ಬಂದ್ ಇಲ್ಲ, ಬರೀ ಪ್ರತಿಭಟನೆ
ಮೈಸೂರು

ಬಂದ್ ಇಲ್ಲ, ಬರೀ ಪ್ರತಿಭಟನೆ

December 6, 2020

ಬೆಂಗಳೂರು, ಡಿ. 5(ಕೆಎಂಶಿ)- ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ, ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಕರೆದಿದ್ದ ‘ಕರ್ನಾಟಕ ಬಂದ್’ ಕೇವಲ ಪ್ರತಿಭಟನೆಗೆ ಸೀಮಿತಗೊಂಡಿತು.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮೂಲೆ ಗಳಲ್ಲಿ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು. ಆದರೆ ಪ್ರತಿಭಟನೆಗೆ ಮಣಿದು ರಾಜ್ಯದ ಯಾವುದೇ ಭಾಗದಲ್ಲೂ ಬಂದ್ ಆಗಲಿಲ್ಲ. ಜನಜೀವನ ಎಂದಿ ನಂತೆ ಸಹಜ ಸ್ಥಿತಿಯಲ್ಲಿತ್ತು. ಎಲ್ಲಿಯೂ ಯಾವುದಕ್ಕೂ ಕೊರತೆಯಾಗಲಿಲ್ಲ. ಪ್ರತಿಭಟನಾಕಾರರು ಕೆಲವೆಡೆ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ್ದನ್ನು ಹೊರತುಪಡಿಸಿದರೆ, ಎಲ್ಲಿಯೂ ಸ್ವಯಂ ಪ್ರೇರಿತವಾಗಿ ಬಂದ್ ಆಗಲಿಲ್ಲ. ಬಂದ್‍ಗೆ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರತಿಭಟನಾಕಾರರು ರಸ್ತೆಗಿಳಿದು ಗುಂಪು ಸೇರುತ್ತಿದ್ದಂತೆ ಪೊಲೀಸರು ಅವರನ್ನು ಚದುರಿ ಸುವುದು ಇಲ್ಲವೇ ಬಂಧಿಸುವ ಕೆಲಸ ಮಾಡಿದರು.

ಸಣ್ಣ ಪುಟ್ಟ ಘಟನೆ ಹೊರತುಪಡಿಸಿದರೆ, ಈ ಪ್ರತಿ ಭಟನೆಯಿಂದ ಎಲ್ಲಿಯೂ ಕಾನೂನು ಸುವ್ಯವಸ್ಥೆ ಹದಗೆಡ ಲಿಲ್ಲ. ರಾಜ್ಯ ಸರ್ಕಾರ ಬಂದ್‍ಗೆ ಸ್ಪಂದಿಸದ ಕಾರಣ ರಾಜ್ಯ ಸರ್ಕಾರಿ ಬಸ್‍ಗಳು ಎಂದಿನಂತೆ ರಸ್ತೆಗಿಳಿದಿದ್ದವು. ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು, ಕೈಗಾರಿಕೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ವಾಣಿಜ್ಯ ಚಟುವಟಿಕೆಗೆ ಎಲ್ಲಿಯೂ ಅಡ್ಡಿಯಾಗಲಿಲ್ಲ. ಆರೋಗ್ಯ ಸೇವೆ ಎಂದಿನಂತೆ ಲಭ್ಯವಾಗಿತ್ತು.

ಕನ್ನಡಪರ ಸಂಘಟನೆಗಳು ಮುಖ್ಯಮಂತ್ರಿಯವರ ನಿವಾಸ, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಕಚೇರಿಗಳ ಮುತ್ತಿಗೆಗೆ ಕರೆ ನೀಡಿದ್ದವು.

ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆ ಪೊಲೀಸರು ಹೋರಾಟ ಗಾರರನ್ನು ಬಂಧಿಸುವ ಕೆಲಸ ಮಾಡಿದರು. ಸರ್ಕಾರ ಹಾಗೂ ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದ ಬೇಸತ್ತ ಹೋರಾಟಗಾರರು ಬರುವ ಗುರುವಾರದಂದು ಮತ್ತೊಂದು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಅಂದಿನ ಸಭೆಯಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ, ಜೈಲ್ ಭರೋ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿವೆ. ಅಷ್ಟೇ ಅಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಕಾವೇರಿ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಸರ್ಕಾರದ ನಿಲುವಿನಿಂದ ಆಕ್ರೋಶಗೊಂಡ ಪ್ರತಿಭಟನಕಾರರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದರು. ಕನ್ನಡಿಗರ ಕೈಯ್ಯಲ್ಲಿ ಚೆಂಬು ಕೊಟ್ಟ ಮುಖ್ಯಮಂತ್ರಿಯವರು ಮರಾಠಿಗರಿಗೆ ಅಕ್ಷಯ ಪಾತ್ರೆ ನೀಡಿದ್ದಾರೆ ಎಂದು ಘೋಷಣೆ ಕೂಗಿದರು. ನಿಗಮ ರಚನೆ ಮೂಲಕ ಕನ್ನಡಿಗರು, ಕರ್ನಾಟಕದ ಮರಾಠಿಗರ ನಡುವೆ ಕಂದಕ ಮೂಡಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ಅದರಲ್ಲೂ ವಾಟಾಳ್ ನಾಗರಾಜ್, ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಲ್ಲದೆ, ಅವರೊಬ್ಬ ಹಿಟ್ಲರ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶಕ್ಕೆ ಯಡಿಯೂರಪ್ಪ ನಾಲಾಯಕ್, ಇವರ ಪೊಲೀಸ್ ದಬ್ಬಾಳಿಕೆಗೆ ನಾವು ಹೆದರುವುದಿಲ್ಲ. ಪೊಲೀಸ್ ಬಳಕೆ ಮಾಡಿಕೊಂಡದ್ದು ಕನ್ನಡಪರ ಹೋರಾಟ ಗಾರರನ್ನು ಬಂಧಿಸಿ, ಬಾಯಿ ಮುಚ್ಚಿಸುವ ಕೆಲಸ ಮಾಡಿದೆ. ಯಡಿಯೂರಪ್ಪ ಅವರನ್ನು ರಾಜ್ಯವೇ ವಿರೋಧಿಸಬೇಕು. ಸರ್ಕಾರದ ಈ ನಿಲುವಿನ ಬಗ್ಗೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಪ್ರತಿಭಟಿಸಬೇಕೆಂದು ಒತ್ತಾಯಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇದನ್ನು ಖಂಡಿಸದೇ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

Translate »