ದ್ರೋಣ ಟ್ರೈಲರ್ ಬಿಡುಗಡೆ ಮಾಡಿದ ಪುನೀತ್
ಸಿನಿಮಾ

ದ್ರೋಣ ಟ್ರೈಲರ್ ಬಿಡುಗಡೆ ಮಾಡಿದ ಪುನೀತ್

February 28, 2020

‘ದ್ರೋಣ’ ಚಿತ್ರದಲ್ಲಿ ಶಿವಣ್ಣ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕನೊಬ್ಬನ ಹೋರಾಟದ ಕಥೆ ಈ ಚಿತ್ರದಲ್ಲಿದೆ. ಸರ್ಕಾರಿ ಶಾಲೆಗಳು ಯಾವ ಕಾರಣಕ್ಕೆ ಮುಚ್ಚುತ್ತಿವೆ, ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಎದುರಿಸುವ ಸಮಸ್ಯೆಗಳು, ಇವೆಲ್ಲ ಈ ಚಿತ್ರದಲ್ಲಿದೆ. ತೆಲುಗು, ತಮಿಳು ಹಾಗೂ ಮಲೆಯಾಳಂದಲ್ಲಿ ನಟಿಸಿರುವ ಇನಿಯಾ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

ಮೊನ್ನೆ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಪುನೀತ್ ರಾಜ್‍ಕುಮಾರ್ ಮಾತನಾಡುತ್ತಾ, ಚಿತ್ರದ ಟ್ರೀಲರ್ ನೋಡಿದರೆ ಶಿಕ್ಷಣ ವ್ಯವಸ್ಥೆಯ ಕುರಿತಾದ ಕಥೆಯಿದು ಎನ್ನಬಹುದು. ತಂಡಕ್ಕೆ ಒಳ್ಳೆಯದಾಗಲಿ ಎಂದರು. ಶಿವರಾಜ್ ಕುಮಾರ್ ಎಂದಿನಂತೆ ಖುಷಿಯಲ್ಲಿದ್ದು ಆಹ್ವಾನಿತರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು. ಮತ್ತೊಮ್ಮೆ ಅಣ್ಣತಂಗಿ ಥರದ ಚಿತ್ರ ಮಾಡಿ ಎಂದು ಹೇಳಿದಾಗ ಮತ್ತೊಬ್ಬ ರಾಧಿಕಾ ಸಿಕ್ಕರೆ ಖಂಡಿತ ಮಾಡುತ್ತೇನೆ ಎಂದರು. ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಕಾಲೇಜು ದಿನಗಳು ನೆನಪಿಗೆ ಬಂದು ವಿದ್ಯಾರ್ಥಿಯಂತೆ ನಟಿಸಿದೆ. ಎಲ್ಲರಿಗೂ ಸಮಾನ ಶಿಕ್ಷಣ ಕೊಡಬೇಕೆಂದು ಈ ಸಿನಿಮಾ ಹೇಳುತ್ತದೆ ಎಂಬುದಾಗಿ ಒಂದಷ್ಟು ವಿವರವನ್ನು ತೆರೆದಿಟ್ಟರು.

ಪ್ರಮೋದ್ ಚಕ್ರವರ್ತಿ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಸ್ವಾತಿ ಶರ್ಮ, ವಿಜಯ್‍ಕಿರಣ್, ರಂಗಾಯಣ ರಘು, ರವಿಕಿಶನ್, ಸಾಧು ಕೋಕಿಲ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹದಿನೈದು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಫ್ಲೂಟ್ ನುಡಿಸಿರುವ ರಾಮ್‍ಕ್ರಿಶ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಡಾಲ್ಫಿನ್ ಮೀಡಿಯಾ ಸಂಸ್ಥೆಯ ಮೂಲಕ ಮಹದೇವ್.ಬಿ, ಸಂಗಮೇಶ್. ಮತ್ತು ಶೇಶು ಚಕ್ರವರ್ತಿ ಈ ಚಿತ್ರ ನಿರ್ಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಜ್‍ಕುಮಾರ್ ತಮ್ಮ ಸಿನಿ ಪಯಣದಲ್ಲಿ 34 ವರ್ಷಗಳನ್ನು ಪೂರೈಸಿದ್ದರಿಂದ ಚಿತ್ರತಂಡ ಅವರನ್ನು ಸನ್ಮಾನಿಸಿತು. ಅಂದಹಾಗೆ ಮಾರ್ಚ್ 6ರಂದು ದ್ರೋಣ ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದೆ.

Translate »