ಈ ಬಾರಿ ಕಬಿನಿ ಬಲದಂಡೆ ನಾಲೆಗೆ ನೀರಿಲ್ಲ
ಮೈಸೂರು ಗ್ರಾಮಾಂತರ

ಈ ಬಾರಿ ಕಬಿನಿ ಬಲದಂಡೆ ನಾಲೆಗೆ ನೀರಿಲ್ಲ

February 6, 2020

ನಂಜನಗೂಡು, ಫೆ. 5 (ರವಿ)- ಈ ಬಾರಿ ಬೇಸಿಗೆ ಬೆಳೆಗೆ ಕಬಿನಿ ಬಲದಂಡೆ ನಾಲೆಯ ಅಚ್ಚುಕಟ್ಟುದಾರರಿಗೆ ನೀರು ಬಿಡುವ ಪ್ರಸ್ತಾಪವಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಹುಲ್ಲಹಳ್ಳಿ ವ್ಯಾಪ್ತಿಯ ಅಧಿಕಾರಿ ರವೀಶ ತಿಳಿಸಿದರು.

ಮಂಗಳವಾರ ತಾಲೂಕು ಆಡಳಿತ ಸ್ಥಳೀಯ ಅಂಬೇಡ್ಕರ್ ಭವನದಲ್ಲಿ ನಡೆದ ರೈತರ ಕುಂದು ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ಕತ್ವಾಡಿಪುರದ ಶಿವಣ್ಣ ಮಾತನಾಡಿ, ಕಬಿನಿ ಅಚ್ಚುಕಟ್ಟು ಪ್ರದೇಶದ ಕೃಷಿಕರಾದ ನಾವೆಲ್ಲಾ ಈ ಸಾಲಿನ ನೆರೆ ಹಾವಳಿಯಿಂದಾಗಿ ಸಾಕಷ್ಠು ಹಾನಿ ಅನು ಭವಿಸಿದ್ದೇವೆ. ಜಲಾಶಯದಲ್ಲೂ ಸಾಕಷ್ಟು ನೀರಿದೆ. ಹಾಗಾಗಿ ಬೇಸಿಗೆ ಬೇಳೆಗೆ ನೀರು ಕೊಡಿ ಎಂದು ಆಗ್ರಹಿಸಿದರು.

ಗೊಂದಲದ ಗೂಡಾದ ಸಭೆ : ತಾಲೂಕಿ ನಲ್ಲಿ ರೈತರಿಗೆ ಸಂಬಂಧಿಸಿದ ನೂರಾರು ಸಮಸ್ಯೆಗಳು ಪ್ರಸ್ತಾಪವಾಗಬೇಕಿದ್ದ ಈ ಸಭೆ ರೈತ ಸಂಘಗಳ ಎರಡೂ ಬಣಗಳ ಮೇಲಾಟಕ್ಕೆ ಕಾರಣವಾಗಿ ಗೊಂದಲದ ಗೂಡಾಗಿ ಪರಿವರ್ತನೆಯಾಯಿತು. ಗೊಂದಲ ತಹಬದಿಗೆ ಬಾರದಿರುವುದನ್ನು ಕಂಡ ಸಭೆಯ ಅಧ್ಯಕ್ಷ ಮಹೇಶ ಕುಮಾರ ನೀವು ನೀವೇ ಗೊಂದಲ ಎಬ್ಬಿಸುವುದಾ ದರೆ ನಾವೇ ಸಭೆಯಿಂದ ಹೊರ ಹೋಗ ಬೇಕಾಗುತ್ತದೆ ಎಂದು ಕಡಕ್ಕಾಗಿ ಎಚ್ಚರಿಕೆ ನೀಡಿ ಸಭೆಯನ್ನು ತಹಬದಿಗೆ ತಂದರು.

ಕೃಷಿ ಇಲಾಖೆ ರೈತರ ಅಭಿವೃದ್ಧಿಗೆಂದು ನೀಡುತ್ತಿರುವ ಯಂತ್ರೋಪಕರಣಗಳು ಕೃಷಿ ಸಾಮಗ್ರಿಗಳು ಕಳಪೆಯಾಗಿದ್ದು, ಇದಕ್ಕೆ ಸಬ್ಸಿಡಿ ಬೇರೆ ಕೇಡು ಎಂದು ರೈತ ನಾಯಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ದೀನದಯಾಳ ಯೋಜನೆಯಡಿಯಲ್ಲಿ ರೈತರಿಗೆ ನೀಡಲಾಗುವ ವಿದ್ಯುತ್‍ಗೆ ಲಂಚ ಎಷ್ಟು ಎಂಬುದನ್ನು ಬಹಿರಂಗಪಡಿಸಿ ಎಂಬ ಪ್ರಶ್ನೆ ಎದುರಾದಾಗ ಕೆಪಿಟಿಸಿಎಲ್ ಅಧಿಕಾರಿ ದೇವರಾಜ ಕಕ್ಕಾಬಿಕ್ಕಿಯಾದರು. ಒಂದು ಟಿಸಿಗಾಗಿ ವಿದ್ಯುತ್ ಗುತ್ತಿಗೆದಾರರು 1.5 ಲಕ್ಷ ಲಂಚ ಕೇಳುತ್ತಾರೆ ಎಂದು ಆರೋ ಪಿಸಿದಾಗ, ಉತ್ತರಿಸಲು ತಡವರಿಸಿದ ಅಧಿಕಾರಿ ಇದು ಸಂಪೂರ್ಣ ಉಚಿತವಾಗಿದೆ. ಸಂಬಂಧಿ ಸಿದ ಎಲ್ಲಾ ಕೆಲಸಗಳನ್ನು ತಾವೇ ಮಾಡಿ ಕೊಳ್ಳಬಹುದು. ಆದರೆ ಕಾಮಗಾರಿ ಪೂರ್ಣವಾಗಿದೆ ಎಂದು ಅಧಿಕೃತ ಗುತ್ತಿಗೆ ದಾರರ ಲಿಖಿತ ಪತ್ರ ಬೇಕೆ ಬೇಕು ಎಂದಾಗ ಅದಕ್ಕೇ ಲಂಚ ಎಂಬ ಮಾರುತ್ತರ ರೈತರಿಂದ ಕೇಳಿ ಬಂದಿತು.

ತಾಲೂಕಿನಾದ್ಯಂತ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ. ಈ ಅಕ್ರಮವನ್ನು ತಿಳಿಸಿ ದರೂ ನೆಪ ಮಾತ್ರಕ್ಕೆ ದಾಳಿ ಮಾಡುವ ನೀವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿ ಪದ್ಮಾವತಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಭೆಗೆ ಹಾಜರಾಗಲು ತಾಲೂಕಿನ 38 ಇಲಾಖೆಗಳಿಗೆ ತಿಳಿಸಲಾಗಿತ್ತು. ಆದರೆ ಕಂದಾಯ, ಶಿಕ್ಷಣ, ಅಬಕಾರಿ, ಕೆಪಿಟಿಸಿಎಲ್ ಸೇರಿದಂತೆ ಕೇವಲ 12 ಇಲಾಖೆ ಅಧಿಕಾರಿ ಗಳು ಮಾತ್ರ ಹಾಜರಿದ್ದು, ಉಳಿದ ಇಲಾಖೆ ಅಧಿಕಾರಿಗಳು ರೈತರಿಗೂ ತಮಗೂ ಸಂಬಂಧವೇ ಇಲ್ಲ ಎಂದು ದೂರ ಉಳಿದಿದ್ದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಮಹೇಶ ಕುಮಾರ ಇಂದಿನ ಸಮಸ್ಯೆಗಳಿಗೆ ಆಯಾ ಇಲಾಖೆಯಿಂದ ಪರಿಹಾರ ಅಥವಾ ಕಾರಣ ತಿಳಿಸಲಾಗುತ್ತದೆ ಎಂದರು.

ಸಭೆಯಲ್ಲಿ ರೈತ ಸಂಘಟನೆಗಳ ಮುಖ್ಯಸ್ಥ ರಾದ ಶಿರಮಳ್ಳಿ ಸಿದ್ದಪ್ಪ, ಬೊಕ್ಕಳ್ಳಿ ನಂಜುಂಡ ಸ್ವಾಮಿ, ಇಮ್ಮಾವು ರಘು, ಹೆಜ್ಜಿಗೆ ಪ್ರಕಾಶ, ದೇವನೂರು ಶಿವಕುಮಾರ, ಸಿಂಧುವಳ್ಳಿ ಬಸವಣ್ಣ, ಗೊದ್ದನಪುರದ ಸುರೇಶ ಸೇರಿ ದಂತೆ 150ಕ್ಕೂ ಹೆಚ್ಚು ರೈತ ನಾಯಕರು ಉಪಸ್ಥಿತರಿದ್ದರು.

Translate »