ರಾಜಕೀಯ ಮಾತಾಡಿಲ್ಲ,  ಕ್ಷಮೆ ಕೇಳುವುದಿಲ್ಲ
News

ರಾಜಕೀಯ ಮಾತಾಡಿಲ್ಲ, ಕ್ಷಮೆ ಕೇಳುವುದಿಲ್ಲ

July 11, 2021

ಬೆಂಗಳೂರು, ಜು. 10- ನಾನು ಯಾರ ಮನಸ್ಸನ್ನು ನೋಯಿಸುವ ಮನುಷ್ಯನಲ್ಲ, ನನ್ನ ಹೇಳಿಕೆಯಿಂದ ಏನು ತಪ್ಪಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರ ಕಾರ್ಯಕರ್ತರು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಲು ಬಂದಿದ್ದಾರೆ ಎಂದು ನನಗೆ ಗೊತ್ತಿಲ್ಲ, ಕುಮಾರಸ್ವಾಮಿಯವರ ಬಳಿ ಕ್ಷಮೆ ಕೇಳುವಂತಹ ತಪ್ಪನ್ನು, ಮಾತುಗಳನ್ನು ನಾನು ಆಡಿಲ್ಲ ಎಂದು ಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ತಿಳಿಸಿದ್ದಾರೆ.

ನಿನ್ನೆ ಮಾಧ್ಯಮಗಳ ಮುಂದೆ ಅಂಬರೀಷ್ ಸ್ಮಾರಕ, ಆಡಿಯೊ-ವಿಡಿಯೋ ಬಗ್ಗೆ ನೀಡಿದ್ದ ಹೇಳಿಕೆ ನಂತರ ತೀವ್ರ ವಿರೋಧ ವ್ಯಕ್ತವಾಗಿ ಇಂದು ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಜೆಡಿಎಸ್ ಕಾರ್ಯಕರ್ತರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳು ಯತ್ನಿಸಿದ್ದರು. ನಂತರ ಪೆÇಲೀಸರು ಅವರನ್ನು ನಿಯಂತ್ರಿಸಿದರು. ಈ ಹಿನ್ನೆಲೆಯಲ್ಲಿ ಇಂದು ತಮ್ಮ ನಿವಾಸ ಮುಂದೆ ಮಾಧ್ಯಮಗಳಿಗೆ ಮತ್ತೆ ಪ್ರತಿಕ್ರಿಯೆ ನೀಡಿದ ರಾಕ್‍ಲೈನ್ ವೆಂಕಟೇಶ್, ಮಂಡ್ಯ ರಾಜಕೀಯ ವಿಷಯದಲ್ಲಿ ನಾನು ಏನೂ ಅಲ್ಲ, ಯಾವ ಸ್ಥಾನವೂ ನನಗಿಲ್ಲ, ಮಂಡ್ಯ ರಾಜಕೀಯಕ್ಕೆ ನಾನು ಬಂದೂ ಇಲ್ಲ, ಮುಂದೆ ಬರೋದೂ ಇಲ್ಲ, ಅಷ್ಟೇ ಏಕೆ ರಾಜ್ಯ ರಾಜಕೀಯಕ್ಕೂ ಬರುವುದಿಲ್ಲ, ಎಲ್ಲ ಪಕ್ಷದವರೂ ನನ್ನನ್ನು ಕರೆದಿದ್ದಾರೆ, ಆದರೆ ನಾನೇ ಹೋಗಲಿಲ್ಲ, ರಾಜಕೀಯದಲ್ಲಿ ನನಗೆ ಆಸಕ್ತಿಯಿಲ್ಲ ಎಂದರು. ಕಳೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅಂಬರೀಷ್ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತುಕೊಂಡೆ. ಅದು ಅಂಬರೀಷ್ ಅವರ ಮೇಲಿನ ಅಭಿಮಾನದಿಂದ, ಅವರು ನನಗೆ 20 ವರ್ಷಗಳಿಂದ ಆಪ್ತರು, ಒಟ್ಟಿಗೆ ಮಾತನಾಡಿ, ಕಷ್ಟ-ಸುಖ ಹಂಚಿಕೊಂಡು ಅವರ ಮನೆಯಲ್ಲಿ ಊಟ ತಿಂಡಿ ಮಾಡಿಕೊಂಡು ವಿಶ್ವಾಸದಲ್ಲಿ ದ್ದವರು. ಅವರು ಹೋದ ನಂತರವೂ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತುಕೊಂಡಿ ದ್ದೇನಷ್ಟೆ. ಅಂಬರೀಷ್ ಅವರು ಇದ್ದಾಗಲೂ ನಾನು ಚುನಾವಣಾ ಪ್ರಚಾರ ಸಂದರ್ಭ ದಲ್ಲಿ ಹೋಗುತ್ತಿದ್ದೆ, ಅದರಲ್ಲೇನೂ ವಿಶೇಷವಿಲ್ಲ, ಅಂಬರೀಷ್ ಅವರು ನನಗೆ ಕೊಟ್ಟ ಪ್ರೀತಿ, ವಿಶ್ವಾಸ, ಗೌರವವೇ ನಮ್ಮ ಬಾಂಧವ್ಯಕ್ಕೆ ಕಾರಣ, ಅದು ಬಿಟ್ಟರೆ ಅಂಬರೀಷ್ ಕುಟುಂಬ ಜೊತೆ ಬೇರೆ ಯಾವುದೇ ವ್ಯಾಪಾರ-ವಹಿವಾಟು ಇಲ್ಲ ಎಂದರು.

ಕಳೆದ ಎರಡು ವರ್ಷಗಳಲ್ಲಿ ಮಂಡ್ಯ ರಾಜಕೀಯ ವಿಷಯದಲ್ಲಿ ವಾಕ್ಸಮರಗಳು ನಡೆಯುತ್ತಿದ್ದವು, ನಾನು ಇದುವರೆಗೆ ಮಾತನಾಡೇ ಇಲ್ಲ, ನಾನು ಇದುವರೆಗೆ ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಮಾತನಾಡಿದ್ದರೆ ತೋರಿಸಿ, ಅಂಬಿ ಸ್ಮಾರಕ ವಿಚಾರದಲ್ಲಿ ನಾನು ಮಾತನಾಡಿದೆನಷ್ಟೆ, ಅವರ ಮನ ನೋಯಿಸುವ ಹೇಳಿಕೆಯನ್ನು ನಾನು ಆಡಿಲ್ಲ, ನಾನು ತಪ್ಪಾಗಿ ಮಾತನಾಡಿದ್ದರೆ, ಹೇಳಲಿ ಕ್ಷಮೆ ಕೇಳುತ್ತೇನೆ ಎಂದರು.
ಮಂಡ್ಯ ರಾಜಕೀಯ ವಿಚಾರದಲ್ಲಿ ಸುಮಲತಾ ಅವರು ಹೆಣ್ಣು ಎಂದು ಅಂದು ಕೊಳ್ಳದೆ ಜೆಡಿಎಸ್ ನಾಯಕರು ಹೇಳಿಕೆ ನೀಡಿದ್ದಾರೆ, ನೋವು ನೀಡಿದ್ದಾರೆ, ಆದರೆ ಅವರು ಎಷ್ಟೇ ನೋವಿದ್ದರೂ ಕೂಡ ನಾನು ಪ್ರತಿಕ್ರಿಯೆ ನೀಡಿರಲಿಲ್ಲ. ಅಂಬರೀಷ್ ಅವರ ಸ್ಮಾರಕ, ಅವರ ಅಂತ್ಯಸಂಸ್ಕಾರ ವಿಚಾರದಲ್ಲಿ ಕುಮಾರಸ್ವಾಮಿಯವರು ಹೆಣದ ರಾಜಕೀಯವನ್ನು ಮಾಡಿದ್ದಾರೆ. ಅದಕ್ಕೆ ನಾನು ಚಿತ್ರರಂಗಕ್ಕೆ ಸಂಬಂಧಪಟ್ಟವನಾಗಿ ರುವುದರಿಂದ ನಾನು ಪ್ರತಿಕ್ರಿಯೆ ಕೊಟ್ಟೆ ಅಷ್ಟೆ ಎಂದು ರಾಕ್‍ಲೈನ್ ಸ್ಪಷ್ಟಪಡಿಸಿದರು.

ನಾನು ಎಂದೂ ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ತಲೆ ಹಾಕಿಲ್ಲ. ಸುಮಲತಾ ಅವರು ಹೊರಗೆ ಧೈರ್ಯವಾಗಿ ಮಾತಾಡುತ್ತಾರೆ. ಮನೆ ಒಳಗೆ ಬಂದು ಹತ್ತಾರು ಬಾರಿ ಕಣ್ಣೀರು ಹಾಕಿದ್ದರು. ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ಕೊಂಡೊಯ್ದ ವಿಚಾರದಲ್ಲಿ ಕುಮಾರಸ್ವಾಮಿ ಅವರು ಅನಗತ್ಯವಾಗಿ ಹೇಳಿಕೆ ಕೊಡುತ್ತಿದ್ದ ಹಿನ್ನೆಲೆ ನಿನ್ನೆ ಮಾತಾಡಿದ್ದೆ. ಅದು ಬಿಟ್ಟು ಯಾವುದೇ ರಾಜಕೀಯ ಮಾತಾಡಿಲ್ಲ. ರಾಜಕೀಯ ಮಾತಾಡಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಸಿಎಂ ಯಾರಾಗಿದ್ದರೂ ಅಂಬಿ ಸ್ಮಾರಕಕ್ಕೆ ಸ್ಥಳ ಕೊಡುತ್ತಿದ್ದರು. ಆಗ ಕುಮಾರಸ್ವಾಮಿ ಸಿಎಂ ಆಗಿದ್ದರು ಹಾಗಾಗಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ಚಿತ್ರರಂಗದ ಬಗ್ಗೆ ಮಾತಾಡಿದ್ದಕ್ಕೆ ನಾನು ಚಿತ್ರರಂಗದ ಪರವಾಗಿ ಪ್ರತಿಕ್ರಿಯೆ ನೀಡಿದ್ದೇನೆ. ಅದು ಬಿಟ್ಟು ನಾನು ಯಾವುದೇ ರಾಜಕೀಯ ಮಾತಾಡಿಲ್ಲ. ಕುಮಾರಸ್ವಾಮಿ ಅಭಿಮಾನಿಗಳಿಗೆ ನೋವಾಗಿರಬಹುದು. ನಾನು ತಪ್ಪಾಗಿ ಮಾತಾಡಿದ್ದರೆ ಎಲ್ಲಿ ಬೇಕಾದರೂ ಕ್ಷಮೆ ಕೋರುವೆ ಎಂದಿದ್ದಾರೆ.

Translate »