`ಶಿವ’ ಚಿತ್ರದಲ್ಲಿ ಮೈಸೂರಿನ ಪ್ರತಿಭೆ
ಸಿನಿಮಾ

`ಶಿವ’ ಚಿತ್ರದಲ್ಲಿ ಮೈಸೂರಿನ ಪ್ರತಿಭೆ

February 28, 2020

ಮೈಸೂರಿನ ಪ್ರತಿಭಾನ್ವಿತ ಯುವತಿಯೊಬ್ಬಳು ಸ್ಯಾಂಡಲ್‍ವುಡ್‍ನಲ್ಲಿ ನಾಯಕಿ ನಟಿಯಾಗಿ ಅಭಿನಿಯಿಸಿರುವ ಮೂರನೇ ಚಿತ್ರ `ಶಿವ’ ನಾಳೆ ತೆರೆ ಕಾಣುತ್ತಿದೆ. ಗ್ರಾಮೀಣ ಸೊಗಡಿನ ಪ್ರೀತಿ-ಪ್ರೇಮದ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಮೈಸೂರಿನ ಹಲವು ಕಲಾವಿದರೇ ಇರುವುದು ವಿಶೇಷ.

ಮಂಡ್ಯ ಜಿಲ್ಲೆಯಲ್ಲೇ ಚಿತ್ರೀಕರಣವಾಗಿರುವ ಈ ಚಿತ್ರ ಮಂಡ್ಯದ ಜನಜೀವನದ ಶೈಲಿ ಹೊಂದಿದೆ. ಒಂದೇ ಒಂದು ಟೈಟಲ್ ಸಾಂಗ್ ಹೊರತುಪಡಿಸಿ ಯಾವುದೇ ಹಾಡಿಲ್ಲದ ಈ ಚಿತ್ರ ಸ್ವಾಭಾವಿಕವಾಗಿ ಚಿತ್ರಣ ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸ ಲಾಗಿದೆ. ನಿರ್ದೇಶನ, ನಿರ್ಮಾಪಕ ಹಾಗೂ ನಾಯಕ ನಟ ರಘು ವಿಜಯ್ ಕಸ್ತೂರಿ, ನಾಯಕಿ ಯಾಗಿ ಧರಣಿ ಹಾಗೂ ರಂಗಾಯಣ ಹಲವು ಕಲಾವಿದರು ತಮ್ಮ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಚಿತ್ರರಸಿಕರಿಗೆ ರಸದೌತಣ ಉಣಬಡಿಸಲು ವೇದಿಕೆ ಸಿದ್ಧಗೊಳಿಸಿದ್ದಾರೆ.

ಮೈಸೂರಿನ ಗಿರಿದರ್ಶಿನಿ ಬಡಾವಣೆಯ ನಿವಾಸಿ ಯಾಗಿರುವ ಧರಣಿ ರಂಗ ಭೂಮಿಯಿಂದ ಬಣ್ಣದಲೋಕಕ್ಕೆ ಪ್ರವೇಶಿಸಿ ಅಭಿನಯದಲ್ಲಿ ಲಯ ಕಂಡುಕೊಂಡಿದ್ದಾರೆ. ಬಿಸಿಎ ಪದವೀಧರೆಯಾಗಿರುವ ಧರಣಿ ಕಾಲೇಜು ಶಿಕ್ಷಣ ಪಡೆಯುತ್ತಿ ರುವಾಗಲೇ ರಂಗಭೂಮಿಯತ್ತ ಆಕರ್ಷಣೆಗೆ ಒಳಗಾಗಿ ವಿವಿಧ ನಾಟಕಗಳಲ್ಲಿ ಅಭಿನಯಿಸಿ, ರಂಗ ಭೂಮಿಯತ್ತ ಇದ್ದ ಒಲವು ಹೆಚ್ಚಿಸಿ ಕೊಂಡಿದ್ದರು. ಮೈಸೂರಿನ `ಪರಸ್ಪರ’ ನಾಟಕ ತಂಡದ ಸದಸ್ಯೆಯಾದ ಧರಣಿ ನಾಟಕಗಳಲ್ಲಿ ಸವಾಲೆನಿಸಿದ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ರಂಗನಿರ್ದೇಶಕ ಮಂಜುನಾಥ್ ಬೆಳಕೆರೆ ಅವರ ಗರಡಿಯಲ್ಲಿ ಪಳಗಿರುವ ಈಕೆ `ಅಂಧ ಯುಗ’ ನಾಟಕದಲ್ಲಿ `ಗಾಂಧಾರಿ’ ಪಾತ್ರಧಾರಿಯಾಗಿ ಅತ್ಯುತ್ತಮ ನಟನೆ ಯೊಂದಿಗೆ ರಂಗಾಸಕ್ತರು ಹಾಗೂ ಹಿರಿಯ ರಂಗಕರ್ಮಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಅಲ್ಲದೆ ರಂಗನಿರ್ದೇಶಕ ರೇಣುಕಾ ಪ್ರಸಾದ್ ಅವರ ನಿರ್ದೇಶನ ದಲ್ಲಿ `ಶೃತಿಯಲ್ಲಿ ಅಪಶೃತಿ’ ನಾಟಕ ದಲ್ಲಿಯೂ ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಹಲವಾರು ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ತನ್ನಲ್ಲಿರುವ ಪ್ರತಿಭೆ ಯನ್ನು ಪ್ರದರ್ಶಿಸಿದ್ದ ಧರಣಿಗೆ ಸ್ಯಾಂಡಲ್ ವುಡ್ ಕೈಬೀಸಿ ಕರೆದು ಅವಕಾಶ ನೀಡುತ್ತಿದೆ.

ಟಿ.ನರಸೀಪುರ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ಸಿಆರ್‍ಪಿಯಾಗಿರುವ ಎನ್.ಜೆ.ಸ್ವಾಮಿ ಹಾಗೂ ಲಕ್ಷ್ಮೀ ದಂಪತಿಯ ಪುತ್ರಿಯಾಗಿರುವ ಧರಣಿಗೆ ನಾಟಕ ರಂಗದ ಗೀಳು ಹಚ್ಚಿಸಿದ್ದು ಆಕೆಯ ತಾಯಿ ಲಕ್ಷ್ಮೀ ಆಗಿದ್ದಾರೆ. ಉತ್ತಮ ನೃತ್ಯಗಾರ್ತಿ ಯಾಗಿರುವ ಧರಣಿಯ ಸಹೋದರಿ ದರ್ಶನಿ ಹಾಗೂ ಪೋಷಕರು ಧರಣಿಗೆ ಸಾಥ್ ನೀಡುತ್ತಾ ಬಂದು ಅಗತ್ಯ ಬೆಂಬಲ ಮತ್ತು ಪ್ರೋತ್ಸಾಹವನ್ನು ತುಂಬುತ್ತಿದ್ದಾರೆ. ಈ ಹಿಂದೆ ಆಸಕ್ತಿಯಿಂದ ಮೂರ್ನಾಲ್ಕು ನಾಟಕಗಳಲ್ಲಿ ಅಭಿನಯಿಸಿದ್ದ ಲಕ್ಷ್ಮೀ ಅವರು ಪುತ್ರಿ ಧರಣಿಯನ್ನು ನಾಯಕಿ ನಟಿಯಾಗಿ ರೂಪುಗೊಳಿಸುವ ಕನಸು ಕಂಡು ರಂಗಭೂಮಿಯತ್ತ ತೊಡಗಿಸಿಕೊಳ್ಳುವುದಕ್ಕೆ ಪ್ರೇರಣೆ ನೀಡುವುದರೊಂದಿಗೆ ಪ್ರೋತ್ಸಾಹ ನೀಡಿದ ಫಲವಾಗಿ ಇಂದು ಎರಡು ಚಲನಚಿತ್ರಗಳಲ್ಲಿ ನಾಯಕಿ ನಟಿಯಾಗಿ ಅಭಿನಯಿಸುವ ಅವಕಾಶ ಧರಣಿಗೆ ಲಭಿಸಿದೆ.

ಮೂರು ಚಿತ್ರಗಳಲ್ಲಿ : ಹಲವಾರು ನಾಟಕಗಳಲ್ಲಿ ಅಭಿನಯಿಸಿರುವ ಧರಣಿಗೆ ಗಾಂಧಾರಿ ಪಾತ್ರ ಆಕೆಗೆ ಮತ್ತಷ್ಟು ಅವಕಾಶಗಳು ದೊರೆಯುವಂತೆ ಮಾಡಿದೆ. ನಟನೆಯಲ್ಲಿ ಬದ್ದತೆ, ಕಾಳಜಿಯನ್ನು ಕಂಡ ರಂಗಕರ್ಮಿಯೊಬ್ಬರು ಕನ್ನಡ ಚಲನಚಿತ್ರ ರಂಗಕ್ಕೆ ಪರಿಚಯಿಸುವ ಇಂಗಿತ ವ್ಯಕ್ತಪಡಿಸಿ ಮುಮ್ತಾಜ್ ಮುರುಳಿ ಅವರ ನಿರ್ದೇಶನ ದಲ್ಲಿ ಮೂಡಿಬಂದಿರುವ `ಕಾದಲ್’, ಪ್ರಶಾಂತ್ ನಿರ್ದೇಶನದ `ಅಮಾವಾಸ್ಯೆ’ ಚಲನಚಿತ್ರ ದಲ್ಲೂ ನಾಯಕಿ ನಟಿಯಾಗಿ ಅಭಿನಯಿಸಿ ಗಮನ ಸೆಳೆದದಿದ್ದರು. ಇದೀಗ ರಘು ವಿಜಯ್ ಕಸ್ತೂರಿ ನಿರ್ದೇಶನ `ಶಿವ’ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ನಾಳೆ(ಫೆ.28) ರಾಜ್ಯದಾದ್ಯಂತ ತೆರೆ ಕಾಣುತ್ತಿದೆ. ತಾರಾಗಣದಲ್ಲಿ ಮೈಸೂರಿನ ರಂಗಾಯಣದ ಹಲವು ಕಲಾವಿದರಿರುವುದು ವಿಶೇಷ.

Translate »