ಕಲಬುರಗಿ, ಜೂ. 28- ಖ್ಯಾತ ಕಾದಂಬರಿ ಕಾರರಾದ ಡಾ. ಗೀತಾ ನಾಗಭೂಷಣ್ (78) ಅವರು ಇಂದು ರಾತ್ರಿ ಹೃದಯಾ ಘಾತದಿಂದ ನಿಧನರಾದರು.
ಸಂಜೆ ವೇಳೆ ಎದೆನೋವು ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟರು. ನಾಳೆ (ಸೋಮವಾರ) ಕಲಬುರಗಿಯಲ್ಲಿ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಡಾ. ಗೀತಾ ನಾಗಭೂಷಣ್ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಅಪಾರ ಜನಮನ್ನಣೆ ಗಳಿಸಿದ್ದರು. 1968ರಲ್ಲಿ ಪ್ರಕಟಗೊಂಡ ‘ತಾವ ರೆಯ ಹೂವು’ ಕಾದಂಬರಿಯಿಂದ ಹಿಡಿದು ಇತ್ತೀಚಿನ ‘ಬದುಕು’ವರೆಗೆ ಇಪ್ಪತ್ತೇಳು ಕಾದಂಬರಿಗಳನ್ನು ರಚಿಸಿದ್ದಾರೆ. ಅಲ್ಲದೇ 50 ಸಣ್ಣ ಕಥೆಗಳನ್ನು ರಚಿಸಿ ಜನಮನ್ನಣೆ ಗಳಿಸಿದ್ದು, ಇದಕ್ಕೆ ತಿಲಕವಿಟ್ಟಂತೆ ಗುಲ್ಬರ್ಗ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿ ಸಿದೆ. 27 ಕಾದಂಬರಿ ಸೇರಿದಂತೆ 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕ, ಒಂದು ಸಂಪಾದನಾ ಕೃತಿ, ಒಂದು ಸಂಶೋ ಧನಾ ಕೃತಿ ಇವರ ಲೇಖನಿಯಿಂದ ಬಂದಿದ್ದು, ‘ಹಸಿಮಾಂಸ ಮತ್ತು ಹದ್ದುಗಳು’ ಕೃತಿ ಇವರ ‘ಹೆಣ್ಣಿನ ಕೂಗು’ ಹೆಸರಿನಲ್ಲಿ ಚಲನಚಿತ್ರವಾಗಿದೆ.
1942ರ ಮಾರ್ಚ್ 25ರಂದು ಕಲಬು ರಗಿ ಜಿಲ್ಲೆ ಸಾವಳಗಿ ಎಂಬ ಸಣ್ಣ ಗ್ರಾಮ ದಲ್ಲಿ ಶಾಂತಪ್ಪ-ಶರಣಮ್ಮ ದಂಪತಿಯ ಪುತ್ರಿಯಾಗಿ ಜನಿಸಿದ ಡಾ. ಗೀತಾ ನಾಗ ಭೂಷಣ್, ಶಾಲೆಗೆ ಕಳುಹಿಸದ ಸಾಮಾ ಜಿಕ ವ್ಯವಸ್ಥೆ ಹಾಗೂ ಕಡು ಬಡತನದ ನಡುವೆಯೂ ಪರಿಶ್ರಮದಿಂದ ಬಿ.ಎ, ನಂತರ ಎಂ.ಎ.ಪದವಿ ಗಳಿಸಿದರು. ನಂತರ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಪ್ರವೃತ್ತಿಯಾಗಿ ಬರಹ ಕ್ಷೇತ್ರಕ್ಕೆ ಕಾಲಿಟ್ಟು ಸಮಾಜಕ್ಕೆ ಬೆಳಕು ನೀಡುವ ಹಲವಾರು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕದ ನವತಾರೆಯಾದರು. ಅಲ್ಲದೆ 2010ರಲ್ಲಿ ಗದಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಸರ್ವಾಧ್ಯಕ್ಷತೆ ವಹಿಸಿದ ಗೌರವವೂ ಸಂದಿದ್ದು, ನಾಡೋಜ ಪ್ರಶಸ್ತಿ ಪಡೆದ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಎಂಬ ಹೆಗ್ಗಳಿಕೆಗೂ ಡಾ. ಗೀತಾ ನಾಗಭೂಷಣ್ ಪಾತ್ರರಾದರು.