ಕೆರೆ ಒತ್ತುವರಿ ತೆರವುಗೊಳಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಲೋಕಾಯುಕ್ತಕ್ಕೆ ದೂರು
ಮೈಸೂರು

ಕೆರೆ ಒತ್ತುವರಿ ತೆರವುಗೊಳಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಲೋಕಾಯುಕ್ತಕ್ಕೆ ದೂರು

January 30, 2021

ಮೈಸೂರು, ಜ.29-ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದಿಂದ ಸೂಚನೆ ಬಂದಿದ್ದರೂ, ಕೆರೆ ಒತ್ತುವರಿ ತೆರವುಗೊಳಿಸುವಲ್ಲಿ ನಿರ್ಲಕ್ಷ್ಯತೆ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾ ಜಿಕ ಕಾರ್ಯಕರ್ತರೊಬ್ಬರು ಕರ್ನಾಟಕ ಲೋಕಾ ಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಸಾಮಾಜಿಕ ಕಾರ್ಯಕರ್ತ ಬೋರೇಗೌಡ ಎಂಬುವರು ತಿ.ನರಸೀಪುರ ತಹಸೀಲ್ದಾರ್ ನಾಗೇಶ್, ತಹಸೀಲ್ದಾರ್ ಕಚೇರಿಯ ಭೂ ಅಭಿವೃದ್ಧಿ ವಿಭಾಗದ ಕ್ಲರ್ಕ್ ಕೆ.ಆರ್. ಹರ್ಷಕುಮಾರ್, ಬನ್ನೂರು ನಾಡ ಕಚೇರಿಯ ಗ್ರಾಮ ಸಹಾಯಕ ಸೋಮಶೇಖರ್, ಪಾಂಡವಪುರ ನೀರಾವರಿ ಇಲಾಖೆಯ ಎಇಇ ಕುಮಾರಸ್ವಾಮಿ ಮತ್ತು ಕೆಆರ್‍ಎಸ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.

ವಿವರ: ಕೊಡಗಹಳ್ಳಿ ಗ್ರಾಮದ ಕೆರೆಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ತೆರವುಗೊಳಿಸಿ ಕೆರೆ ಹೂಳೆತ್ತಿಸುವಂತೆ ತಾವು 2017ರ ಆಗಸ್ಟ್ 9ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದ್ದು, ಅದಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾ ಲಯವು 2020ರ ಆಗಸ್ಟ್ 28ರಂದು ತನ್ನ ಮನವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸುತ್ತೋಲೆ ರವಾನಿಸಿತ್ತು ಎಂದು ಬೋರೇಗೌಡ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಕಾರ್ಯಾಲಯದ ಸುತ್ತೋಲೆಯನ್ವಯ ಕ್ರಮ ಕೈಗೊಳ್ಳುವಂತೆ 2017ರ ಡಿಸೆಂಬರ್ 14ರಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದರು. ಅದರನ್ವಯ ಜಿಲ್ಲಾಧಿಕಾರಿಗಳು 2018ರ ಫೆಬ್ರವರಿ 1ರಂದು ಕೆರೆ ಒತ್ತುವರಿ ತೆರವುಗೊಳಿಸಿ ಹೂಳೆತ್ತುವಂತೆ ಸಂಬಂಧಪಟ್ಟ ನೀರಾವರಿ ಇಲಾಖೆ ಅಭಿಯಂತರರಿಗೆ ಸೂಚಿಸಿದ್ದರು. ಅದರನ್ವಯ ಪ್ರಕ್ರಿಯೆಗಳು ನಡೆದು 2019ರ ಫೆಬ್ರವರಿ 7ರಂದು ಬನ್ನೂರು ಹೋಬಳಿಯ ರಾಜಸ್ವ ನಿರೀಕ್ಷಕರು, ಭೂ ಮಾಪಕರು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸರ್ವೆ ನಂಬರ್ 95ರಲ್ಲಿ ಇರುವ 50.38 ಗುಂಟೆ ವಿಸ್ತೀರ್ಣದ ಕೆರೆಯನ್ನು ಗುರುತಿಸಿ ಕಲ್ಲುಗಳನ್ನು ನೆಟ್ಟು ಬಣ್ಣ ಬಳಿದಿರುತ್ತಾರೆ. ಆದರೆ ಈ ಕಾರ್ಯವು ಅಷ್ಟಕ್ಕೇ ಸ್ಥಗಿತಗೊಂಡಿದ್ದು, ಒತ್ತುವರಿ ತೆರವು ಕಾರ್ಯ ನಡೆದಿಲ್ಲ. ಕೆರೆ ಹೂಳೆತ್ತುವ ಕಾರ್ಯವೂ ನಡೆದಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ದೂರು ಸಲ್ಲಿಸಿರುವ ಅವರು, ಈಗಲೂ ಕೂಡ ಕೆರೆ ಒತ್ತುವರಿ ತೆರವು ಕಾರ್ಯ ನಡೆಯದೇ ಇದ್ದಲ್ಲಿ ತಾನು ದಯಾಮರಣಕ್ಕಾಗಿ ರಾಷ್ಟ್ರಪತಿಗಳ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

Translate »