ನಿಜಾಮುದ್ದೀನ್ ಮರ್ಕಜ್ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ 13 ಮಂದಿಗೆ ಕೊರೊನಾ ವೈರಸ್ ಸೋಂಕು
ಮೈಸೂರು

ನಿಜಾಮುದ್ದೀನ್ ಮರ್ಕಜ್ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ 13 ಮಂದಿಗೆ ಕೊರೊನಾ ವೈರಸ್ ಸೋಂಕು

April 4, 2020

ಬೆಂಗಳೂರು,ಏ.3-ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಮೂಲದವರ ಪೈಕಿ 13 ಮಂದಿಗೆ ಕೋವಿಡ್ 19 ವೈರಸ್ ಸೋಂಕು ತಗುಲಿರು ವುದು ಪತ್ತೆಯಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ವೈರಸ್ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡುವ ಜವಾಬ್ದಾರಿ ಹೊತ್ತ ಬಳಿಕ ಮೊದಲ ಸುದ್ದಿಗೋಷ್ಟಿ ಯನ್ನುದ್ದೇಶಿಸಿ ಮಾತನಾಡಿದ ಸುರೇಶ್‍ಕುಮಾರ್, ರಾಜ್ಯದಿಂದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ಧಾರ್ಮಿಕ ಸಭೆಗೆ ಪಾಲ್ಗೊಳ್ಳಲು ತೆರಳಿದ್ದವರ ಪೈಕಿ 13 ಮಂದಿಗೆ ಕೊರೋನಾ ವೈರಸ್ ತಗುಲಿದೆ. ಈ ವರೆಗೂ ಸಭೆಗೆ ಹಾಜರಾಗಿದ್ದ 187 ಮಂದಿಯ ವೈದ್ಯಕೀಯ ತಪಾಸಣೆ ವರದಿ ನೆಗೆಟಿವ್ ಬಂದಿದೆ. ಇನ್ನೂ 88 ಮಂದಿಯ ವರದಿ ಬಂದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ 128ಕ್ಕೆ ಏರಿಕೆ: ಇನ್ನು ಇಂದು ರಾಜ್ಯದಲ್ಲಿ ಮತ್ತೆ ಹಲವು ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. ಬಾಗಲಕೋಟೆಯಲ್ಲಿ ಒಬ್ಬರು ಮತ್ತು ಬೆಳಗಾವಿಯಲ್ಲಿ ಮೂವರಲ್ಲಿ ಇಂದು ವೈರಸ್ ಸೋಂಕು ದೃಢಪಟ್ಟಿದೆ. ಈ ಪೈಕಿ ಬೆಳಗಾವಿಯಲ್ಲಿ ಪತ್ತೆಯಾಗಿರುವ 3 ಪ್ರಕರಣಗಳಿಗೂ ದೆಹಲಿ ಮಸೀದಿ ಧಾರ್ಮಿಕ ಸಭೆಯ ನಂಟಿದೆ. ಈ ಮೂವರೂ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿ ದ್ದರು ಎನ್ನಲಾಗಿದೆ. ಇನ್ನು ಕೊರೊನಾ ವೈರಸ್ ಸೋಂಕಿನಿಂದ ರಾಜ್ಯದಲ್ಲಿ ಈವರೆಗೆ ನಾಲ್ವರು ಮೃತಪಟ್ಟಿದ್ದಾರೆ. ಸೋಂಕು ದೃಢಪಟ್ಟಿದ್ದ 11 ಮಂದಿ ಸೂಕ್ತ ಚಿಕಿತ್ಸೆಯೊಂದಿಗೆ ಸೋಂಕು ಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸೋಂಕಿತರಲ್ಲಿ 111 ಮಂದಿ ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಒಬ್ಬರು ಗರ್ಭಿಣಿ ಸಹ ಸೇರಿದ್ದಾರೆ. ಮೂವರು ತುರ್ತು ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಈವರೆಗೆ 341 ವ್ಯಕ್ತಿಗಳನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದ್ದು, ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಯಲ್ಲಿ ನಡೆದ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡವರೆಲ್ಲರೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವರದಿ ಮಾಡಿಕೊಳ್ಳಬೇಕು. 080-29711171 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »