ಸಮಾಜ ಕಲ್ಯಾಣ ಎಂದರೆ ಮಂತ್ರಿ ಕಲ್ಯಾಣವಲ್ಲ. ಸಮಾಜದಲ್ಲಿರುವ ಬಡವರ ಕಲ್ಯಾಣ. ರಾಜ್ಯದಲ್ಲಿರುವ ಕಡುಬಡವರ ಕಲ್ಯಾಣವಾಗುತ್ತದೆ ಎಂಬ ವಿಶ್ವಾಸವಿದೆ. ಇಲಾಖೆಯ ಸುಧಾರಣೆಯ ದೃಷ್ಟಿಯಿಂದ ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗುವುದು. ತಪ್ಪು ಮಾಡಿದವವರನ್ನು ಪಟ್ಟಿ ಮಾಡಿ, ಗೌರವಯುತವಾಗಿ ಇಲಾಖೆಯಿಂದ ಹೊರಗೆ ಕಳುಹಿಸಲಾಗುವುದು. – ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ
ಮೈಸೂರು, ಅ.೩(ಎಂಕೆ)- ಸ್ಲಂ ಬೋರ್ಡ್ನಲ್ಲಿರುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಸ್ವಂತ ಭೂಮಿ ಹೊಂದಿದವರಿಗೆ ಮನೆ ಕಟ್ಟಲು ಸರ್ಕಾರದಿಂದ ಹಣ ಸಹಾಯ ನೀಡುವ ಕುರಿತು ಇಲ್ಲಿಯವರೆಗೆ ಸ್ಲಂ ಬೋರ್ಡ್ ಮೀಟಿಂಗ್‌ಗಳಲ್ಲಿ ಚರ್ಚೆಯಾಗಿಲ್ಲ. ಪತ್ರಿಕೆಗಳಲ್ಲಿ ಜಾಹೀ ರಾತು ನೀಡುವುದು ಹೊರತು ಬೇರೆ ಏನೂ ಆಗಿಲ್ಲ. ಅಧಿ ಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡದಿದ್ದರೆ ಯಾವ ಪರಿಹಾರವೂ ಸಿಗುವುದಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಮೈಸೂರಿನ ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ದೇವ ಸ್ಥಾನದ ಬಳಿಯ ಉದ್ಯಾನವನದಲ್ಲಿ ಆಯೋಜಿಸಿರುವ ‘ಮೋದಿ ಯುಗ್ ಉತ್ಸವ್’ ಕಾರ್ಯಕ್ರಮದಲ್ಲಿ ‘ವೈಯಕ್ತಿಕ ಹಾಗೂ ಸಾಮೂಹಿಕ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ’ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಲಂ ಬೋರ್ಡ್ ರಚನೆಯಾಗಿ ಸುಮಾರು ೫೦ ವರ್ಷಗಳಾಗಿದೆ. ೨೦-೨೫ ಮಂದಿ ಸ್ಲಂ ಬೊರ್ಡ್ ಅಧ್ಯಕ್ಷರು, ನೂರಕ್ಕೂ ಹೆಚ್ಚು ಕಮಿ ಷನರ್‌ಗಳು, ಸಾವಿರಕ್ಕೂ ಹೆಚ್ಚು ನಿರ್ದೇಶಕರು ಬಂದು ಹೋಗಿದ್ದಾರೆ. ಆದರೆ ೫೦ ವರ್ಷದಲ್ಲಿ ಒಮ್ಮೆಯೂ ಸ್ಲಂ ಬೋರ್ಡ್ನಲ್ಲಿ ವಾಸವಿರುವವರಿಗೆ ಮನೆ ಹಕ್ಕು ಪತ್ರ ಕೋಡುವುದು, ಸ್ವಂತ ನಿವೇಶನ ಹೊಂದಿದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಹಣ ನೀಡುವ ವಿಷಯದ ಕುರಿತು ಚರ್ಚೆಯಾಗಿಲ್ಲ ಎಂದರು.
ದೇಶದಲ್ಲಿ ಸ್ವಂತ ನೆಲೆ ಇಲ್ಲದವರು ಕೋಟ್ಯಾಂತರ ಮಂದಿ ಇದ್ದಾರೆ. ಅವರಿಗೆ ತಾವು ಎಲ್ಲಿ? ಯಾವ ಸ್ಥಳದಲ್ಲಿ ವಾಸವಿದ್ದೇವೆ ಎಂಬುದು ಗೊತ್ತಿರುವುದಿಲ್ಲ. ಇಂತಹವರಿಗೆ ಹಕ್ಕು ಪತ್ರ ನೀಡುವ ಕಾರ್ಯವನ್ನು ೭೦ ವರ್ಷ ದೇಶದ ಆಳ್ವಿಕೆ ನಡೆಸಿದವರಿಂದ ಮಾಡಲು ಸಾಧ್ಯವಾಗಲಿಲ್ಲ. ಆದರೆ ಪ್ರಧಾನಿ ಮೋದಿ ಯವರು ‘ಸ್ವಾಮಿತ್ವ ಯೋಜನೆ’ ಮೂಲಕ ಕಡ್ಡಾಯವಾಗಿ ಹಕ್ಕುಪತ್ರ ನೀಡುವಂತೆ ಆದೇಶ ಮಾಡಿದ್ದಾರೆ. ನಾವು ಪ್ರಜ್ಞಾವಂತರಾದರೆ, ಸರ್ಕಾರದ ಸವಲತ್ತುಗಳನ್ನು ಮನೆ ಬಾಗಿಲಲ್ಲೇ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕ್ರಾಂತಿಕಾರಿ ಬದಲಾವಣೆಗಳಾಗಬೇಕು: ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹಿಂದುಳಿದ, ಪರಿಶಿಷ್ಟ ಜಾತಿ ಇಲಾಖೆಗಳಲ್ಲಿ ಗಮನಾರ್ಹ ಬದಲಾವಣೆ ಗಳಾಗಬೇಕು ಎಂಬುದನ್ನು ಒಪ್ಪುತ್ತೇನೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಮ್ಮ ಅಧಿಕಾರದ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಧಾರ ಸಮಾಜದ ಕೊನೆಯ ವ್ಯಕ್ತಿಗೂ ಸಹಾಯವಾಗಬೇಕು ಎಂಬ ಯೋಚನೆ ಮಾಡಬೇಕು. ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಬಂದಾಗ ಸಾಕಷ್ಟು ವಿರೋಧ ಗಳು ಬಂದಿದ್ದವು. ಈ ವೇಳೆ ಹೈಕೋರ್ಟ್ ನ್ಯಾಯ ಮೂರ್ತಿಯಾಗಿದ್ದ ಭೀಮಯ್ಯ ಎಂಬುವರು ಕರ್ನಾಟಕ ರಾಜ್ಯದಲ್ಲಿ ತಂದಿರುವ ಭೂ ಸುಧಾರಣೆ ಕ್ರಾಂತಿಕಾರಿ ಯೋಜನೆ ಬೇರೆ ರಾಜ್ಯದಲ್ಲಿ ತಂದಿದ್ದರೆ ಮಂತ್ರಿಗಳು ನಿಂತಲ್ಲೇ ಕುಸಿದು ಹೋಗುತ್ತಿದ್ದರು ಎಂದು ಹೇಳಿದ್ದರು. ಅಂತಹ ಕ್ರಾಂತಿಕಾರಿ ಬದಲಾವಣೆಗಳಾಗಬೇಕು ಎಂದರು.
ನಮಗೆ ಸಿಕ್ಕಿರುವ ಅವಕಾಶದಲ್ಲಿ ಸಂವಿಧಾನದ ಆಶಯ ಗಳನ್ನು ಅರಿತು ಕೆಲಸ ಮಾಡಬೇಕು. ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ ನಮ್ಮ ಇಲಾಖೆ ವ್ಯಾಪ್ತಿಯಲ್ಲಿ ೧.೨೨ ಕೋಟಿ ಜನಸಂಖ್ಯೆ ಬರಲಿದ್ದು, ಕೇಂದ್ರದ ಅಂಕಿ-ಅAಶಗಳ ಪ್ರಕಾರ ಸುಮಾರು ೨೫-೨೮ ಲಕ್ಷ ಕುಟುಂಬಗಳಿವೆ. ಇದರಲ್ಲಿ ಐದೂವರೆ ಲಕ್ಷ ಕುಟುಂಬಕ್ಕೆ ವಾಸಿಸಲು ಮನೆ ಇಲ್ಲ. ನಾಲ್ಕೂವರೆ ಲಕ್ಷ ಕುಟುಂಬಕ್ಕೆ ನಿಲ್ಲಲು ನೆಲೆ ಇಲ್ಲ. ಲಕ್ಷಾಂತರ ಕುಟುಂಬದ ಮಕ್ಕಳಿಗೆ ಶಿಕ್ಷಣ, ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕಲ್ಪಿಸಬೇಕು. ಇಂತಹ ಸಂದರ್ಭದಲ್ಲಿ ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬುದರ ಬಗ್ಗೆ ಚರ್ಚಿಸ ಬೇಕಾಗುತ್ತದೆ. ಇಡೀ ವ್ಯವಸ್ಥೆಯನ್ನು ಖಾಸಗೀಕರಣ ಮಾಡಿ, ಬಂಗಲೆ ಕಟ್ಟಿಕೊಡಿ ಎನ್ನುವವರಿದ್ದಾರೆ. ಆದರೆ ಅಧಿ ಕಾರದಲ್ಲಿರುವವರು ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಅಶೋಕಪುರಂನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಶೋಕ ಪುರಂನ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಾಸಕ ಎಸ್.ಎ.ರಾಮ ದಾಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂಧ್ಯಾ, ಬಿಜೆಪಿ ಮುಖಂಡರಾದ ಎಂ.ವಡಿವೇಲು, ಜೆ.ರವಿ, ಸಂತೋಷ್ ಶಂಭು ಇನ್ನಿತರರು ಉಪಸ್ಥಿತರಿದ್ದರು.