ಇಂದು ಪುನೀತ್ ಹುಟ್ಟುಹಬ್ಬ
ಮೈಸೂರು

ಇಂದು ಪುನೀತ್ ಹುಟ್ಟುಹಬ್ಬ

March 17, 2022

ಮೈಸೂರು,ಮಾ.16(ಜಿಎ)-ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ನಟನೆಯ ಕಡೆಯ ಚಿತ್ರ ‘ಜೇಮ್ಸ್’ ನಾಳೆ (ಮಾ.17) ರಾಜ್ಯ ಸೇರಿದಂತೆ ವಿಶ್ವದಾದ್ಯಂತ 4000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಮೈಸೂರಿನ ಗಾಯತ್ರಿ ಮತ್ತು ರಾಜ್ ಕಮಲ್ ಚಿತ್ರಮಂದಿರಗಳಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರವನ್ನು ಗುರುವಾರ ಬೆಳಗ್ಗೆ 8ರಿಂದ ರಾತ್ರಿವರೆಗೆ 5 ಪ್ರದರ್ಶನಗಳನ್ನು ಪ್ರದ ರ್ಶಿಸುತ್ತಿದ್ದು, ಮೈಸೂರಿನ ಎಲ್ಲಾ ಚಿತ್ರ ಮಂದಿರಗಳಲ್ಲಿ ಎಲ್ಲಾ ಶೋಗಳ ಟಿಕೆಟ್ ಮುಗಿದು ಹೋಗಿದೆ ಎನ್ನಲಾಗಿದೆ.

ಪುನೀತ್ ಅವರು ಮೈಸೂರಿನ ಬಗ್ಗೆ ಹೊಂದಿದ್ದ ಒಲವಿಗೆ, ಅವರ ಪ್ರೀತಿಗೆ ಪೂರಕವಾಗಿ ಮೈಸೂರಿನ ಡಿಆರ್‍ಸಿ ಚಿತ್ರಮಂದಿರದ ಮುಂದೆ ಹೆಲಿಕ್ಯಾಪ್ಟರ್ ಮೂಲಕ ಅವರ ಕಟೌಟ್‍ಗೆ ಪುಷ್ಪಾರ್ಚನೆ ಮಾಡುವ ಅದ್ಧೂರಿ ಕಾರ್ಯಕ್ರಮವನ್ನು ಮೈಸೂರಿನ ಯುವ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಮೈಸೂರಿನ ಅನೇಕ ರಸ್ತೆ, ವೃತ್ತ ಮತ್ತು ಆಟೋ ನಿಲ್ದಾಣಗಳಲ್ಲಿ ಹಾಗೂ ನಗರದ ಪ್ರಮುಖ ರಸ್ತೆಯಾದ ದೇವರಾಜ ಅರಸು ರಸ್ತೆಯಲ್ಲೂ ಪುನೀತ್ ಅವರ ಕಟೌಟ್, ಫೋಟೋಗಳನ್ನು ಅಳವಡಿಸಿ ವಿನೂತನ ಕಾರ್ಯಕ್ರಮ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ಪುನೀತ್ ಅಭಿಮಾನಿ ಸಂಘಟನೆಗಳು ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲು ಮೈಸೂರು ಮತ್ತು ನಂಜನಗೂಡಿ ನಲ್ಲಿ ಅನ್ನಸಂತರ್ಪಣೆ ಆಯೋಜಿಸಿವೆ. ಬುಧವಾರ ರಾತ್ರಿಯಿಂದಲೇ ಬೆಂಗಳೂರಲ್ಲಿ ರುವ ಅಪ್ಪು ಸಮಾಧಿ ಸ್ಥಳಕ್ಕೆ ಅಭಿಮಾನಿಗಳು ಆಗಮಿಸಿದ್ದಾರೆ. ಸಾಮಾಜಿಕ ಜಾಲತಾಣ ದಲ್ಲಿ ಪುನೀತ್ ಅವರ ಗುಣಗಾನದ ಬಗ್ಗೆ ಭಾರೀ ಪ್ರಮಾಣದಲ್ಲಿ ಪೋಸ್ಟ್‍ಗಳು ಕಂಡುಬಂತು.

Translate »