ಬೀಳುತ್ತಿದ್ದು, ಕಟ್ಟದ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ. ಅಲ್ಲದೆ ಕಟ್ಟಡ ಸುತ್ತಲೂ ಆಳೆತ್ತರ ಗಿಡ-ಗಂಟಿಗಳು ಬೆಳೆದು ನಿಂತಿವೆ. ಎಲ್ಲೆಂದರಲ್ಲಿ ಕಸ ಬಿದ್ದಿದ್ದು, ವ್ಯಾಪಾರ-ವಹಿವಾಟು ನಡೆಸುವವರು ತಮ್ಮ ತಮ್ಮ ಮಳಿಗೆ ಮುಂದೆ ಅಚ್ಚುಕಟ್ಟಾಗಿ ಇಟ್ಟುಕೊಂಡಿ ದ್ದಾರೆಯೇ ಹೊರತು ಕಟ್ಟಡದ ನಿರ್ವ ಹಣೆಗೆ ತಲೆಕೆಡಿಸಿಕೊಂಡಿಲ್ಲ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಯಾವ ಮೂಲಭೂತ ಸೌಕರ್ಯವಿಲ್ಲದಿದ್ದರೂ ವ್ಯಾಪಾರ-ವಹಿವಾಟು ನಡೆಯುತ್ತಲೇ ಇದೆ.

ಬಾಡಿಗೆನೇ ಇಲ್ಲ; ಇನ್ನೂ ನಿರ್ವಹಣೆ ಎಲ್ಲಿಂದ: ಮಕ್ಕಾಜಿ ಚೌಕ ವಾಣಿಜ್ಯ ಸಂಕೀರ್ಣದಲ್ಲಿರುವ ನೂರಾರು ಮಳಿಗೆ ದಾರರು ಇಲ್ಲಿಯವರೆಗೆ ಬಾಡಿಗೆ ಕಟ್ಟಿಲ್ಲ. ಕಟ್ಟಡವನ್ನು ನಿರ್ವಹಣೆ ಮಾಡಿ, ಅಚ್ಚು ಕಟ್ಟಾಗಿ ಇಟ್ಟುಕೊಳ್ಳಿ ಎಂದರೆ ಹೇಗೆ ಸಾಧ್ಯ. ಬಾಡಿಗೆಯೇ ಇಲ್ಲ, ಇನ್ನೂ ನಿರ್ವಹಣೆ ಎಲ್ಲಿಂದ ಮಾಡೋದು ಎಂದು ನಗರ ಪಾಲಿಕೆ ಕಂದಾಯ ವಿಭಾಗದ ಸಿಬ್ಬಂದಿ ಯೊಬ್ಬರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮಳಿಗೆಗಳ ವಿಸ್ತಿರ್ಣಕ್ಕೆ ಅನುಗುಣವಾಗಿ ಬಾಡಿಗೆ ದರ ನಿಗದಿಪಡಿಸಿ, ಕಟ್ಟುವಂತೆ ಮಳಿಗೆದಾರರಿಗೆ ನೋಟಿಸ್ ನೀಡಿದ್ದೆವು. ಆದರೆ ಮಳಿಗೆದಾರರು ನೋಟಿಸ್ ಇಟ್ಟು ಕೊಂಡು ಕೋರ್ಟ್‍ಗೆ ಹೋಗಿದ್ದಾರೆ. ಪಾಲಿಕೆಯಿಂದಲೂ ನ್ಯಾಯಾಲಯಕ್ಕೆ ಅಗತ್ಯ ಮಾಹಿತಿ ನೀಡಿದ್ದೇವೆ. ಈ ಸಮಸ್ಯೆ ಯಾವಾಗ ಬಗೆಹರಿಯುತ್ತದೆ ಎಂಬುದೇ ತಿಳಿಯುತ್ತಿಲ್ಲ ಎಂದರು.

ಹೇಳಿಕೊಳ್ಳುವ ವ್ಯಾಪಾರವಿಲ್ಲ: ಈ ಹಿಂದೆ ಇದ್ದ ಕಟ್ಟಡದ ಮಳಿಗೆಗಳಿಗೆ ನೀಡು ತ್ತಿದ್ದ ಬಾಡಿಗೆಗಿಂತ ಸ್ವಲ್ಪ ಹೆಚ್ಚಾಗಿ ಕಟ್ಟಿ ಎಂದರೆ ಕಟ್ಟಲು ಸಿದ್ಧರಿದ್ದೇವೆ. ಆದರೆ ಏಕಾಏಕಿ ಲಕ್ಷಗಟ್ಟಲೆ ಹಣ ಕಟ್ಟಿ ಎಂದರೆ ಎಲ್ಲಿಂದ ತರುವುದು. ಯಾವ ಪುಣ್ಯಾತ್ಮ ಈ ಕಟ್ಟಡ ಕಟ್ಟಿಸಿದ್ದಾನೋ ಗೊತ್ತಿಲ್ಲ. ಇತ್ತ ಜನರೆ ಬರುವುದಿಲ್ಲ. ನಮ್ಮ ಮಳಿಗೆಗಳು ರಸ್ತೆಯ ಕಡೆ ಕಾಣದಂತೆ ಕಟ್ಟಿದ್ದಾರೆ. ಐದಾರು ವರ್ಷ ದಿಂದ ಇಲ್ಲಿದ್ದರೂ ವ್ಯಾಪಾರವಿಲ್ಲದೆ ನಷ್ಟ ದಲ್ಲಿಯೇ ಜೀವನ ಸಾಗಿಸುತ್ತಿದ್ದೇವೆ ಎಂದು ಮಕ್ಕಾಜಿ ಚೌಕ ವಾಣಿಜ್ಯ ಸಂಕೀರ್ಣದಲ್ಲಿ ರುವ ಮಳಿಗೆದಾರರೊಬ್ಬರು ತಿಳಿಸಿದರು.

ಖರ್ಚಾದದ್ದು ಸಾರ್ವಜನಿಕರ ದುಡ್ಡು: ಇತ್ತ ಬಾಡಿಗೆ ಕಟ್ಟದೆ ಹಲವರು ವ್ಯಾಪಾರ -ವಹಿವಾಟು ನಡೆಸುತ್ತಿದ್ದರೆ, ಕಟ್ಟಡ ನಿರ್ಮಿ ಸಿದ ಪಾಲಿಕೆ ಬಾಡಿಗೆ ವಸೂಲಿಗೆ ಬೇರೆ ದಾರಿಯೇ ಇಲ್ಲದಂತೆ ವರ್ತಿಸುತ್ತಿದೆ. ಪಾಲಿಕೆ ಮತ್ತು ಮಳಿಗೆದಾರರ ನಡುವೆ ಖರ್ಚಾ ದದ್ದು ಸಾರ್ವಜನಿಕರ ತೆರಿಗೆ ಹಣ. ಪಾಲಿಕೆ ಅವ್ಯವಸ್ಥಿತ ಯೋಜನೆಗಳಿಂದಾಗಿ ಸಾರ್ವ ಜನಿಕರ ಹಣ ಪೋಲಾಗುತ್ತಿದೆ ಎಂದು ಪ್ರಜ್ಞಾವಂತ ನಾಗರಿಕರು ದೂರಿದ್ದಾರೆ.

ಮಕ್ಕಾಜಿ ಚೌಕ ವಾಣಿಜ್ಯ ಸಂಕೀರ್ಣದಲ್ಲಿ ಅನಧಿಕೃತವಾಗಿ ಮಳಿಗೆಗಳನ್ನು ಬಳಕೆ ಮಾಡುತ್ತಿದ್ದವರನ್ನು ಖಾಲಿ ಮಾಡಿಸಿ, ಸುಮಾರು 38 ಮಳಿಗೆಗಳಿಗೆ ಬೀಗ ಹಾಕಿದ್ದೇವೆ. ಎಷ್ಟು ವರ್ಷದಿಂದ ಬಾಡಿಗೆ ಬಂದಿಲ್ಲ ಎಂಬುದನ್ನು ಮತ್ತೆ ಪರಿಶೀಲನೆ ನಡೆಸಲಾಗುವುದು. ಪಾಲಿಕೆಗೆ ಸೇರಿದ ವಾಣಿಜ್ಯ ಸಂಕೀರ್ಣಗಳಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವ ಸುಮಾರು 200 ಜನರಿಗೆ ನೋಟಿಸ್ ಕೊಟ್ಟಿದ್ದೇವೆ. ಮಳಿಗೆಗಳಿಗೆ ಬಾಡಿಗೆ ಹೆಚ್ಚಳ ಮಾಡುವ ಕುರಿತು ಕೌನ್ಸಿಲ್ ಮುಂದೆ ಚರ್ಚೆಗೆ ಇಟ್ಟಿದ್ದೇವೆ. ಬಾಡಿಗೆ ಕಟ್ಟದೆ ಇರುವವರಿಗೆ ನೋಟಿಸ್ ಕೊಟ್ಟು, ಖಾಲಿ ಮಾಡಿಸುತ್ತಿದ್ದೇವೆ.

Translate »