ವಿದ್ಯೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ: ಜೆ.ಸಿ.ಮಾಧುಸ್ವಾಮಿ
ಹಾಸನ

ವಿದ್ಯೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ: ಜೆ.ಸಿ.ಮಾಧುಸ್ವಾಮಿ

February 28, 2020

ಹಾಸನ, ಫೆ.27- ಯುವ ಜನತೆ ಸ್ಪರ್ಥೆಪರತೆ ಬಿಟ್ಟು ವಿದ್ಯೆಯನ್ನು ನಾಡಿನ ಶ್ರೇಯೋಭಿವೃದ್ಧಿಗೆ ಬಳಸಿಕೊಂಡಾಗ ಮಾತ್ರ ಉತ್ತಮ ಸಮಾಜ ರೂಪಿಸಲು ಸಾಧ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದ ಹೊರವಲಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಬೆಳ್ಳಿಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರು ಮಾನವೀಯ ಮೌಲ್ಯಗಳನ್ನು ಮರೆತು ಜಾತಿ, ಲಿಂಗ, ವರ್ಣ ವ್ಯವಸ್ಥೆ ಉತ್ತೇಜಿಸುವ ಸ್ಥಿತಿಯನ್ನು ತಲುಪಿದ್ದೇವೆ ಇದು ವಿಷಾದನೀಯ ಎಂದರು.

ಹಿಂದೆ ಬೆರಳೆಣಿಕೆಯಷ್ಟು ಜನ ಮಾತ್ರ ಉನ್ನತ ಶಿಕ್ಷಣ ಪಡೆಯುವ ಅವಕಾಶ ಹೊಂದಿದ್ದರು. ಪ್ರಸ್ತುತ ಲಕ್ಷಾಂತರ ಜನ ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಿರುವ ಸಂದರ್ಭದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಮೈಸೂರು ವಿಶ್ವವಿದ್ಯಾನಿಲಯದಿಂದ ಹೇಮಗಂಗೋತ್ರಿ ಸ್ವತಂತ್ರ ವಿದ್ಯಾನಿಲಯವಾಗಿ ಬೇರ್ಪಡಿಸದೇ ಇರುವುದೇ ಉತ್ತಮ ಎಂಬುದು ತಮ್ಮ ವೈಯುಕ್ತಿಕ ಅಭಿಪ್ರಾಯವಾಗಿದೆ ಎಂದರು.

ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳು ಅಗತ್ಯವಿದೆ. ವಿದ್ಯೆ, ಜ್ಞಾನ, ವಿಜ್ಞಾನದ ಅರಿವಿಗೆ ಅವಕಾಶಗಳು ಹೆಚ್ಚಾಗಿ ವಿದ್ಯಾರ್ಥಿಗಳು ಸಮುದಾಯದ ಶಕ್ತಿಗಳಾಗಬೇಕು ಹಾಗೂ ಶಿಕ್ಷಣವನ್ನು ಕೇವಲ ಹಣಗಳಿಕೆಯ ಮಾನದಂಡದಿಂದ ಕಲಿಯದೆ ಸಮಜದ ಉನ್ನತೀಕರಣದ ಮಾರ್ಗವಾಗಿ ಬಳಸಬೇಕು ಬೆಳಸಬೇಕು ಎಂದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಮಾದಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶ್ರಮದ ಜೊತೆಗೆ ಏಕಾಗ್ರತೆ ಇದ್ದಲ್ಲಿ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯ 103ನೇ ವರ್ಷದ ಸಂಭ್ರಮದ ಆಚರಣೆಯಲ್ಲಿದೆ. ಇಡೀ ವರ್ಷ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು ವರ್ಷದ ಕೊನೆಯಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಚಿವರು, ಹಾಲಿ ಹಾಗೂ ವಿಶ್ರಾಂತ ಕುಲಸಚಿವರುಗಳು ಹೇಮಗಂಗೋತ್ರಿಯ ಹಾಲಿ ಹಾಗೂ ಹಿಂದಿನ ನಿರ್ದೇಶಕರುಗಳು ಹಾಗೂ ಇತರ ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‍ಗೌಡ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್, ತಾಪಂ ಅಧ್ಯಕ್ಷÀ ನಿಂಗೇಗೌಡ, ಮೈಸೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಕೆ.ಮಹದೇವನ್, ಹಣಕಾಸು ಅಧಿಕಾರಿ ಡಾ.ಟಿ.ಎಸ್.ದೇವರಾಜು ಮತ್ತಿತರರು ಉಪಸ್ಥಿತರಿದ್ದರು.

Translate »