ಮೈಸೂರಿನ ಸಬರ್ಬನ್ ಸೇರಿ ಜಿಲ್ಲೆಯೆಲ್ಲೆಡೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳ ಅಂಗಡಿ, ಹೋಟೆಲ್‍ಗಳ ಬಂದ್
ಮೈಸೂರು

ಮೈಸೂರಿನ ಸಬರ್ಬನ್ ಸೇರಿ ಜಿಲ್ಲೆಯೆಲ್ಲೆಡೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳ ಅಂಗಡಿ, ಹೋಟೆಲ್‍ಗಳ ಬಂದ್

July 14, 2020

ಮೈಸೂರು, ಜು. 13(ಆರ್‍ಕೆ)- ವ್ಯಾಪಕವಾಗಿ ಹರ ಡುತ್ತಿರುವ ಕೊರೊನಾ ಜಾಡ್ಯದಿಂದ ಆತಂಕಗೊಂಡು ಪ್ರಯಾಣಿಕರ ಕೊರತೆಯಿಂದಾಗಿ ಶೇ.20ರಷ್ಟು ಕನಿಷ್ಠ ಬಾಡಿಗೆಯನ್ನು ಕಟ್ಟಿ ವ್ಯಾಪಾರ ವಹಿವಾಟು ಮಾಡಲು ಸಾಧ್ಯವಾಗದೇ ಮೈಸೂರು ನಗರದ ಸಬರ್ಬನ್ ಬಸ್ ಸ್ಟ್ಯಾಂಡ್ ಸೇರಿದಂತೆ ಜಿಲ್ಲೆಯ ಎಲ್ಲಾ ಕೆಎಸ್‍ಆರ್‍ಟಿಸಿ ಬಸ್ ಸ್ಟ್ಯಾಂಡ್‍ಗಳ ಅಂಗಡಿ-ಮುಂಗಟ್ಟು ಮತ್ತು ಹೋಟೆಲ್‍ಗಳನ್ನು ಇಂದಿನಿಂದ ಬಂದ್ ಮಾಡಲಾಗಿದೆ.

ಕೋವಿಡ್-19 ಸಂಕಷ್ಟ ಪರಿಸ್ಥಿತಿಯಿಂದಾಗಿ ಪ್ರಯಾ ಣಿಕರ ಕೊರತೆ ಉಂಟಾಗಿರುವುದರಿಂದ ಕೇವಲ ಶೇ. 20ರಷ್ಟು ಬಾಡಿಗೆಯನ್ನು ಪಾವತಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್ ನಿಲ್ದಾಣಗಳ ವಾಣಿಜ್ಯ ಮಳಿಗೆ ಬಾಡಿಗೆದಾರರಿಗೆ ತಿಳಿಸಿತ್ತಾದರೂ, ಪ್ರಯಾಣಿಕರೇ ಬರುತ್ತಿಲ್ಲವಾದ್ದರಿಂದ ವ್ಯಾಪಾರ ವಹಿ ವಾಟು ಸಂಪೂರ್ಣ ಸ್ಥಗಿತಗೊಂಡಿರುವ ಕಾರಣ ನಾವು ಬಾಡಿಗೆ, ವಿದ್ಯುತ್ ಶುಲ್ಕ ಪಾವತಿಸಿಕೊಂಡು ವ್ಯವಹಾರ ಮುಂದುವರೆಸಲು ಸಾಧ್ಯವಿಲ್ಲ ಎಂದು ಕೆಎಸ್‍ಆರ್ ಟಿಸಿ ಬಸ್ ಸ್ಟ್ಯಾಂಡ್ ವಾಣಿಜ್ಯ ಮಳಿಗೆಗಳ ಬಾಡಿಗೆ ದಾರರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇಂದಿನಿಂದ ಮೈಸೂರು ನಗರದ ಸಬರ್ಬನ್, ಸಿಟಿ ಬಸ್ ಸ್ಟ್ಯಾಂಡ್, ಆರ್.ಎಸ್.ನಾಯ್ಡುನಗರ, ಇಲವಾಲ, ಬಿಳಿಕೆರೆ, ಸಾಲಿಗ್ರಾಮ, ಕೆ.ಆರ್.ನಗರ, ಬೆಟ್ಟದಪುರ, ಪಿರಿಯಾ ಪಟ್ಟಣ, ಹುಣಸೂರು, ಹೆಚ್.ಡಿ.ಕೋಟೆ, ಸರಗೂರು, ನಂಜನಗೂಡು, ಬನ್ನೂರು ಹಾಗೂ ತಿ.ನರಸೀಪುರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳ ಎಲ್ಲಾ ಅಂಗಡಿ, ಹೋಟೆಲ್‍ಗಳನ್ನು ಬಂದ್ ಮಾಡಲಾಗಿದೆ.

ಟೀ ಅಂಗಡಿ, ಚಾಟ್ಸ್ ಅಂಗಡಿ, ಹೋಟೆಲ್, ಫ್ಯಾನ್ಸಿ ಸ್ಟೋರ್ಸ್, ಬೇಕರಿ, ಕೂಲ್‍ಬಾರ್ಸ್, ಬಟ್ಟೆ ಅಂಗಡಿ, ಮೊಬೈಲ್ ಶಾಪ್ ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ಮಳಿಗೆ ಗಳನ್ನು ಬಂದ್ ಮಾಡಿರುವ ಬಾಡಿಗೆದಾರರು `ಕೊರೊನಾ ವೈರಸ್ ಸಮಸ್ಯೆಯಿಂದಾಗಿ ಪ್ರಯಾಣಿಕರ ಕೊರತೆ ಉಂಟಾಗಿ ವ್ಯಾಪಾರದಲ್ಲಿ ನಷ್ಟವಾಗುತ್ತಿರುವ ಕಾರಣ ಮಳಿಗೆಗಳನ್ನು ಮುಚ್ಚಲಾಗಿದೆ’ ಎಂದು ಅಂಗಡಿಗಳ ಮೇಲೆ ಫಲಕ ಹಾಕಿದ್ದಾರೆ. ಈ ಕುರಿತು ಇಂದು ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳ ಅಂಗಡಿ ಮಳಿಗೆದಾರರ ಸಂಘದ ರಾಜ್ಯ ಸಮಿತಿ ಪದಾಧಿಕಾರಿಗಳೊಂದಿಗೆ ಸಭೆ ಕರೆದಿದ್ದು, ಅಲ್ಲಿ ಬಾಡಿಗೆ ಸಂಪೂರ್ಣ ಮನ್ನಾ ಮಾಡಿದರೆ ಮಾತ್ರ ನಾವು ಅಂಗಡಿ ತೆರೆಯುತ್ತೇವೆ. ಇಲ್ಲದಿದ್ದರೆ ನಾವು ಪಾವತಿಸಿರುವ ಮುಂಗಡ ಹಣ(6 ತಿಂಗಳ ಬಾಡಿಗೆ) ವನ್ನು ವಾಪಸ್ ಕೊಡಿ ಎಂದು ಕೇಳುತ್ತೇವೆ ಎಂದೂ ಮಳಿಗೆ ಬಾಡಿಗೆದಾರರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಅಂಗಡಿಗಳೆಲ್ಲಾ ಬಂದ್ ಆಗಿರುವುದರಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳ ಪ್ರಯಾಣಿಕರು ತಿಂಡಿ-ತಿನಿಸು, ಕನಿಷ್ಠ ನೀರಿನ ಬಾಟಲ್ ಸಿಗದೆ ಪರದಾಡುತ್ತಿದ್ದುದು ಕಂಡು ಬಂತು.

Translate »