ಮೈಸೂರು ರಸ್ತೆಗಳಿಗೆ ತಿಂಗಳ ನಂತರ ಅಭಿವೃದ್ಧಿ ಭಾಗ್ಯ
ಮೈಸೂರು

ಮೈಸೂರು ರಸ್ತೆಗಳಿಗೆ ತಿಂಗಳ ನಂತರ ಅಭಿವೃದ್ಧಿ ಭಾಗ್ಯ

May 21, 2022

 ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ಭರವಸೆ
 ರಸ್ತೆ ನಿರ್ಮಿಸಿದವರೆ ೩ ವರ್ಷ ನಿರ್ವಹಣೆ ಮಂತ್ರ ಜಪ
 ಮುಂಗಾರು ನಿರ್ವಹಣೆಗೆ ಸಿಬ್ಬಂದಿ ಸಜ್ಜುಗೊಳಿಸಿರುವ ಘೋಷಣೆ
ಮೈಸೂರು, ಮೇ ೨೦(ಎಸ್‌ಬಿಡಿ)- ಮೈಸೂರು ನಗರದ ರಸ್ತೆಗಳ ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯವನ್ನು ಜೂ.೨೦ರ ನಂತರ ಆರಂಭಿಸುವುದಾಗಿ ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ತಿಳಿಸಿದ್ದಾರೆ.

ನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ರೈಲ್ವೆ ಅಂಡರ್ ಬ್ರಿಡ್ಜ್ನಿಂದ ಬಲ್ಲಾಳ್ ವೃತ್ತ ಮಾರ್ಗವಾಗಿ ಗಾಡಿ ಚೌಕದವರೆಗಿನ ರಸ್ತೆ ಅಭಿವೃದ್ಧಿಗೆ ೧.೭೫ ಕೋಟಿ ರೂ. ಸೇರಿದಂತೆ ಎಸ್‌ಎಫ್‌ಸಿ ಹಾಗೂ ಮುಖ್ಯ ಮಂತ್ರಿಗಳ ವಿಶೇಷ ಅನುದಾನದ ಒಟ್ಟು ೫೦ ಕೋಟಿ ರೂ.ಗಳಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಸ ಲಾಗುವುದು. ರಸ್ತೆ ಮಧ್ಯಭಾಗದಲ್ಲಿ ಪ್ರತಿಫಲಕಗಳ ಅಳವಡಿಕೆ, ಉತ್ತಮ ಫುಟ್‌ಪಾತ್, ಮಳೆ ನೀರು ಹರಿವಿಗೆ ವ್ಯವಸ್ಥೆ ಸೇರಿದಂತೆ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಈಗಾಗಲೇ ಹಣ ಬಿಡುಗಡೆಯಾಗಿದ್ದು, ಕಾಮಗಾರಿಗೆ ಚಾಲನೆ ಸಿಗಬೇಕಾದ ವೇಳೆ ಮಳೆ ಆರಂಭವಾಯಿತು. ನಿರಂತರ ಮಳೆ ಹಾಗೂ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಕಾರಣದಿಂದ ವಿಳಂಬ ವಾಗಿದೆ. ಮಳೆ ಬಿಡುವು ನೀಡಿದರೆ ಜೂ.೨೦ರಿಂದಲೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು. ಪ್ರಮುಖ ರಸ್ತೆಗಳ ಅಭಿವೃದ್ಧಿ ಯನ್ನು ಎಸ್‌ಎಫ್‌ಸಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಕೈಗೊಳ್ಳಲಾಗುತ್ತಿದ್ದು,ವಾರ್ಡ್ನ ಇತರೆ ರಸ್ತೆಗಳ ಗುಂಡಿ ಮುಚ್ಚಲು ತಲಾ ೧೦ ಲಕ್ಷ ರೂ. ಅನುದಾನ ನೀಡಲಾಗಿದೆ. ಈಗಾಗಲೇ ಕೆಲವೆಡೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಅಗ್ರಹಾರ ಹಾಗೂ ಎನ್.ಆರ್.ಮೊಹಲ್ಲಾ ಭಾಗದಲ್ಲಿ ಯುಜಿಡಿ ಸಮಸ್ಯೆಯಿದ್ದು, ೪ ಕೋಟಿ ರೂ. ವೆಚ್ಚದಲ್ಲಿ ಹೊಸ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗುವುದು. ಕುವೆಂಪುನಗರ ಅಪೊಲೋ ಆಸ್ಪತ್ರೆ ಬಳಿಯಿಂದ ಕಾವೇರಿ ಶಾಲೆವರೆಗೆ ೪ ಕೋಟಿ ರೂ. ಅಂದಾಜು ಮೊತ್ತದ ಯುಜಿಡಿ ಪೈಪ್‌ಲೈನ್ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.

೩ ವರ್ಷ ನಿರ್ವಹಣೆ ಕರಾರು: ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರರೇ ೩ ವರ್ಷ ನಿರ್ವಹಣೆ ಮಾಡಬೇಕೆಂದು ಕರಾರು ಮಾಡಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಗುಂಡಿ ಬಿದ್ದರೆ ಗುತ್ತಿಗೆದಾರರೇ ದುರಸ್ತಿಪಡಿಸಬೇಕಿದೆ. ಈಗಾಗಲೇ ಕಾಮಗಾರಿ ಮುಗಿಸಿರುವ ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು.ಮಳೆ ನಿರ್ವಹಣೆಗೆ ಸಜ್ಜು: ಮರ‍್ನಾಲ್ಕು ತಿಂಗಳ ಹಿಂದೆ ಮಳೆಯಿಂದ ಸೃಷ್ಟಿಯಾದ ಅವಾಂತರ ಮರುಕಳಿಸಬಾರದು ಎಂದು ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಉಪಮೇಯರ್, ಆಡಳಿತ ಪಕ್ಷದ ನಾಯಕರು, ಆಯುಕ್ತರು ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಳೆ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಗಳಿಗೆ ಸೂಚಿಸಲಾಗಿದೆ. ಅಭಯ ತಂಡ ಹಾಗೂ ಇಂಜಿನಿಯರ್‌ಗಳು ೨೪/೭ ಕರ್ತವ್ಯಕ್ಕೆ ಸಿದ್ಧರಾಗಿರುವಂತೆ ಆದೇಶಿಸಲಾಗಿದೆ. ಈ ಹಿಂದೆ ಹಾನಿಗೊಳಗಾಗಿದ್ದ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಒಳಚರಂಡಿ ನಿರ್ವಹಣೆಗಾಗಿ ಪ್ರತಿ ವಾರ್ಡ್ಗೆ ಒಂದು ಲಕ್ಷ ರೂ. ಅನುದಾನ ನೀಡಲು ತೀರ್ಮಾನಿಸಲಾಗಿದೆ. ಚರಂಡಿಯಲ್ಲಿ ಹೂಳೆತ್ತಲು ೨ ಮಿನಿ ಎಕ್ಸ್÷್ಲವೇಟರ್‌ಗಳು ಒಂದು ವಾರದಿಂದ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ಅಗತ್ಯವಿರುವ ೧೨ ಜೆಸಿಬಿ, ೭ ಟಿಪ್ಪರ್, ೬೫ ಆಟೋಗಳು ಕೆಲಸ ನಿರ್ವಹಿಸುತ್ತಿದ್ದು, ಇನ್ನೂ ೬೫ ಆಟೋ, ೧೨ ಕಾಂಪ್ಯಾಕ್ಟ್ರ್‌ಗಳು, ೫ ಜೆಸಿಬಿಗಳು ಮೇ.೨೩ರಿಂದ ಹೊಸದಾಗಿ ಕೆಲಸ ಆರಂಭಿಸಲಿವೆ. ಗಾಳಿ-ಮಳೆಯಿಂದ ಹೆಚ್ಚು ಮರಗಳು ಬೀಳುತ್ತಿರುವುದರಿಂದ ಸಶಕ್ತವಲ್ಲದ ಮರಗಳನ್ನು ಗುರುತಿಸಿ, ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

 

ಸಂಸದ ಪ್ರತಾಪ್ ಸಿಂಹ ಅವರನೆರವಿನಿಂದಲೂ ಸಾಕಷ್ಟು ಕೆಲಸವಾಗುತ್ತಿದೆ. ಜನ ಸಣ್ಣ-ಪುಟ್ಟ ಸಮಸ್ಯೆಗಳನ್ನು ಅವರ ಬಳಿ ಹೇಳಿಕೊಂಡಿದ್ದಕ್ಕೆ ಕೋಪದಲ್ಲಿ ಮಾತನಾಡಿರಬಹುದು. ಆದರೆ ನಮ್ಮ ಎಲ್ಲಾ ಕಾರ್ಪೊರೇಟರ್‌ಗಳೂ ವಾರ್ಡ್ನಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಸಹಕಾರವೂ ಚೆನ್ನಾಗಿದೆ. ಇಲ್ಲವಾಗಿದ್ದರೆ ನಗರ ಹೀಗಿರುತ್ತಿರಲಿಲ್ಲ.
-ಸುನಂದಾ ಪಾಲನೇತ್ರ,ಹಂಗಾಮಿ ಮೇಯರ್

Translate »