ಮೈಸೂರು, ಮಾ.1- ಹಳ್ಳಿಯ ಸೊಗಡು, ಸುಂದರ ಪ್ರಕೃತಿಯ ಸೊಬಗು, ಸ್ನೇಹ-ಪ್ರೀತಿಯ ಸೆಳೆತ, ಸಂಬಂಧಗಳ ಮೌಲ್ಯ ಸಾರುವ `ಶಿವ’ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ.
ಮೈಸೂರಿನ ಅಪ್ಪಟ ಗ್ರಾಮೀಣ ಪ್ರತಿಭೆ ರಘು ವಿಜಯ ಕಸ್ತೂರಿ ಚೊಚ್ಚಲ ಪ್ರಯತ್ನದಲ್ಲೇ ಜನರ ಮನಸ್ಸು ಮುಟ್ಟಿದ್ದಾರೆ. ಕಳೆದ ಶುಕ್ರವಾರ ತೆರೆ ಕಂಡಿರುವ `ಶಿವ’ನನ್ನು ಪ್ರೇಕ್ಷಕರು ಅಪ್ಪಿ, ಒಪ್ಪಿಕೊಂಡಿದ್ದಾರೆ. ಒಬ್ಬರಿಂದೊಬ್ಬರಿಗೆ ಪ್ರಚಾರ ವಾಗಿ ಚಿತ್ರಮಂದಿರದತ್ತ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಮೈಸೂರು ತಾಲೂಕು ಹೊಸಹುಂಡಿ ಗ್ರಾಮದ ರಘು ವಿಜಯ ಕಸ್ತೂರಿ, ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣದ ಜೊತೆಗೆ ನಾಯಕ ನಟ ನಾಗಿಯೂ ಮಿಂಚಿದ್ದಾರೆ. ನಾಯಕಿ ಧರಣಿ, ಬಾಲನಟಿ ಕುಮಾರಿ ಸಾನ್ವಿ ಸೇರಿದಂತೆ ಬಹುತೇಕ ಕಲಾವಿದರು ಮೈಸೂರಿನವರು ಎಂಬುದು ಶಿವ ಚಿತ್ರದ ವಿಶೇಷ.
ಶಿವ ಅಲಿಯಾಸ್ ದೊರೆ ನಡೆ-ನುಡಿಯಲ್ಲಿ ಒರಟ. ಆದರೆ ಅವನದ್ದು ಎಲ್ಲರೂ ಮೆಚ್ಚುವ ಗುಣ. ವಿದ್ಯಾಭ್ಯಾಸ ವನ್ನು ಅರ್ಧಕ್ಕೆ ಬಿಟ್ಟು, ತನ್ನದೊಂದು ಗುಂಪಿನ ನಡುವೆ ಕಾಲಹರಣ ಮಾಡಿದರೂ ಮಾನವೀಯ ಮೌಲ್ಯ ಕಳೆದುಕೊಂಡವನಲ್ಲ. ಸ್ನೇಹ-ಪ್ರೀತಿಗೆ ಜೀವ ಕೊಡಲು ಹಿಂಜರಿಯುವುದಿಲ್ಲ. ಅಣ್ಣನಲ್ಲಿ ತಂದೆ, ಅತ್ತಿಗೆಯಲ್ಲಿ ತಾಯಿ ಕಾಣುವ ಈತ ಕಷ್ಟ ಹೇಳಿಕೊಂಡವರಿಗೆ ರಕ್ಷಕ. ಹೆಣ್ಣನ್ನು ಕೆಟ್ಟ ದೃಷ್ಟಿಯಲ್ಲಿ ಕಾಣುವ, ಕಾಡುವ ಕಾಮುಕರಿಗೆ ರಾಕ್ಷಸನೂ ಹೌದು. ಈ ವಿಶಿಷ್ಟ ಪಾತ್ರವನ್ನು ರಘು ಕಸ್ತೂರಿ ವಿಜಯ್ ಸಮರ್ಥವಾಗಿ ನಿಭಾಯಿಸಿದ್ದಾರೆ.
ಸುಸಂಸ್ಕøತ ಕುಟುಂಬದ ಮುಗ್ಧ-ಮುದ್ದು ಹುಡುಗಿ, ತಾನು ಕಲಿತ ವಿದ್ಯೆ ಹಳ್ಳಿ ಜನರಿಗೆ ಉಪಯೋಗವಾಗಬೇಕೆಂಬ ಆದರ್ಶ ಶಿಕ್ಷಕಿ, ಒರಟುತನದಲ್ಲಿ ಅಡಗಿರುವ ನೈಜ ಪ್ರೀತಿ ಸೆಳೆವ `ಅಕ್ಷರ’(ನಾಯಕಿ) ಪಾತ್ರವನ್ನು ಧರಣಿ ಅನುಭವಿ ನಟಿ ಯಂತೆ ಅಭಿನಯಿಸಿದ್ದಾರೆ. ನಾಯಕನ ಅಣ್ಣನ ಮಗಳ ಪಾತ್ರ ನಿರ್ವಹಿಸಿರುವ ಕುಮಾರಿ ಸಾನ್ವಿಯ ನೈಜ ನಟನೆ ಗಮನ ಸೆಳೆಯುತ್ತದೆ. ಖಳನಟನಾಗಿ ನಿಶಾಂತ್ ಮಿಂಚಿದ್ದಾರೆ. ಶ್ರೀವತ್ಸ ಅವರ ಕಾಮಿಡಿ ಕಚಗುಳಿ ಇಡುತ್ತದೆ. ವಿಕ್ರಮ್ ಯಶೋಧರಾ, ಉಮೇಶ್ ಪಾಲಹಳ್ಳಿ, ಸತೀಶ್ ಹೆಬ್ಬಾಳ್, ರಂಜನ್ ಶೆಟ್ಟಿ, ಭೂಪತಿ, ಮಂಜು ಸೂರ್ಯ, ಚೇತನ್ ರಾವ್, ಗೀತಾ, ಲಾವಣ್ಯ, ಭವ್ಯ, ನಾಗಭೂಷಣ್, ಜಗದೀಶ್, ಗುರುಗೌಡ, ಮಂಜುನಾಥ್, ಶ್ರೀಧರ್ ಹೀಗೆ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಸತೀಶ್ ಬಾಬು ಹಿನ್ನೆಲೆ ಸಂಗೀತ, ರಾಮ್‍ದೇವ್ ಅವರ ಸಾಹಸ ನಿರ್ದೇಶನ, ಕುಮಾರ್ ಕೋಟೆಕೊಪ್ಪ ಅವರ ಸಂಕಲನ ಚಿತ್ರ ಕಟ್ಟುವಲ್ಲಿ ಪ್ರಮುಖವಾಗಿವೆ. ಮಂಡ್ಯದ ಹಳ್ಳಿಯೊಂದರಲ್ಲಿ ನಡೆಯುವ ಕಥಾ ಹಂದರವನ್ನು ಉತ್ತಮವಾಗಿ ಹೆಣೆಯಲಾಗಿದೆ. ಗ್ರಾಮೀಣ ಭಾಷೆಯ ಸಂಭಾಷಣೆ ಕೇಳಲು ಹಿತವೆನಿಸುತ್ತದೆ. `ಕೆಟ್ಟ ಚಟಗಳಿಗಿಂತ ಒಳ್ಳೆ ಛಲ ಇರ್ಬೇಕು. ಆಗಲೇ ವಿದ್ಯೆಗೊಂದು ಬೆಲೆ, ಬುದ್ದಿಗೊಂದು ನೆಲೆ ಸಿಗೋದು. ಆದ್ರೆ ವಿದ್ಯೆ ಇದೆ ವಿನಯ ಇಲ್ಲ. ಬುದ್ದಿ ಇದೆ ಶ್ರದ್ಧೆ ಇಲ್ಲ. ಮಾತ್ ಮಾತ್ರ ಎಲ್ಲರ ಮತಿ ಕೆಡಿಸ್ತಿದೆ’. ಇಂತಹ ಒಂದಷ್ಟು ಡೈಲಾಗ್ ಮನಸ್ಸು ತಟ್ಟುತ್ತವೆ. ಅಣ್ಣ-ತಮ್ಮನ ಜಗಳದಲ್ಲಿರುವ ಪ್ರೀತಿ, ಅತ್ತಿಗೆ-ಮೈದುನನ ವಾತ್ಸಲ್ಯ. ಹೀಗೆ ಸಂಬಂಧಗಳ ಮೌಲ್ಯ ಚಿತ್ರದ ಜೀವಾಳವಾಗಿದೆ. ತಾರಾಗಣದಲ್ಲಿರುವ ಬಹುತೇಕರು ಮೈಸೂರಿನ ರಂಗಾಯಣದಲ್ಲಿ ಪಳಗಿರುವವರು. ಹಾಗಾಗಿ ಅನುಭವಿಗಳಂತೆ ನೈಜವಾಗಿ ನಟಿಸಿದ್ದಾರೆ. ಹಲವು ಕನಸುಗಳೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ರಘು ವಿಜಯ ಕಸ್ತೂರಿ, ಚಿತ್ರ ನೋಡಿ ತಪ್ಪು-ಒಪ್ಪುಗಳ ತಿಳಿಸುವ ಮೂಲಕ ಮುಂದಿನ ಪಯಣಕ್ಕೆ ಶಕ್ತಿ ತುಂಬುವಂತೆ ಕೋರಿದ್ದಾರೆ.