ರೈತರ ಸಾಲಮನ್ನಾ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಧರಣಿ
ಮೈಸೂರು ಗ್ರಾಮಾಂತರ

ರೈತರ ಸಾಲಮನ್ನಾ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಧರಣಿ

February 6, 2020

ಹುಣಸೂರು, ಫೆ.5(ಕೆಕೆ)-ರೈತರ ಸಾಲಮನ್ನಾಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ರೈತ ಸಂಘದಿಂದ ಧರಣಿ ನಡೆಸಿ, ಎಸಿ ಮೂಲಕ ರಾಜ್ಯ ಪಾಲರಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಲಾಯಿತು.

ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಜಮಾವಣೆಗೊಂಡ ರೈತರು, ಸಾಲಮನ್ನಾ ಸಮಸ್ಯೆ ಪರಿಹರಿಸುವಂತೆ ಘೋಷಣೆ ಕೂಗಿದರು. ರಾಜ್ಯದ ಹಿಂದಿನ ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾ ಯೋಜನೆ ಜಾರಿಗೆ ತಂದಿತು. ಇದರಿಂದ ಕೆಲ ರೈತರ ಸಾಲ ಭಾಗಶಃ ಮನ್ನಾ ಆಗಿದೆ. ಉಳಿದ ರೈತರ ಸಾಲ ಹಂತ-ಹಂತವಾಗಿ ಮನ್ನಾ ಆಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ 74,818 ರೈತರ ಸಾಲಮನ್ನಾ ಹಣವನ್ನು ಬ್ಯಾಂಕ್‍ಗಳಿಗೆ ಜಮಾ ಮಾಡಿದೆ. ತಾಂತ್ರಿಕ ದೋಷದಿಂದ ಕೆಲವೆಡೆ ರೈತರಿಗೆ ತಲುಪಬೇಕಾದ ಸಾಲ ಮನ್ನಾ ಸೌಲಭ್ಯ ಸಕಾಲಕ್ಕೆ ತಲುಪಿಲ್ಲ. ಈ ಮಧ್ಯೆ, ಸರ್ಕಾರ ಬ್ಯಾಂಕ್‍ಗಳಿಗೆ ಜಮಾ ಮಾಡಿದ್ದ ಹಣವನ್ನು ಹಿಂಪಡೆಯುತ್ತಿದೆ. ಇದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಸಾಲಮನ್ನಾ ಯೋಜನೆಯ ಉಳಿದ ಹಣವನ್ನು ಮಾರ್ಚ್ ಅಂತ್ಯಕ್ಕೆ ಮುನ್ನ ಜಮಾ ಮಾಡುವುದಾಗಿ ಗಣರಾಜ್ಯೋತ್ಸವ ಭಾಷಣದಲ್ಲಿ ಸಿಎಂ ಹೇಳಿದ್ದರು. ಈಗ ಸರ್ಕಾರ ಅನ್ಯಾಯ ಎಸಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಮ್ಮ ಬೇಡಿಕೆ ಈಡೇರಿಸುವಂತೆ ಎಸಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಗೌರವಾಧ್ಯಕ್ಷ ರಾಮಕೃಷ್ಣೇ ಗೌಡ, ಕಾರ್ಯಾಧ್ಯಕ್ಷ ಮಂಜುನಾಥರಾಜೇ ಅರಸ್, ತಾಲೂಕು ಉಪಾಧ್ಯಕ್ಷ ಬಸವರಾಜೇಗೌಡ, ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರ ಮೋದೂರು ಶಿವಣ್ಣ, ತಂಬಾಕು ಕ್ಷೇಮಾ ಭಿವೃದ್ಧಿ ಸಂಘದ ಗೌರವಾಧ್ಯಕ್ಷ ಚಂದ್ರೇಗೌಡ, ರೈತ ಸಂಘದ ಮುಖಂಡ ಪೆಂಜಳ್ಳಿ ನಾಗರಾಜು, ಉಪಾಧ್ಯಕ್ಷ ತಿಪ್ಪೂರು ಸೋಮಶೇಖರ್, ತಾಲೂಕು ಉಪಾಧ್ಯಕ್ಷರಾದ ಆಲೀಜಾನ್, ವಿ.ಟಿ.ಮಣಿ, ತಾಲೂಕು ಸಂಚಾಲಕ ಹರಳಹಳ್ಳಿ ಬಸವರಾಜೇ ಗೌಡ, ತಾಲೂಕು ಖಜಾಂಚಿ ಕಲ್ಲಹಳ್ಳಿ ಜಯಣ್ಣ, ಗಾವಡಗೆರೆ ಹೋಬಳಿ ಅಧ್ಯಕ್ಷ ರಾಮೇಗೌಡ, ರೈತ ಮುಖಂಡ ಹಳೇ ಪುರ ರಾಮೇಗೌಡ, ತಾಲೂಕು ಪದಾಧಿಕಾರಿಗಳಿದ್ದರು.

Translate »