ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ನ್ಯಾಕ್ ತಂಡ ಭೇಟಿ
ಕೊಡಗು

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ನ್ಯಾಕ್ ತಂಡ ಭೇಟಿ

September 2, 2018

ಮಡಿಕೇರಿ:  ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ಇತ್ತೀಚೆಗೆ ನ್ಯಾಕ್ ಸದಸ್ಯರು ಭೇಟಿ ನೀಡಿ ಮಾನ್ಯತೆಯನ್ನು ಪರಿಶೀಲಿಸಿ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಕಾಲೇಜಿನ ಜ್ಯೇಷ್ಠತೆಯನ್ನು ಸಮೀಕ್ಷಿಸಲು ಪೂನಾ ಕೊತ್ರೂಡಿನ ಎಂಐಟಿ ವಲ್ಡ್ ಪೀಸ್ ಯುನಿವರ್ಸಿಟಿಯ ಮುಖ್ಯಸ್ಥರಾದ ಡಾ. ಸುಧೀರ್ ಗೌಹಾನೆ ನೇತೃತ್ವದಲ್ಲಿ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ ನಿರ್ದೇಶಕರಾದ ಪ್ರೊ.ವಿದ್ಯಾಧರ್ ರೆಡ್ಡಿ ಐಲೇನಿ, ಆಂಧ್ರ ಪ್ರದೇಶದ ಶ್ರೀಕಾಕುಲಂನ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಮೈಥಿಲಿ ಅವರನ್ನೊಳಗೊಂಡ ಮೂವರು ಸದಸ್ಯರ ತಂಡ ಆಗಮಿಸಿ ಪರಿಶೀಲನೆ ನಡೆಸಿತು.

ಇಲ್ಲಿನ ಬೋಧಕ ವರ್ಗದಲ್ಲಿ ಹೆಚ್ಚಿನವರು ಡಾಕ್ಟರೇಟ್ ಪದವಿ ಹೊಂದಿರುವುದು, ಸೇವಾನಿಷ್ಠ ಪ್ರಾದ್ಯಾಪಕರು, ಗ್ರಂಥಾಲಯ, ಸಂಶೋಧನಾ ಯೋಜನೆಗಳು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಗಮನಿಸಿ ಪ್ರಶಂಸೆ ವ್ಯಕ್ತಪಡಿಸಿದ ನ್ಯಾಕ್ ಸಮಿತಿ, ಸರ್ಕಾರಿ ಪದವಿ ಕಾಲೇಜುಗಳಿಗೆ ಹೋಲಿಸಿದರೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಬಹುತೇಕ ಎಲ್ಲಾ ವಿಜ್ಞಾನ ವಿಭಾಗಗಳಿಗೆ ಭೇಟಿ ನೀಡಿದ ಸದಸ್ಯರು, ಹೆಚ್ಚಿನ ಸಂಶೋಧನಾ ಪ್ರಬಂಧಗಳು ಪ್ರಕಟವಾಗಿರುವುದು ಹಾಗೂ ಸಂಶೋಧನೆಗಳಿಗೆ ಹೆಚ್ಚಿನ ಅನುದಾನ ಬಂದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ವಿಜ್ಞಾನದ ಎಲ್ಲಾ ವಿಭಾಗಗಳು ಪರಸ್ಪರ ಸಮನ್ವಯತೆಯೊಂದಿಗೆ, ವಿದ್ಯಾರ್ಥಿಗಳನ್ನೂ ಒಳಗೂಡಿ ಸಂಶೋಧನೆ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುವಂತೆ ಸಲಹೆ ನೀಡಿದರು.

ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಹೊಸ ವಿಷಯಗಳ ಸೇರ್ಪಡೆಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಕ್ ತಂಡವು, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಹೆಚ್ಚಿದ್ದು, ಇನ್ನೂ ಹೆಚ್ಚುವರಿ ಕೊಠಡಿ ಅಗತ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Translate »