ಯಾವೊಬ್ಬ ಭಾರತೀಯನೂ ಫೆ.14 ಮರೆಯಲ್ಲ
ಮೈಸೂರು

ಯಾವೊಬ್ಬ ಭಾರತೀಯನೂ ಫೆ.14 ಮರೆಯಲ್ಲ

February 15, 2021

ಚೆನ್ನೈ, ಫೆ.14-ಫೆಬ್ರವರಿ 14ರ ಈ ದಿನವನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. 2 ವರ್ಷಗಳ ಹಿಂದೆ (2019ರ ಫೆಬ್ರವರಿ 14) ಜಮ್ಮು-ಕಾಶ್ಮೀರದ ಪುಲ್ವಾಮಾ ಮೇಲೆ ಭಯೋತ್ಪಾದಕ ದಾಳಿ ನಡೆಯಿತು. ಆ ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರಿಗೆ ನಾವು ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ನಮ್ಮ ಸೇನಾಪಡೆಯ ಮೇಲೆ ನಮಗೆ ಹೆಮ್ಮೆಯಿದೆ. ಸೈನಿಕರ ಶೌರ್ಯ, ಸಾಹಸ ತಲೆಮಾರುಗಳವರೆಗೆ ದೇಶದ ಜನತೆಗೆ ಅದರಲ್ಲೂ ಯುವಪಡೆಗೆ ಸ್ಫೂರ್ತಿದಾಯಕವಾಗಲಿದೆ ಎಂದು ಪುಲ್ವಾಮಾ ದಾಳಿ ಬಗ್ಗೆ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. 2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ ಮೇಲೆ ನಡೆದ ಭಯೋತ್ಪಾದಕರ ಆತ್ಮಹತ್ಯಾ ದಾಳಿಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ನಂತರ ಉಗ್ರರನ್ನು ಸದೆಬಡಿಯುವಲ್ಲಿ ಭಾರತೀಯ ಸೈನಿಕರು ತೋರಿಸಿದ ಧೈರ್ಯ ಮೆಚ್ಚುವಂಥಹದ್ದು ಎಂದು ಪ್ರಧಾನಿ ಮೋದಿ ಇಂದು ಚೆನ್ನೈಯಲ್ಲಿ ಅರ್ಜುನ್ ಯುದ್ಧ ಟ್ಯಾಂಕ್ ಅನ್ನು ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅವರಿಗೆ ಹಸ್ತಾಂತರಿಸಿ, ಮಾತನಾಡಿದರು. ತಮಿಳಿನ ಖ್ಯಾತ ಲೇಖಕ ಮತ್ತು ಕವಿ ಸುಬ್ರಹ್ಮಣ್ಯ ಭಾರತಿ ಅವರ ಮಾತುಗಳನ್ನು ಉಲ್ಲೇಖಿಸಿದ ಪ್ರಧಾನಿ, ಸುಬ್ರಹ್ಮಣ್ಯ ಭಾರತಿ ಅವರ ದೃಷ್ಟಿಕೋನ ದಿಂದ ಸ್ಫೂರ್ತಿ ಪಡೆದು ರಕ್ಷಣಾ ವಲಯದಲ್ಲಿ ಇಂದು ಭಾರತ ಸ್ವಾವಲಂಬಿಯಾಗಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂದರು. ‘ನಾವು ಶಸ್ತ್ರಾಸ್ತ್ರಗಳನ್ನು ತಯಾರಿಸೋಣ, ಪೇಪರ್‍ಗಳನ್ನು ತಯಾರಿಸೋಣ, ಫ್ಯಾಕ್ಟರಿಗಳನ್ನು ಮಾಡೋಣ, ಶಾಲೆಗಳು, ವಾಹನಗಳು, ಹಡಗು ನಿರ್ಮಿಸೋಣ, ಸ್ವಾವಲಂಬಿಗಳಾಗೋಣ’ ಎಂದು ಸುಬ್ರಹ್ಮಣ್ಯ ಭಾರತಿ ಹೇಳಿದ್ದರು. ಅವರ ಉಲ್ಲೇಖವನ್ನು ಪ್ರಧಾನಿ ನೆನಪು ಮಾಡಿಕೊಂಡರು.

2 ರಕ್ಷಣಾ ಕಾರಿಡಾರ್‍ಗಳಲ್ಲಿ ಒಂದು ತಮಿಳುನಾಡಿನಲ್ಲಿದೆ. ಹೂಡಿಕೆಯ ಮೊತ್ತ ಅದಕ್ಕೆ 8 ಸಾವಿರದ 100 ಕೋಟಿ ರೂಪಾಯಿಯಾಗಿದೆ. ನಮ್ಮ ಗಡಿಗಳನ್ನು ಕಾಪಾಡಲು ಸೈನಿಕರಿಗೆ ಅಗತ್ಯವಾಗಿರುವ ಮತ್ತೊಂದು ಕಾರಿಡಾರನ್ನು ದೇಶಕ್ಕೆ ಸಮರ್ಪಿಸಲು ನನಗೆ ಇಂದು ಹೆಮ್ಮೆಯಾಗುತ್ತಿದೆ ಎಂದರು. ಜಗತ್ತಿನಲ್ಲಿಯೇ ಅತ್ಯಂತ ಆಧುನಿಕ ಶಸ್ತ್ರಪಡೆಗಳನ್ನು ಹೊಂದಿದ ಸೇನಾಪಡೆಯನ್ನಾಗಿ ಭಾರತವನ್ನು ಮಾಡಲು ಸರ್ಕಾರ ಬದ್ಧವಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಅದರೊಟ್ಟಿಗೆ ರಕ್ಷಣಾ ವಲಯದಲ್ಲಿ ಅತ್ಯಂತ ವೇಗವಾಗಿ ಸ್ವಾವಲಂಬನೆ ಸಾಧಿಸಲು ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಸೇನೆಗೆ ಹಸ್ತಾಂತರ: ಪ್ರಧಾನಿ ಮೋದಿ ತಮಿಳುನಾಡಿನ ಚೆನ್ನೈನಲ್ಲಿ ಅರ್ಜುನ್ ಯುದ್ಧ ಟ್ಯಾಂಕ್ ಎಂಕೆ-ಒನ್-ಎ ಅನ್ನು ಸೇನೆಗೆ ಹಸ್ತಾಂತರಿಸಿದರು. ಡಿಆರ್‍ಡಿಒದ ಯುದ್ಧ ವಾಹನಗಳ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ, ತಯಾರಿಸಿರುವ ಸ್ವದೇಶಿ ನಿರ್ಮಿತ ಯುದ್ಧ ಟ್ಯಾಂಕ್‍ನ ವಂದನೆ ಸ್ವೀಕರಿಸಿದರು.

ಹಳ್ಳಿಹಳ್ಳಿಗೂ ಬ್ರಾಡ್ ಬಾಂಡ್: ಭಾರತದ ಪ್ರತಿಯೊಂದು ಹಳ್ಳಿ ಹಳ್ಳಿಗೂ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಕೇರಳದ ಕೊಚ್ಚಿಯಲ್ಲಿ ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಚಾಲನೆ ನೀಡಿದರು. ಇಂದು ಉದ್ಘಾಟನೆ ಆಗುತ್ತಿರುವ ಯೋಜನೆಗಳು ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಗೆ ಪೂರಕವಾಗಿರಲಿವೆ ಎಂದರು.

 

 

 

Translate »