ಪ್ರಧಾನಿ ಮೋದಿ ಸೇರಿ ಬಿಜೆಪಿ ಉನ್ನತ ನಾಯಕರ ಸಮ್ಮುಖದಲ್ಲಿ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ
News

ಪ್ರಧಾನಿ ಮೋದಿ ಸೇರಿ ಬಿಜೆಪಿ ಉನ್ನತ ನಾಯಕರ ಸಮ್ಮುಖದಲ್ಲಿ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ

June 25, 2022

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಒಡಿಶಾ ಮೂಲದ ಬುಡಕಟ್ಟು ಜನಾಂಗದ ಮಹಿಳೆ, ಜಾರ್ಖಂಡ್ ಮಾಜಿ ರಾಜ್ಯ ಪಾಲೆ ದ್ರೌಪದಿ ಮುರ್ಮು ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟದ ಉನ್ನತ ಸಚಿವರು, ಬಿಜೆಪಿ ಮತ್ತು ಎನ್‍ಡಿಎ ಮೈತ್ರಿಕೂಟದ ರಾಜ್ಯಗಳ ಮುಖ್ಯಮಂತ್ರಿ ಗಳ ಸಮ್ಮುಖದಲ್ಲಿ ಇಂದು ಮಧ್ಯಾಹ್ನ ದೆಹಲಿಯ ಸಂಸತ್ತು ಭವನದಲ್ಲಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಅವರ ಉಮೇದುವಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮೊದಲು ಸೂಚಿಸಿದ್ದಾರೆ. ಮುರ್ಮು ಅವರ ಉಮೇದುವಾರಿಕೆಗೆ ಬಿಜೆಪಿ ನಾಲ್ಕು ಪ್ರತಿಯ ನಾಮಪತ್ರಗಳನ್ನು ಸಿದ್ಧ ಪಡಿ ಸಿತ್ತು. ಪ್ರಧಾನಿಯವರು ಮಾತ್ರವಲ್ಲದೆ, ಹಿರಿಯ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ನಾಮಪತ್ರಕ್ಕೆ ಸಹಿ ಹಾಕಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಗುಜರಾತ್ ಸಿಎಂ ಭೂಪೇಂದರ್ ಪಟೇಲ್ ಸೇರಿದಂತೆ ಎಲ್ಲಾ ಬಿಜೆಪಿ ನೇತೃತ್ವದ ರಾಜ್ಯಗಳ ಮುಖ್ಯಮಂತ್ರಿಗಳು, ಹಾಗೆಯೇ ಪಕ್ಷದ ಮಹಿಳೆಯರು ಮತ್ತು ಬುಡಕಟ್ಟು ಸಂಸದರು, ಶಾಸಕರ ಸಂಪೂರ್ಣ ತಂಡ ಸಹ ಸಹಿ ಹಾಕಿವೆ.

ಎನ್‍ಡಿಎ ನಾಯಕರ ಜೊತೆಗೆ, ಮೈತ್ರಿಕೂಟದ ಭಾಗವಾಗಿರದ ವೈಎಸ್‍ಆರ್ ಕಾಂಗ್ರೆಸ್‍ನ ವಿಜಯಸಾಯಿ ರೆಡ್ಡಿ ಮತ್ತು ಬಿಜೆಡಿ ನಾಯಕ ಸಸ್ಮಿತ್ ಪಾತ್ರಾ ಅವರು ಎನ್ ಡಿಎ ನಾಮನಿರ್ದೇಶನವನ್ನು ಬೆಂಬಲಿಸಲು ಇಂದು ಸಂಸತ್ತಿನಲ್ಲಿದ್ದರು. ಎಐಎಡಿಎಂಕೆ ನಾಯಕ ಓ ಪನೀರ್‍ಸೆಲ್ವಂ ಮತ್ತು ಜೆಡಿಯುನ ರಾಜೀವ್ ರಂಜನ್ ಸಿಂಗ್ ಮುರ್ಮು ಬೆಂಬಲಿಸಿ ಇಂದು ಬೆಳಗ್ಗೆಯೇ ಸಂಸತ್ತಿಗೆ ಆಗಮಿಸಿದರು.

ರಾಷ್ಟ್ರನಾಯಕರ ಪ್ರತಿಮೆಗಳಿಗೆ ಪುಷ್ಪ ನಮನ: ತಮ್ಮ ನಾಮಪತ್ರಗಳನ್ನು ಸಲ್ಲಿಸುವ ಮೊದಲು, ಮುರ್ಮು ಅವರು ಮಹಾತ್ಮ ಗಾಂಧಿ, ಬಿ.ಆರ್. ಅಂಬೇಡ್ಕರ್ ಮತ್ತು ಬಿರ್ಸಾ ಮುಂಡಾ ಅವರ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದರು.

ರಾಷ್ಟ್ರಪತಿಯಾಗಿ ಆಯ್ಕೆಯಾಗಬೇಕಾದರೆ ಪ್ರತಿ ನಾಮನಿರ್ದೇಶನವು ಚುನಾಯಿತ ಪ್ರತಿನಿಧಿಗಳಲ್ಲಿ 50 ಪ್ರತಿಪಾದಕರು ಮತ್ತು 50 ಎರಡನೇ ಅನುಯಾಯಿಗಳನ್ನು ಹೊಂದಿರಬೇಕು. ಮುರ್ಮು ಅವರು ಆಯ್ಕೆಯಾದರೆ, ದೇಶದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿ ಮತ್ತು ಎರಡನೇ ಮಹಿಳೆ ಎನಿಸಿಕೊಳ್ಳಲಿದ್ದಾರೆ.

Translate »