ಸಫಾರಿ ಆರಂಭವಾದರೂಕಾಡಿದ ಪ್ರವಾಸಿಗರ ಕೊರತೆ
ಮೈಸೂರು

ಸಫಾರಿ ಆರಂಭವಾದರೂಕಾಡಿದ ಪ್ರವಾಸಿಗರ ಕೊರತೆ

June 9, 2020

ಹುಣಸೂರು, ಜೂ.8(ಕೆಕೆ)-ಹಕ್ಕಿ ಜ್ವರ ಭೀತಿ ಹಾಗೂ ಕೊರೊನಾ ಲಾಕ್‍ಡೌನ್ ನಿಂದಾಗಿ ನಾಗರಹೊಳೆ ಉದ್ಯಾನದಲ್ಲಿ ಮಾ.19ರಿಂದ ಸ್ಥಗಿತಗೊಂಡಿದ್ದ ಸಫಾರಿ ಸರ್ಕಾರದ ಮಾರ್ಗಸೂಚಿಯಂತೆ ಸೋಮವಾರದಿಂದ ಆರಂಭವಾದರೂ ಪ್ರವಾಸಿಗರಿಂದ ನೀರಸ ಪ್ರತಿಕಿಯೆ ವ್ಯಕ್ತವಾಯಿತು.

ಸರ್ಕಾರ ಪ್ರವಾಸೋದ್ಯಮ ದೃಷ್ಟಿಯಿಂದ ಹಲವು ಷರತ್ತು ವಿಧಿಸಿ ಸಫಾರಿಗೆ ಇಂದಿನಿಂದ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರವೇ ವೀರನಹೊಸಹಳ್ಳಿಯ ಕಚೇರಿ ಆವರಣದಲ್ಲಿ ನಾಗರಹೊಳೆ ಉದ್ಯಾನ ವನದ ಹುಲಿ ಯೋಜನೆ ನಿರ್ದೇಶಕ ಮಹೇಶ್‍ಕುಮಾರ್ ಉದ್ಯಾನವನದ ವಲಯಗಳ ಅಧಿಕಾರಿಗಳು ಹಾಗೂ ಸಫಾರಿ ಸಿಬ್ಬಂದಿಯೊಂದಿಗೆ ಸಭೆ ನಡೆಸಿ, ಸಲಹೆ ಸೂಚನೆ ನೀಡಿದ್ದರು. ಅದರಂತೆ ಸೋಮವಾರ ಬೆಳಿಗ್ಗೆಯಿಂದ ಮುಂಜಾಗ್ರತಾ ಕ್ರಮಗಳೊಂದಿಗೆ ಸಫಾರಿ ಆರಂಭವಾಯಿತು.

ವೀರನಹೊಸಹಳ್ಳಿ, ನಾಣಚ್ಚಿಗೇಟ್ ಹಾಗೂ ದಮ್ಮನಕಟ್ಟೆ ಕೇಂದ್ರಗಳಲ್ಲಿ ಸಫಾರಿಗಾಗಿ ಬಂದ ಪ್ರವಾಸಿಗರಿಗೆ ಕೈಗಳಿಗೆ ಸ್ಯಾನಿಟೈಜಸ್ ಹಾಕಿ, ಟಿಕೆಟ್ ಖರೀಸಲು ಅನುವು ಮಾಡಿ ಕೊಡಲಾಯಿತು. ಟಿಕಿಟ್ ಕೌಂಟರ್ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಟಿಕೆಟ್ ಖರೀದಿಸಿದ ನಂತರ ಅರಣ್ಯ ವೀಕ್ಷಣೆಗೆ ಅವಕಾಶ ನೀಡಲಾಯಿತು. ಸಫಾರಿಗೆ ಆನ್‍ಲೈನ್‍ನಲ್ಲಿ ಶೇ.50ರಷ್ಟು ಬುಕಿಂಗ್‍ಗೆ ಹಾಗೂ ಸ್ಥಳದಲ್ಲೇ ಶೇ.50ರಷ್ಟು ಟಿಕೆಟ್ ಖರೀದಿ ಸಲು ಅವಕಾಶ ಮಾಡಿಕೊಲಾಗಿತ್ತು. 26 ಸೀಟ್‍ಗಳ ಸಫಾರಿ ವಾಹನದಲ್ಲಿ 13 ಮಂದಿಗೆ ಹಾಗೂ 24 ಸೀಟ್‍ಗಳ ವಾಹನದಲ್ಲಿ 12 ಮಂದಿಗೆ ಮಾತ್ರ ತೆರಳಲು ಅವಕಾಶ ಕಲ್ಪಿಸ ಲಾಗಿತ್ತು. ವೀರನಹೊಸಳ್ಳಿ ಕೇಂದ್ರದಿಂದ ಜೆಎಲ್‍ಆರ್ ವಾಹನದಲ್ಲಿ 3 ಜನ ಮಾತ್ರ ಸಫಾರಿ ಮಾಡಿದರು. ನಾಣಚ್ಚಿ ಗೇಟ್‍ನಲ್ಲಿ ಪ್ರವಾಸಿಗ ಕೊರತೆ ಕಂಡು ಬಂತು. ದಮ್ಮನಕಟ್ತೆ ಕೇಂದ್ರದಲ್ಲೇ ಮೊದಲ ದಿನವೇ 35 ಪ್ರವಾಸಿಗರು 3 ಇಲಾಖಾ ಸಫಾರಿ ವಾಹನದಲ್ಲಿ ತೆರಳಿ ಅರಣ್ಯ ವೀಕ್ಷಿಸಿದರು. ವಾಹನಗಳಲ್ಲಿ ಸ್ಥಳಾವಕಾಶ, ಸಮಯ ಕೊರತೆಯಿಂದ 15 ಪ್ರವಾಸಿಗರು ವಾಪಸ್ ತೆರಳಿದರು. ವೃದ್ಧರು-ಮಕ್ಕಳು, ಗರ್ಭಿಣಿಯರಿಗೆ ಸಫಾರಿಗೆ ಅವಕಾಶವಿರಲಿಲ್ಲ.

Translate »