ಮೈಸೂರು ರಿಂಗ್ ರಸ್ತೆಯ  ಸ್ವಚ್ಛತೆ, ದೀಪದ ವ್ಯವಸ್ಥೆಗೆ ಕ್ರಮ
ಮೈಸೂರು

ಮೈಸೂರು ರಿಂಗ್ ರಸ್ತೆಯ ಸ್ವಚ್ಛತೆ, ದೀಪದ ವ್ಯವಸ್ಥೆಗೆ ಕ್ರಮ

March 10, 2021

ಸಂದೇಶ್‍ಗೆ ಸಚಿವ ಭೈರತಿ ಬಸವರಾಜ್ ಭರವಸೆ
ಬೆಂಗಳೂರು,ಮಾ.9-ಮೈಸೂರು ನಗರದ ರಿಂಗ್ ರಸ್ತೆಯ ಎರಡೂ ಬದಿಯಲ್ಲಿ ಎಸೆದಿರುವ ತ್ಯಾಜ್ಯಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸದರಿ ಜಾಗದಲ್ಲಿ ಮತ್ತೆ ತ್ಯಾಜ್ಯ ಸುರಿಯುವವರ ವಿರುದ್ಧ ದಂಡ ವಿಧಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರಿಂಗ್ ರಸ್ತೆ ಪಕ್ಕ ಕಸ ಸುರಿಯುವವರನ್ನು ಪತ್ತೆ ಹಚ್ಚಲು ನಗರ ಪಾಲಿಕೆ ವತಿಯಿಂದ ಸಿ.ಸಿ. ಕ್ಯಾಮರಾ ಅಳ ವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ನಗರದ ರಿಂಗ್ ರಸ್ತೆಯ ಎರಡೂ ಬದಿಯಲ್ಲಿ ಕಸ ಸುರಿದು, ಕಲುಷಿತ ವಾತಾ ವರಣ ಉಂಟುಮಾಡುತ್ತಿರುವುದು ಹಾಗೂ ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೆ ಭಂಗ ತರುತ್ತಿರುವುದನ್ನು ತಡೆಗಟ್ಟುವ ಬಗ್ಗೆ ಸಂದೇಶ್ ನಾಗರಾಜ್ ಅವರು ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಘನ ತ್ಯಾಜ್ಯ ವಿಲೇವಾರಿ ಮಾಡಲು ಸಾತಗಳ್ಳಿ ಬಿ-ವಲಯದಲ್ಲಿ 19.15 ಎಕರೆ ವಿಸ್ತೀರ್ಣದ ಜಾಗವನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಸ್ತಾಂತರಿಸಿಕೊಳ್ಳಲಾಗುತ್ತಿದ್ದು, ಮೈಸೂರು ನಗರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಸಂಸ್ಕರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ರಿಂಗ್‍ರಸ್ತೆಯಲ್ಲಿ ಪ್ರಖರ ದೀಪದ ವ್ಯವಸ್ಥೆ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದು ಹಾಗೂ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕುವ ಬಗ್ಗೆ ಸಂದೇಶ್ ನಾಗರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಿಂಗ್ ರಸ್ತೆಯಲ್ಲಿ ಹಾಲಿ ಇರುವ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಾಯಿಸಿ, ಕೇಂದ್ರೀಕೃತ ಚಾಲನೆ ಮತ್ತು ನಿರ್ವಹಣೆಯುಳ್ಳ ಎಲ್.ಇ.ಡಿ. ದೀಪಗಳನ್ನು ಅಳವಡಿಸುವ ಕಾಮಗಾರಿಯನ್ನು ಮಹಾನಗರ ಪಾಲಿಕೆಯಿಂದ ಕೈಗೊಳ್ಳಲಾಗುತ್ತಿದ್ದು, ಈ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ವಿವರಿಸಿದರು.

Translate »