ರೊಟ್ಟಿ ನೀಡಲು ಸಾಲ   ಹೋಳಿಗೆ ತಿನ್ನಲು ಅಲ್ಲ…
News

ರೊಟ್ಟಿ ನೀಡಲು ಸಾಲ ಹೋಳಿಗೆ ತಿನ್ನಲು ಅಲ್ಲ…

March 17, 2022

ಬಜೆಟ್ ಮೇಲಿನ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಮುಖ್ಯಮಂತ್ರಿ, ಕೋವಿಡ್-19 ಸಂಕಷ್ಟದಲ್ಲೂ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮವಾಗೇ ತೆಗೆದುಕೊಂಡು ಹೋಗಿದ್ದೇವೆ, ನಮಗೆ ಸಾಲ ಮಾಡಲು ಹೆಚ್ಚಿನ ಅವಕಾಶ ಇದ್ದರೂ ಅದನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳದೆ ಜನರಿಗೆ ರೊಟ್ಟಿ ಕೊಡಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಮಾಡಿದ್ದೇವೆ ಎಂದರು. ಬಿ.ಎಸ್.ಯಡಿಯೂರಪ್ಪ ನೇತೃತ್ವ ದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈವರೆಗೂ ಹಣಕಾಸು ಶಿಸ್ತನ್ನು ಮೀರಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇರುವುದರಿಂ ದಲೇ ಇದು ಸಾಧ್ಯವಾಗಿದೆ, ನಮಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರಸ್ತೆ, ರೈಲು ಸೇರಿದಂತೆ ಎಲ್ಲಾ ಹಂತದಲ್ಲೂ ಮೂಲಸೌಕರ್ಯಗಳನ್ನು ಕಲ್ಪಿಸಲು ಮತ್ತು ಜನರಿಗೆ ಉದ್ಯೋಗ ಒದಗಿಸಲು ಸದಾ ಬೆನ್ನೆಲುಬಾಗಿ ನಿಂತಿದೆ. ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ಅಭಿ ವೃದ್ಧಿ ಮತ್ತು ದುಡಿಯುವ ಕೈಗಳಿಗೆ ಸಹಕಾರಿಯಾಗಲು ಸಾಲ ಮಾಡಿದ್ದೇವೆ. ಕೋವಿಡ್-19 ಸಾಂಕ್ರಾಮಿಕದಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿತು, ನೀವು 5 ವರ್ಷ ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯದ ಆರ್ಥಿಕ ಪ್ರಗತಿ ದರ ಶೇ.10ರಿಂದ 12 ರಷ್ಟಿದ್ದರೂ 1.20 ಲಕ್ಷ ಕೋಟಿ ರೂ. ಸಾಲ ಏಕೆ ಮಾಡಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಸಾಂಕ್ರಾಮಿಕ ಸಂಕಷ್ಟಗಳನ್ನು ನೀವು ಎದುರಿಸಲಿಲ್ಲ, ಆದರೂ ಏಕೆ ಸಾಲ ಮಾಡಿದ್ದೀರಿ. ಯಡಿಯೂರಪ್ಪನವರು ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಅತ್ಯಂತ ಸಮರ್ಥ ವಾಗಿ ನಿಭಾಯಿಸಿದ್ದಾರೆ, ನಾವೂ ಆರ್ಥಿಕ ಶಿಸ್ತನ್ನು ಕಾಪಾಡಿ ಕೊಂಡು ಬಂದಿದ್ದೇವೆ, ನಮಗೆ ಕೇಂದ್ರದ ನೆರವೂ ದೊರೆ ಯುತ್ತಿದೆ ಎಂದರು. ಕಳೆದ 2 ವರ್ಷಗಳಿಂದ ಕೋವಿಡ್ ಎದುರಾಗಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ ಅಭಿ ವೃದ್ಧಿ ಸಾಧಿಸಲು ಆಗಲಿಲ್ಲ, ಆದರೆ, ಈ ಬಾರಿ ಶೇ. 9.5ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸುವ ಗುರಿ ಇದೆ.

ಜನಾಧರಿತ ಬಜೆಟ್: ಕೋವಿಡ್‍ನಿಂದಾಗಿ ಈ ಬಾರಿ ಬಜೆಟ್ ಗಾತ್ರ ಕಡಿಮೆಯಾಗಲಿದೆ ಎಂಬ ಆತಂಕವಿತ್ತು, ಆದರೆ ಕಳೆದ ಬಜೆಟ್‍ಗಿಂತ ಶೇ.7.9ರಷ್ಟು ಬಜೆಟ್ ಗಾತ್ರ ವನ್ನು ಹೆಚ್ಚಳ ಮಾಡಿದ್ದೇವೆ, ಇದು ಜನಾಧರಿತ ಬಜೆಟ್ ಎಂದು ಬಣ್ಣಿಸಿದರು. ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಚೇತರಿಕೆ ಕಾಣುತ್ತಿವೆ, ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಕೂಡ ಸರಾಗವಾಗಿ ಹರಿದುಬರುತ್ತಿದೆ, ಇನ್ನು ಕೆಲವು ದಿನಗಳಲ್ಲೇ ಮೊದಲಿನ ಪ್ರಗತಿಪರ ಸ್ಥಿತಿಗೆ ತಲುಪುತ್ತೇವೆ ಎಂದರು. ಹಾಲು ಉತ್ಪಾದನೆ ಒಂದು ಪ್ರಮುಖ ಚಟುವಟಿಕೆಯಾಗಿದ್ದು, ರೈತರಿಗೆ ಸಾಕಷ್ಟು ವರಮಾನ ತಂದುಕೊಡಲಿದೆ, ಲಕ್ಷಾಂತರ ರೈತರು ಇದರ ಪ್ರಯೋಜನ ಪಡೆಯುತ್ತಿದ್ದು, ತಿಂಗಳಿಗೆ 20 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಆರ್ಥಿಕ ಅಭಿವೃದ್ಧಿ ಮತ್ತು ಸ್ವಾವಲಂಬನೆ ಸಾಧಿಸಲು ಹಾಲು ಉತ್ಪಾದನೆಗಾಗಿಯೇ ಸರ್ಕಾರ ಹಾಲು ಉತ್ಪಾದಕ ಬ್ಯಾಂಕ್ ಸ್ಥಾಪನೆ ಮಾಡಲಿದೆ ಎಂದು ಅವರು ಘೋಷಿಸಿದರು. ಇದಕ್ಕಾಗಿ ಸರ್ಕಾರ 100 ಕೋಟಿ ರೂ. ಅನುದಾನ ನೀಡಲಿದೆ, ಇತರರು ತಲಾ 1000 ರೂ. ಬಂಡವಾಳ ಠೇವಣಿ ಇಡಬೇಕು, ಇದನ್ನು ಸರಿಯಾಗಿ ನಿರ್ವಹಿಸಿದರೆ ಹಾಲು ಉತ್ಪಾದಕ ಬ್ಯಾಂಕ್ ಅಪೆಕ್ಸ್ ಬ್ಯಾಂಕ್ ಆಗಿ ಅಭಿವೃದ್ಧಿಯಾಗಲಿದೆ. ಕೇಂದ್ರ ಸರ್ಕಾರದ ಯಶಸ್ವಿನಿ ಯೋಜನೆಯು ಅನೇಕರಿಗೆ ಲಾಭವಾಗುತ್ತಿತ್ತು, ತಾವು ಎಲ್ಲಿಗೆ ಭೇಟಿ ಕೊಟ್ಟರೂ ಜನ ಈ ಯೋಜನೆಯನ್ನು ಮರುಸ್ಥಾಪನೆ ಮಾಡಬೇಕೆಂಬ ಬೇಡಿಕೆ ಇಡುತ್ತಿದ್ದರು. ಆಯುಷ್ಮಾನ್ ಭಾರತ್ ಯೋಜನೆಯಿದ್ದರೂ ಕೆಲವು ಆಸ್ಪತ್ರೆಗಳಿಗೆ ಹೋಗಲು ಅನೇಕ ದಾಖಲಾತಿಗಳನ್ನು ಕೇಳುತ್ತಿದ್ದರು. ಈಗ ಆಯುಷ್ಮಾನ್ ಭಾರತ್ ಯೋಜನೆ ಪ್ರಯೋಜನ ಪಡೆಯಲು ತೊಂದರೆಯಾಗದಂತೆ ಯಶಸ್ವಿನಿ ಯೋಜನೆ ಯನ್ನು ರಾಜ್ಯದಲ್ಲಿ ಪುನಃ ಅನುಷ್ಠಾನ ಮಾಡುವುದಾಗಿ ಪ್ರಕಟಿಸಿದರು.

ತಾಲೂಕು ಅಭಿವೃದ್ಧಿಗೆ ಹಣ ಬೇಕು: ರಾಜ್ಯದ 93 ತಾಲೂಕುಗಳನ್ನು ಅಪೇಕ್ಷಿತ ತಾಲೂಕುಗಳು ಎಂದು ಘೋಷಿಸಲಾಗಿದೆ, 102 ತಾಲೂಕುಗಳಲ್ಲಿ ಅಪೌಷ್ಟಿಕತೆ, 100 ತಾಲೂಕುಗಳಲ್ಲಿ ಸರಾಸರಿ ಆರೋಗ್ಯ ಸ್ಥಿತಿ ಕಡಿಮೆಯಿದೆ. ಆರೋಗ್ಯ, ಶಿಕ್ಷಣ, ಪೌಷ್ಟಿಕ ಆಹಾರ ಎಲ್ಲರಿಗೂ ಸಿಗಬೇಕು, ಅದಕ್ಕಾಗಿ 3,000 ಕೋಟಿ ರೂ. ವೆಚ್ಚದಲ್ಲಿ ಅಪೇಕ್ಷಿತ ತಾಲೂಕುಗಳನ್ನು ಅಭಿವೃದ್ಧಿಪಡಿಸಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ರಾಜ್ಯದ 5 ನಗರಗಳಲ್ಲಿ ವಸತಿ ಸಮುಚ್ಚಯ ಯೋಜನೆ ಜಾರಿ ಮಾಡಲಾಗುವುದು. ಕರ್ನಾಟಕ ದೇಶದಲ್ಲೇ ಅತ್ಯಂತ ಪ್ರಗತಿಪರ ರಾಜ್ಯವಾಗಿದೆ, ಇನ್ನು ಮುಂದೆ ಎನ್‍ಐಟಿ, ಐಐಟಿ ಮಾದರಿಯಲ್ಲಿ ರಾಜ್ಯದಲ್ಲೂ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು 6 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಮೇಲ್ದರ್ಜೆ ಗೇರಿಸಲಾಗುವುದು, ಕೇಂದ್ರ ಸರ್ಕಾರದಲ್ಲಿರುವಂತೆ ಐಐಟಿ, ಎನ್‍ಐಟಿ ಮಾದರಿಯಲ್ಲಿ ಕೆಐಟಿ ಪ್ರಾರಂಭಿಸುವುದಾಗಿ ಹೇಳಿದರು. ರಾಜ್ಯದಲ್ಲಿ ಬಂಡವಾಳ ಹೂಡುವ ಉದ್ಯಮಿಗಳಿಗೆ ಈಗಾಗಲೇ ಕೈಗಾರಿಕಾ ನೀತಿ ಜಾರಿ ಮಾಡಲಾಗಿದೆ, ಬಂಡವಾಳ ಹೂಡಿ, ಉದ್ಯಮ ಆರಂಭಿಸಿ, ಕೈಗಾರಿಕೆ ಸ್ಥಾಪಿಸಿ, ಯಾರು ಹೆಚ್ಚು ಉದ್ಯೋಗ ನೀಡುವವರೋ ಅವರಿಗೆ ತೆರಿಗೆ ವಿನಾಯಿತಿ ನೀಡಲಾಗುವುದು, ಇದಕ್ಕಾಗಿ ಉದ್ಯೋಗ ನೀತಿಯನ್ನು ಏಪ್ರಿಲ್‍ನಲ್ಲಿ ಜಾರಿಗೆ ಮಾಡುತ್ತೇವೆ. ರಾಜ್ಯದಲ್ಲಿ ಶೀಘ್ರದಲ್ಲೇ ಸೆಮಿಕಂಡಕ್ಟರ್ ನೀತಿಯನ್ನೂ ಜಾರಿ ಮಾಡುತ್ತೇವೆ, ಕರ್ನಾಟಕದಲ್ಲೇ ಅತೀ ಹೆಚ್ಚು ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಿವೆ, ಇದು ಜನಪರ ಸರ್ಕಾರ ಎನ್ನುವುದಕ್ಕೆ ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸಮರ್ಥಿಸಿಕೊಂಡರು.

Translate »