ಏರ್‍ಕೂಲರ್‍ನಲ್ಲಿ ಅಡಗಿಕೊಂಡು   ಮನೆ ಮಂದಿಯ ಬೆವರಿಳಿಸಿದ ನಾಗಪ್ಪ! 
ಮೈಸೂರು

ಏರ್‍ಕೂಲರ್‍ನಲ್ಲಿ ಅಡಗಿಕೊಂಡು  ಮನೆ ಮಂದಿಯ ಬೆವರಿಳಿಸಿದ ನಾಗಪ್ಪ! 

January 19, 2021

ಮೈಸೂರು,ಜ.18(ಎಂಕೆ) ಏರ್ ಕೂಲರ್‍ನಿಂದ ಕೂಲ್ ಆಗುತ್ತಿದ್ದ ಮನೆ ಮಂದಿಯ ಬೆವರಿಳಿಸಿದ ನಾಗರಹಾವು…! ಹೌದು! ಮೈಸೂರಿನ ಸಿಲ್ಕ್ ಫ್ಯಾಕ್ಟರಿಯ ಕೆ.ಆರ್.ಪುರಂ ನಿವಾಸಿ ಸೂರ್ಯ ಪ್ರಕಾಶ್ ಎಂಬುವರ ಮನೆಯಲ್ಲಿದ್ದ ಏರ್ ಕೂಲರ್ ಒಳಹೊಕ್ಕಿದ ಸುಮಾರು 4 ಅಡಿ ಉದ್ದದ ನಾಗರಹಾವು ಮನೆ ಮಂದಿಯನ್ನು ಬೆಚ್ಚಿಬಿಳಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮನೆಯೊಳಗೆ ಹೋಗುತ್ತಿದ್ದ ನಾಗರಹಾವನ್ನು ನೋಡಿದ ಅಕ್ಕ-ಪಕ್ಕದ ನಿವಾಸಿ ಗಳು ಸೂರ್ಯ ಪ್ರಕಾಶ್ ಅವರಿಗೆ ತಿಳಿಸಿದ್ದಾರೆ. ಮನೆಯಲ್ಲಿದ್ದವರೆಲ್ಲಾ ಮನೆಯಿಂದ ಹೊರಬಂದ ನಂತರ ಕೆಲವರು ಮನೆಯೊಳಗೆ ಹುಡು ಕಾಡಿದರೂ ಪತ್ತೆಯಾಗಿಲ್ಲ. ಬಳಿಕ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಅವರಿಗೆ ಕರೆಮಾಡಿ ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು ಮನೆಯವರು ನೀಡಿದ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಏರ್ ಕೂಲರ್ ಒಳಗೆ ಹಾವು ಇರುವುದು ಗೊತ್ತಾಗಿದೆ. ಮನೆಯಿಂದ ಏರ್ ಕೂಲರ್‍ನ್ನು ಹೊರತಂದ ಸ್ನೇಕ್ ಶ್ಯಾಮ್, ನಾಗರಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಭಾನುವಾರ ರಾತ್ರಿ 11.30ರಲ್ಲಿ ಮೈಸೂರು ಸಮೀಪ ಬಸವನಹಳ್ಳಿಯ ನಿವಾಸಿಯೊಬ್ಬರ ಮನೆ ರೂಂನಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಈ ವೇಳೆ ಹಾವಿಗೆ ಮನೆಮಂದಿಯೆಲ್ಲಾ ಗಂಧದ ಕಡ್ಡಿ ಬೆಳಗೆ ಪೂಜೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ನೇಕ್‍ಶ್ಯಾಮ್ ನಾಗರ ಹಾವನ್ನು ಸಂರಕ್ಷಿಸಿದ್ದಾರೆ. ಹಾವುಗಳು ಪತ್ತೆಯಾದಲ್ಲಿ ಕೂಡಲೇ ಮೊಬೈಲ್ ನಂ.9980 557797 ಕರೆ ಮಾಡಿ ಮಾಹಿತಿ ನೀಡುವಂತೆ ಸ್ನೇಕ್‍ಶ್ಯಾಮ್ ಮನವಿ ಮಾಡಿದ್ದಾರೆ.

Translate »