ಮೈಸೂರು, ಏ.13(ಎಸ್‍ಬಿಡಿ)- ಮೈಸೂರಿಗೆ ಯಾವ ಪಕ್ಷದ ಸರ್ಕಾರ ಹೆಚ್ಚು ಅನುದಾನ ನೀಡಿದೆ ಎಂಬುದನ್ನು ಜನತೆಗೆ ತಿಳಿಸಲು ಶ್ವೇತಪತ್ರ ಹೊರಡಿ ಸೋಣ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ 10 ಸ್ಥಾನ ಗೆಲ್ಲಲು ಪ್ರಯತ್ನಿಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮೈಸೂರಿನ ವಸ್ತುಪ್ರದರ್ಶನ ಪ್ರಾಧಿ ಕಾರದ ಆವರಣದಲ್ಲಿ ಬುಧವಾರ ನಡೆದ ಬಿಜೆಪಿ ನಗರ ಹಾಗೂ ಜಿಲ್ಲಾ ಕಾರ್ಯ ಕರ್ತರ ಸಮಾವೇಶದಲ್ಲಿ ಮಾತನಾಡಿ, ಮೈಸೂರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೆಚ್ಚು ಅನುದಾನ ನೀಡಿ ದೆಯೋ? ಅಥವಾ ಬಿಜೆಪಿ ಸರ್ಕಾರ ಹೆಚ್ಚು ಅನುದಾನ ಕಲ್ಪಿಸಿದೆಯೋ? ಎಂಬು ದನ್ನು ಜನತೆಗೆ ತಿಳಿಸೋಣ ಎಂದು ವಿರೋಧ ಪಕ್ಷಕ್ಕೆ ಸವಾಲು ಹಾಕಿದರು.
ಕೊರೊನಾ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ ಸಿದ್ದರಾಮಯ್ಯ, ಕದ್ದುಮುಚ್ಚಿ ಅವರೇ ಲಸಿಕೆ ಪಡೆದರು. ಹಗಲಿನಲ್ಲಿ ರೋಷಾವೇಷದಲ್ಲಿ ಟೀಕೆ ಮಾಡುವುದು, ರಾತ್ರಿ ವೇಳೆ ಕಾಲು ಹಿಡಿಯುವುದು ಸಿದ್ದ ರಾಮಯ್ಯನವರ ವರಸೆಯಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 24 ಹಿಂದೂಗಳ ಹತ್ಯೆಯಾಗಿತ್ತು. ಡಿವೈ ಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡರು. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದವು. ದರೋಡೆಗಳು ಸಾಕಷ್ಟು ನಡೆದಿದ್ದವು. ಆದ್ದ ರಿಂದಲೇ ನರಹಂತಕ ಹುಲಿ, ನರಹಂತಕ ವೀರಪ್ಪನ್‍ನಂತೆ ಸಿದ್ದರಾಮಯ್ಯ ನರಹಂತಕ ಸಿಎಂ ಎಂದು ಹೇಳಿದ್ದೆ. ನನ್ನ ಹೇಳಿಕೆಗೆ ಚರ್ಚೆಗೆ ಗ್ರಾಸವಾಗಿತ್ತು. ಆದರೂ ಸಿದ್ದ ರಾಮಯ್ಯ ಓರ್ವ ಮುಖ್ಯಮಂತ್ರಿಯಾಗಿ ಆತ್ಮಹತ್ಯೆ ಮಾಡಿಕೊಂಡ ಗಣಪತಿ ಹಾಗೂ ಹತ್ಯೆಯಾದ ಒಬ್ಬ ಹಿಂದೂ ಕಾರ್ಯ ಕರ್ತನ ಮನೆಗೆ ಹೋಗಿ ಸಾಂತ್ವನ ಹೇಳ ಲಿಲ್ಲ ಎಂದು ಕಿಡಿಕಾರಿದರು.
ಇತಿಹಾಸ ಪ್ರಸಿದ್ಧ ಮೈಸೂರು, ಒಡೆ ಯರ್ ಕೊಡುಗೆ. ಅವರು ಕೇವಲ ಒಡೆ ತನಕ್ಕೆ ಸೀಮಿತವಾಗಿರಲಿಲ್ಲ. ಜನಪರ ಆಡ ಳಿತದೊಂದಿಗೆ ಅಭಿವೃದ್ಧಿಯ ಪರ್ವ ನಡೆಸಿ ದವರು. ಇಂತಹ ಒಡೆಯರ್ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದ ಮಹಿಷಾ ಸುರನನ್ನು ಮೈಸೂರಿನ ಚಾಮುಂಡೇಶ್ವರಿ ಯಿಂದ ಓಡಿಸಿದರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಟೀಕಿಸಿದ ನಳಿನ್ ಕುಮಾರ್ ಕಟೀಲ್, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಆ ಮಹಿಷಾಸುರ ನನ್ನು ರಾಜ್ಯದಿಂದಲೇ ಓಡಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಖಾಲಿ ಮನೆ ಕಾಂಗ್ರೆಸ್: ಕಾಂಗ್ರೆಸ್ ಮನೆ ಖಾಲಿಯಾಗುತ್ತಿದ್ದು, ಬಿಜೆಪಿ ಮನೆ ತುಂಬು ತ್ತಿರುವುದನ್ನು ಜನ ಗಮನಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗುವ ಭೀತಿಯಲ್ಲಿದ್ದಾರೆ. ಪರಿಣಾಮ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ನಾಟಕ ಆರಂಭವಾಗಿದೆ.
ನಾನೇ ಸಿಎಂ ಎಂದು ಇಬ್ಬರೂ ಹೇಳುತ್ತಿದ್ದಾರೆ. ಜೊತೆಗೆ ಅವರನ್ನು ಮುಖ್ಯಮಂತ್ರಿ ಯಾಗಲು ಬಿಡಬಾರದು ಎಂದು ಪರಸ್ಪರ ತಂತ್ರಗಾರಿಕೆಯೂ ನಡೆದಿದೆ. ಅದೇನೇ ಆದರೂ ರಾಜ್ಯದಲ್ಲಿ ಮುಂದಿನ ಸಿಎಂ ಆಗುವವರು ಬಿಜೆಪಿಯವರೇ ಎನ್ನುವುದು ಖಚಿತ ಎಂದರು.
ಕಾಂಗ್ರೆಸ್ ಭ್ರಷ್ಟಾಚಾರದ ಕೂಪ: ಭ್ರಷ್ಟಾಚಾರದ ಮೂಲವೇ ಕಾಂಗ್ರೆಸ್. ಇದು ಭ್ರಷ್ಟಾಚಾರದ ಕೂಪದಲ್ಲೇ ಇದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ. ಇವರೆಲ್ಲಾ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ, ಜೈಲಿಗೆ ಹೋಗಿ ಜಾಮೀನು ಪಡೆದಿ ದ್ದಾರಾ? ಎಂದು ವ್ಯಂಗ್ಯವಾಡಿದ ಅವರು, ಅಭಿವೃದ್ಧಿಯೊಂದೇ ಬಿಜೆಪಿಯ ಮಂತ್ರ. ನಮ್ಮ ಪಕ್ಷದ ವಿರುದ್ಧ ಯಾವ ಕಳಂಕವೂ ಇಲ್ಲ. ಹಾಗಾಗಿಯೇ ಕೇಂದ್ರ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 10 ಸ್ಥಾನ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲೂ ಬಿಜೆಪಿ ಗೆದ್ದು ಸರ್ಕಾರ ರಚನೆ ಮಾಡಲಿದೆ. ಈ ನಿಟ್ಟಿನಲ್ಲಿ ಕೇವಲ ಮೂರು ಶಾಸಕರನ್ನು ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ಮುಂದಿನ ಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆಲ್ಲಿಸಲು ಕಾರ್ಯ ಕರ್ತರು ಶ್ರಮಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜನರಿಗೆ ಮನದಟ್ಟು ಮಾಡಿಸಬೇಕು ಎಂದು ಸಲಹೆ ನೀಡಿದರು.
ಪ್ರತಾಪ್ ಸಿಂಹಗೆ ಶ್ಲಾಘನೆ: ನಾವು ಹಲವು ಬಾರಿ ಸಂಸದರಾಗಿದ್ದೇವೆ. ಆದರೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಷ್ಟು ಅನುದಾನ ತರಲು ನಮ್ಮಿಂದ ಸಾಧ್ಯವಾಗಿಲ್ಲ. ಗುಣಕ್ಕೆ ಮತ್ಸರವಿರಬಾರದು. ಪ್ರತಾಪ್ ಸಿಂಹ ಅವರ ಬದ್ಧತೆ ಬಗ್ಗೆ ಖುಷಿಯಾಗುತ್ತದೆ ಎಂದು ನಳಿನ್‍ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದರು.
ಮೈಸೂರಿಗೆ ಸಾಕಷ್ಟು ಅನುದಾನ: ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮೈಸೂರಿನ ಅಭಿವೃದ್ಧಿಗಾಗಿ 7 ದಶಕ ದೇಶದ ಅಧಿಕಾರ ನಡೆಸಿದವರು ನೀಡದಷ್ಟು ಅನುದಾನವನ್ನು ನರೇಂದ್ರ ಮೋದಿ ಅವರು 7 ವರ್ಷಗಳಲ್ಲೇ ನೀಡಿದ್ದಾರೆ. ಮೈಸೂರು-ಬೆಂಗಳೂರು ದಶಪಥ ರಸ್ತೆಗೆ 9,500 ಕೋಟಿ ರೂ., ಮೈಸೂರು ರಿಂಗ್‍ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು 400 ಕೋಟಿ ರೂ. ಪ್ರಸಾದ ಯೋಜನೆಯಡಿ ಚಾಮುಂಡಿಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ 50 ಕೋಟಿ ರೂ., ಉಡಾನ್ ಯೋಜನೆಯಡಿ ಸಾಮಾನ್ಯರಿಗೂ ವಿಮಾನ ಪ್ರಯಾಣ ಅವಕಾಶ, ಮಡಿಕೇರಿ ಚತುಷ್ಪಥ ರಸ್ತೆ ಹೀಗೆ ಕೇಂದ್ರ ಸರ್ಕಾರ ಸಾಕಷ್ಟು ನೀಡಿದೆ. ಇನ್ನು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಮಂಡಕಳ್ಳಿ ವಿಮಾನ ನಿಲ್ದಾಣ ರನ್‍ವೇ ವಿಸ್ತರಣೆಗೆ 333 ಕೋಟಿ ರೂ., ಕೆ.ಆರ್.ಆಸ್ಪತ್ರೆ ಕಾಯಕಲ್ಪಕ್ಕೆ 89 ಕೋಟಿ ರೂ. ಅನುದಾನ ನೀಡಿದೆ. ಬೃಹತ್ ಮೈಸೂರು ರಚನೆಗೆ ಪ್ರಕ್ರಿಯೆ ಆರಂಭವಾಗಿದೆ, ಗ್ಯಾಸ್ ಪೈಪ್‍ಲೈನ್ ಪ್ರಗತಿಯಲ್ಲಿದೆ. ಹೀಗೆ ಜನರ ಬಳಿ ಹೇಳಲು ಸಾಕಷ್ಟು ವಿಚಾರಗಳಿವೆ. 2023ಕ್ಕೂ ನಮ್ಮದೇ ಸರ್ಕಾರ ಬರುವುದರಲ್ಲಿ ಸಂಶಯ ಬೇಡ. ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನದಲ್ಲಿ ಗೆಲ್ಲಿಸಲು ಎಲ್ಲರೂ ಪ್ರಯತ್ನಿಸಬೇಕಿದೆ ಎಂದು ಮನವಿ ಮಾಡಿಕೊಂಡರು.
ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ ಹಳೆ ಮೈಸೂರು ಭಾಗದಲ್ಲಿ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯವರು ಆಯ್ಕೆಯಾಗುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿ ಸೋಣ ಎಂದರು. ನಂಜನಗೂಡು ಶಾಸಕ ಹರ್ಷವರ್ದನ್, ಬಿಜೆಪಿ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರ ಪರಿಶ್ರಮದಿಂದಲೇ ನಾವೆಲ್ಲಾ ಚುನಾವಣೆಯಲ್ಲಿ ಆಯ್ಕೆಯಾಗಲು ಸಾಧ್ಯ ಎಂದು ನೆರದಿದ್ದವರಿಗೆ ಕೃತಜ್ಞತೆ ಸಲ್ಲಿಸಿದರು. ಬಿಜೆಪಿ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತ್‍ಕುಮಾರ್, ಎಂ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್, ಸಿದ್ದರಾಜು, ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯ ಮುನಿಗೋಪಾಲರಾಜು, ಬಿಜೆಪಿ ಮೈಸೂರು ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ನಗರಾಧ್ಯಕ್ಷ ಶ್ರೀವತ್ಸ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವ ಸ್ವಾಮಿ, ಕಾ.ಪು.ಸಿದ್ದಲಿಂಗಸ್ವಾಮಿ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.