ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ ಪರಿಶೀಲನೆ ನಂತರ ಸಲಹೆ
ಮೈಸೂರು, ಮಾ.1(ಎಸ್‍ಬಿಡಿ)- ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಮತ್ತಷ್ಟು ಕ್ರಮ ಕೈಗೊಳ್ಳುವಂತೆ ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ ಸೂಚಿಸಿದೆ.
ರೈಲ್ವೆ ಸಚಿವಾಲಯ ರಾಷ್ಟ್ರೀಯ ಮಟ್ಟ ದಲ್ಲಿ ರಚಿಸಿರುವ ಪಿ.ಕೆ.ಕೃಷ್ಣದಾಸ್ ನೇತೃ ತ್ವದ `ಪ್ರಯಾಣಿಕರ ಸೌಲಭ್ಯ ಸಮಿತಿ’ ಇತ್ತೀಚೆಗೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ನಿಲ್ದಾಣ ಮತ್ತು ರೈಲುಗಳಲ್ಲಿ ಪ್ರಯಾಣಿಕರಿಗೆ ಕಲ್ಪಿಸಿರುವ ಸೌಕರ್ಯಗಳನ್ನು ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆ ನೀಡಿತು.
ಪ್ರಯಾಣಿಕರು ಕಾಯುವ ಕೋಣೆಗಳು, ಚಾಲ್ತಿ ಟಿಕೆಟ್ ಮತ್ತು ಮುಂಗಡ ಟಿಕೆಟ್ ಕಾಯ್ದಿರಿಸುವ ಕಚೇರಿಗಳು, ಪರಿಚಲನಾ ಪ್ರದೇಶದಲ್ಲಿರುವ ಪಾವತಿಸಿ ಬಳಸುವ ಶೌಚಾಲಯ, ವಾಹನ ನಿಲ್ದಾಣ ಸೌಲಭ್ಯ, ಪಾದಚಾರಿ ಮೇಲ್ಸೇತುವೆ, ಎಸ್ಕಲೇಟರ್ ಗಳು, ಲಿಫ್ಟ್‍ಗಳು, ಸಿಸಿಟಿವಿ, ಭದ್ರತಾ ವ್ಯವಸ್ಥೆ, ಮಳಿಗೆಗಳನ್ನು ಪರಿಶೀಲಿಸಿದ ಸಮಿತಿ, ಪ್ರಯಾ ಣಿಕರಿಗೆ ಕಲ್ಪಿಸಿರುವ ಸೌಲಭ್ಯ ಹಾಗೂ ಉತ್ತಮ ರೀತಿಯಲ್ಲಿ ಸ್ವಚ್ಛತೆ ನಿರ್ವಹಣೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತು.
ಸೌಲಭ್ಯಗಳ ಕುರಿತು ರೈಲು ಬಳಕೆದಾರ ರೊಂದಿಗೆ ಸಂವಹನ ನಡೆಸಿ ಅಭಿಪ್ರಾಯ ಸಂಗ್ರಹಿಸಿದ ಸಮಿತಿ, ರೈಲು ನಿಲ್ದಾಣದ ಆವರಣ ಹಾಗೂ ರೈಲುಗಳಲ್ಲಿ ಮಹಿಳೆ ಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡ ಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ರೈಲ್ವೆ ಸಂರಕ್ಷಣಾ ಸಿಬ್ಬಂದಿ ಯನ್ನು ನಿಯೋಜಿಸಬೇಕು. ರೈಲ್ವೆಗಳು, ಸುರಂಗಮಾರ್ಗ ಇನ್ನಿತರ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಟಿಕೆಟ್ ಪರಿ ಶೀಲನಾ ಸಿಬ್ಬಂದಿ, ರೈಲು ಬಳಕೆದಾರರಲ್ಲಿ ವಿಶ್ವಾಸ ತುಂಬಬೇಕೆಂದು ಸಲಹೆ ನೀಡಿತು.
`ಫುಡ್ ಪ್ಲಾಜಾ’ ಬೇಡಿಕೆ: ಪರಿಶೀಲ ನೆಯ ಬಳಿಕ ಸಮಿತಿ, ಪ್ರಮುಖ ವಿಷಯ ಗಳ ಬಗ್ಗೆ ವಿಭಾಗೀಯ ರೈಲ್ವೆ ವ್ಯವಸ್ಥಾ ಪಕರಾದ ಅಪರ್ಣಾ ಗರ್ಗ್ ಅವರೊಂದಿಗೆ ಚರ್ಚೆ ನಡೆಸಿತು. ಈ ವೇಳೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋ ದ್ಯಮ ನಿಗಮ ಲಿಮಿಟೆಡ್(ಐಆರ್‍ಸಿಟಿಸಿ) ಸಹಯೋಗದಲ್ಲಿ ಮೈಸೂರು ನಿಲ್ದಾಣದಲ್ಲಿ `ಫುಡ್ ಪ್ಲಾಜಾ’ ಸ್ಥಾಪಿಸುವ ಒಪ್ಪಂದ ಅಂತಿಮಗೊಳಿಸಲು ವಿಫಲವಾದ ಕಾರಣ ದಿನಪೂರ್ತಿ ತೆರೆದಿರುವ ಕೆಟರಿಂಗ್ ಸೇವೆ ಕಲ್ಪಿಸಲು ಸಾಧ್ಯವಾಗಿಲ್ಲ. ಅಲ್ಲದೆ ಅನು ದಾನದ ಕೊರತೆಯಿಂದಾಗಿ ಪ್ರಯಾಣಿ ಕರಿಗೆ ಪೂರ್ಣ ಸೌಲಭ್ಯ ನೀಡುವಲ್ಲಿ ಹಿನ್ನಡೆ ಯಾಗುತ್ತಿದೆ ಎಂದು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಮಿತಿ, ಈ ಎಲ್ಲಾ ಸಮಸ್ಯೆಗಳ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚಿಸಿ, ಕ್ರಮಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿತು.
ಶ್ರೀರಂಗಪಟ್ಟಣಕ್ಕೂ ಭೇಟಿ: ಪ್ರವಾಸಿಗರ ಹಿತದೃಷ್ಟಿಯಿಂದ ಐತಿಹಾಸಿಕ ಶ್ರೀರಂಗಪಟ್ಟಣ ರೈಲು ನಿಲ್ದಾಣಕ್ಕೂ ಸಮಿತಿ ಭೇಟಿ ನೀಡಿ, ಪರಿಶೀಲಿಸಿತು. ಈ ವೇಳೆ ವಿವಿಧ ರೈಲುಗಳ ನಿಲುಗಡೆಗೆ ಕೋರಿ ಅಹವಾಲು ಸಲ್ಲಿಕೆಯಾದವು. ರೈಲು ಕಾರ್ಯಾಚರಣೆ, ಸುರಕ್ಷತೆ ಹಾಗೂ ಸಮಸ್ಯೆಗಳ ಪರಾಮರ್ಶಿಸಿ ಸಮಗ್ರವಾಗಿ ಪರಿಶೀಲಿಸಿದ ಬಳಿಕ ಇಲಾಖೆ ಗಮನಕ್ಕೆ ತರಲಾಗುವುದು ಎಂದು ಸಮಿತಿ, ಪ್ರಯಾಣಿಕರಿಗೆ ಮನವರಿಕೆ ಮಾಡಿತು.