ಲಕ್ಷಾಂತರ ಭಕ್ತ ಗಣ ನಡುವೆ ವಿಜೃಂಭಣೆಯಿಂದ ಜರುಗಿದ ನಂಜನಗೂಡು ಗೌತಮ ಪಂಚ ಮಹಾರಥೋತ್ಸವ
ಮೈಸೂರು

ಲಕ್ಷಾಂತರ ಭಕ್ತ ಗಣ ನಡುವೆ ವಿಜೃಂಭಣೆಯಿಂದ ಜರುಗಿದ ನಂಜನಗೂಡು ಗೌತಮ ಪಂಚ ಮಹಾರಥೋತ್ಸವ

March 17, 2022

ನಂಜನಗೂಡು, ಮಾ. 16- ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಯವರ ಗೌತಮ ಪಂಚ ಮಹಾರಥೋತ್ಸವವು ಬುಧವಾರ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಜಾತ್ರೆ ನಡೆಯದೆ ನಿರಾಶೆಗೆ ಒಳಗಾಗಿದ್ದ ಲಕ್ಷಾಂತರ ಭಕ್ತಾದಿಗಳು ಶ್ರೀಕಂಠೇಶ್ವರನ ಪಂಚ ರಥಗಳನ್ನು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದರು.

ಜಾತ್ರೆ ಅಂಗವಾಗಿ ಬುಧವಾರ ಬೆಳಗ್ಗೆ 2 ಗಂಟೆಯಿಂದಲೇ ದೇವಾಲಯದಲ್ಲಿ ಮೊದಲು ಕ್ಷೀರಾಭಿಷೇಕ, ಫಲಪಂಚಾಮೃತ ಅಭಿಷೇಕ, ಮಹೋನ್ನತ ಪೂರ್ವಕ ಏಕದಶಾವರ ರುದ್ರಾಭಿಷೇಕ, ಪ್ರಾತಃಕಾಲ ಪೂಜೆಯನ್ನು ನೆರವೇರಿಸಿ ನಂತರ ಹೋಮ ಹವನಾದಿಗಳನ್ನು ನೆರವೇರಿಸಲಾಯಿತು. ನಂತರ ರಥದ ಬಳಿ ಬಲಿ ಪೂಜೆ ನೆರವೇರಿಸಲಾಯಿತು. ನಂತರ ಉತ್ಸವ ಮೂರ್ತಿಗೆ ವಿಶೇಷ ಹೂಗಳಿಂದ ಅಲಂಕಾರ ನೆರವೇರಿಸಲಾಯಿತು. ಉದಯಾತ್ಪೂರ್ವ 3.30ರಿಂದ 4.30 ಗಂಟೆ ಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ದೇವಾಲಯದ ಆಗಮಿಕ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್ ಹಾಗೂ ದೇಗುಲದ ಅರ್ಚಕ ವೃಂದದವರು ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದ ನಂತರ ಶ್ರೀಕಂಠೇಶ್ವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಬೆಳಗ್ಗೆ 5.20ರ ವೇಳೆಯಲ್ಲಿ ಶಾಸಕ ಬಿ.ಹರ್ಷವರ್ಧನ್ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಾಡಿನ ವಿವಿಧ ಮೂಲೆಗಳಿಂದ ಮಂಗಳವಾರದಿಂದಲೇ ಆಗಮಿಸಿದ ಲಕ್ಷಾಂತರ ಭಕ್ತಾದಿಗಳು ತೇರಿನ ಹಗ್ಗ ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ಬೆಳಗ್ಗೆ 7.40ಕ್ಕೆ ಗೌಥಮ ರಥವು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸ್ವಸ್ಥಾನ ಸೇರಿತು.

ಮೊದಲು ಗಣಪತಿ ರಥ, ನಂತರ ಶ್ರೀಕಂಠೇಶ್ವರ ಸ್ವಾಮಿಯವರ ದೊಡ್ಡರಥ (ಗೌತಮ ರಥ), ನಂತರ ಸುಬ್ರಮಣ್ಯ, ಚಂಡಿಕೇಶ್ವರಸ್ವಾಮಿ, ಕೊನೆಯಲ್ಲಿ ಶ್ರೀ ಪಾರ್ವತಮ್ಮನವರ ರಥಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ಬೆಳಿಗ್ಗೆ 9.10ರ ವೇಳೆಗೆ ಸ್ವಸ್ಥಾನ ತಲುಪಿದವು. ಐದು ರಥಗಳು ರಥದ ಬೀದಿಗಳಲ್ಲಿ ಚಲಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಹಣ್ಣು-ದವನ ಎಸೆದು ಹರಕೆ ತೀರಿಸಿಕೊಂಡರು. ನವ ವಧು-ವರರು ಇಷ್ಟಾರ್ಥ ನೆರವೇರಿಸುವಂತೆ ಕೋರಿಕೊಂಡರು.

ಪ್ರಮೋದಾದೇವಿ ಒಡೆಯರ್‍ರಿಂದ ವಿಶೇಷಪೂಜೆ: ಶಾಸಕ ಬಿ.ಹರ್ಷವರ್ಧನ್ ಕೋರಿಕೆ ಮೇರೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಐದೂ ರಥಗಳ ಉತ್ಸವ ಮೂರ್ತಿಗಳಿಗೆ ಬಿಲ್ವಾರ್ಚನೆ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.

ಪ್ರಸಾದ ವಿತರಣೆ: ಇದೇ ವೇಳೆ ವಿವಿಧ ಸಂಘ ಸಂಸ್ಥೆಗಳವರು ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ರೈಸ್‍ಬಾತ್, ಮೊಸರನ್ನ, ಪುಳಿಯೋಗರೆ, ಲಾಡು, ಕುಡಿಯುವ ನೀರಿನ ಬಾಟಲ್‍ಗಳನ್ನು ವಿತರಣೆ ಮಾಡಿದರು.

ವಿಶೇಷ ಹೂವಿನ ಅಲಂಕಾರ: ರಾಜ್ಯದಲ್ಲೇ 5 ರಥಗಳು ಒಟ್ಟಿಗೆ ಸಾಗುವುದು ನಂಜನಗೂಡಿನ ದೊಡ್ಡ ಜಾತ್ರೆಯಲ್ಲಿ ಮಾತ್ರ, ಶ್ರೀಕಂಠೇಶ್ವರ ಸ್ವಾಮಿ ಅವರ ಗೌತಮ ಪಂಚಮಹಾರಥೋತ್ಸವದ ಪ್ರಯುಕ್ತ ಐದು ರಥಗಳಿಗೂ ವಿಶೇಷವಾಗಿ ನಾನಾ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಅಲ್ಲದೆ ನಗರದ ವಿವಿಧ ಕಟ್ಟಡಗಳಿಗೆ ನಿನ್ನೆಯಿಂದಲೇ ವಿಶೇಷವಾಗಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ 60ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅವಳವಡಿಸಲಾಗಿತ್ತು. 500ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿತ್ತು. ಜಾತ್ರೋತ್ಸವದ ಅಂಗವಾಗಿ ಕಳೆದ ಬುಧವಾರದಿಂದಲೇ, ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿ ದೇವತಾ ಕಾರ್ಯಗಳು ಮುಂದುವರಿದು ಇಂದು ಗೌತಮ ಪಂಚ ರಥೋತ್ಸವ ನೆರವೇರಿತು. ಮಾ.18ರಂದು ತೆಪ್ಪೋತ್ಸವ ಜರುಗ ಲಿದೆ. ಈ ಸಂದರ್ಭದಲ್ಲಿ ಶಾಸಕ ಬಿ.ಹರ್ಷವರ್ಧನ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ದೇವಾಲಯದ ಇಓ ರವೀಂದ್ರ, ಎಇಒ ವೆಂಕಟೇಶಪ್ರಸಾದ್, ನಗರಸಭಾಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ, ತಾಪಂ ಇಓ ಹೆಚ್.ಜಿ.ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.

Translate »