ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಂದ ಯುವತಿಗೆ ನೋಟಿಸ್
ಮೈಸೂರು

ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಂದ ಯುವತಿಗೆ ನೋಟಿಸ್

March 15, 2021

ಬೆಂಗಳೂರು, ಮಾ.14-ಸಾಮಾಜಿಕ ಕಾರ್ಯ ಕರ್ತ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರು ಆಧರಿಸಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಯಲ್ಲಿದ್ದಳೆನ್ನಲಾದ ಯುವತಿಗೆ ನೋಟಿಸ್ ಜಾರಿ ಮಾಡಿದ್ದರೆ, ಎಸ್‍ಐಟಿ ತಂಡ ರಮೇಶ್ ಜಾರಕಿಹೊಳಿ ನೀಡಿದ್ದ ದೂರನ್ನು ಆಧರಿಸಿ ನಾಲ್ವರಿಗೆ ನೋಟಿಸ್ ಜಾರಿ ಮಾಡಿದೆ.

ಸಿಡಿಯಲ್ಲಿದ್ದ ಯುವತಿ ಶನಿವಾರ ವೀಡಿಯೋ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಮಾಡಿ, ತನ್ನ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಗೃಹ ಸಚಿವ ರನ್ನು ಕೋರಿದ್ದರು. ಇದರ ಬೆನ್ನಲ್ಲೇ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಅಜ್ಞಾತ ಸ್ಥಳದಲ್ಲಿರುವ ಯುವತಿಗೆ ಆಕೆಯ ವಾಟ್ಸ್‍ಅಪ್ ಹಾಗೂ ಇ-ಮೇಲ್‍ಗೆ ನೋಟಿಸ್ ರವಾನಿಸಿದ್ದಲ್ಲದೇ ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿರುವ ಆಕೆಯ ಅಜ್ಜಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದಾರೆ. ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನು ಪೆಟಿಷನ್ ಆಗಿ ದಾಖಲಿಸಿಕೊಂಡಿದ್ದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಭಾನುವಾರ ವಿಜಯಪುರ
ಜಿಲ್ಲೆಯ ನಿಡಗುಂದಿ ಪಟ್ಟಣದ ವೀರೇಶನಗರದಲ್ಲಿರುವ ಯುವತಿ ಅಜ್ಜಿ ಮನೆಗೆ (ತಾಯಿಯ ತವರು ಮನೆ) ಸ್ಥಳೀಯ ಪೊಲೀಸರೊಂದಿಗೆ ತೆರಳಿದಾಗ ಮನೆಯಲ್ಲಿ ಯಾರೂ ಇಲ್ಲದೆ ಬೀಗ ಹಾಕಿತ್ತು. ಈ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ನೋಟೀಸ್ ಅನ್ನು ಅಂಟಿಸಿದ್ದಾರೆ.

ನೋಟಿಸ್ ವಿವರ: ನೋಟೀಸ್‍ನಲ್ಲಿ ಮಾ.13 ದಿನಾಂಕ ನಮೂದಾಗಿದ್ದು, “ದಿನಾಂಕ 2-3-2021ರಂದು ದಿನೇಶ್ ಕಲ್ಲಹಳ್ಳಿಯವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅರ್ಜಿ ಸಂಬಂಧ ಠಾಣಾ ಅರ್ಜಿ ಸಂಖ್ಯೆ ಕ್ಯೂ1ಪಿಎಸ್/ಪಿಇಟಿ/ಜಿಎನ್‍ಎಲ್/40/2021ರಲ್ಲಿ ದೂರು ದಾಖಲಾಗಿ ವಿಚಾರಣೆಯಲ್ಲಿರುತ್ತದೆ. ಈ ದೂರಿನ ಹೆಚ್ಚಿನ ವಿಚಾರಣೆಯ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲು ತಮ್ಮ ಹೇಳಿಕೆಯನ್ನು ಪಡೆದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಆದ್ದರಿಂದ ಯುವತಿ ನೋಟೀಸ್ ನೋಡಿದ ತಕ್ಷಣ ತುರ್ತಾಗಿ ಈ ಕೆಳಗೆ ಸಹಿ ಮಾಡಿರುವ ಅಧಿಕಾರಿಯ ಮೊಬೈಲ್ ನಂಬರ್/ಇ-ಮೇಲ್ ಅನ್ನು ಸಂಪರ್ಕಿಸುವುದು ಮತ್ತು ತಾವು ನಿಗದಿಪಡಿ ಸಿದ ದಿನಾಂಕ/ಸಮಯ ಮತ್ತು ಸ್ಥಳಕ್ಕೆ ಬಂದು ತಮ್ಮ ಹೇಳಿಕೆಯನ್ನು ಪಡೆಯ ಲಾಗುವುದು. ತಮ್ಮ ಮನವಿಯ ಮೇರೆಗೆ ಸೂಕ್ತ ರಕ್ಷಣೆಯನ್ನು ಒದಗಿಸಲಾಗುವುದು’’ ಎಂದು ನೋಟಿಸ್‍ನಲ್ಲಿ ನಮೂದಿಸಲಾಗಿದೆ. ಅಲ್ಲದೇ ಪ್ರಕರಣದ ತನಿಖಾಧಿಕಾರಿಯಾಗಿ ರುವ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮಾರುತಿ ಅವರ ಸಹಿಯೊಂ ದಿಗೆ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ನಮೂದಿಸಲಾಗಿದೆ.

ಸಂತ್ರಸ್ತ ಯುವತಿಯು ಬಾಗಲಕೋಟೆ ಜಿಲ್ಲೆಯವರಾಗಿದ್ದರೂ, ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಆಕೆಯ ಅಜ್ಜಿ ವಾಸಿಸುತ್ತಿದ್ದು, ಅವರ ಸಂಪರ್ಕ ಯುವತಿಗೆ ಇದೆ ಎಂಬ ಹಿನ್ನೆಲೆಯಲ್ಲಿ ಆ ಮನೆಯ ಬಾಗಿಲಿಗೆ ನೋಟೀಸ್ ಅನ್ನು ಅಂಟಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದಿನೇಶ್ ಕಲ್ಲಹಳ್ಳಿ ತಾನು ನೀಡಿರುವ ದೂರನ್ನು ವಾಪಸ್ ಪಡೆಯುವುದಾಗಿ ಪೊಲೀಸರಿಗೆ ಲಿಖಿತವಾಗಿ ತಿಳಿಸಿದರೂ ಕೂಡ ಅವರ ದೂರು ಚಾಲ್ತಿಯಲ್ಲಿದೆ ಎಂಬುದು ಈ ನೋಟೀಸ್ ಮೂಲಕ ದೃಢಪಡುತ್ತಿದೆ.

ಎಸ್‍ಐಟಿಯಿಂದ ನಾಲ್ವರಿಗೆ ನೋಟೀಸ್: ಮತ್ತೊಂದೆಡೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದಾಶಿವನಗರ ಠಾಣೆ ಪೊಲೀಸರಿಗೆ ನೀಡಿದ ದೂರಿನ ತನಿಖೆ ಕೈಗೆತ್ತಿ ಕೊಂಡಿರುವ ಎಸ್‍ಐಟಿ ತಂಡ, ಯುವತಿಯ ಸಂಪರ್ಕದಲ್ಲಿದ್ದವರು ಹಾಗೂ ಸಿ.ಡಿ. ಅಪ್‍ಲೋಡ್ ಮಾಡಿದವರು ಎನ್ನಲಾದ ನಾಲ್ವರಿಗೆ ವಾಟ್ಸ್ ಅಪ್ ಮತ್ತು ಇ-ಮೇಲ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ಕಾಂಗ್ರೆಸ್, ಬಿಜೆಪಿ ನಾಯಕರ ಕೈವಾಡ: ಶಾಸಕ ಯತ್ನಾಳ್ ಹೊಸ ಬಾಂಬ್

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ. ಸಿಡಿ ಪ್ರಕರಣದ ಹಿಂದೆ ಬಿಜೆಪಿಯ ಓರ್ವ ಉನ್ನತ ನಾಯಕ ಮತ್ತು ಕಾಂಗ್ರೆಸ್‍ನ ಓರ್ವ ಉನ್ನತ ನಾಯಕನ ಕೈವಾಡವಿದೆ. ಇವರಿಬ್ಬರೂ ಸೇರಿಕೊಂಡು ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಿ ದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಉನ್ನತ ನಾಯಕನ ಬಳಿ ಇನ್ನೂ ಹಲವರ ಸಿ.ಡಿ.ಗಳಿವೆ. ಕಾಂಗ್ರೆಸ್ ಉನ್ನತ ನಾಯಕನ ಮನೆಯಲ್ಲೂ ಇಂತಹ ಸಿ.ಡಿ.ಗಳಿವೆ ಎಂದ ಅವರು, ಈ ಪ್ರಕರಣವನ್ನು ಎಸ್‍ಐಟಿ ತನಿಖೆ ನಡೆಸಿದರೆ ನ್ಯಾಯ ದೊರೆ ಯುವುದಿಲ್ಲ. ಎಸ್‍ಐಟಿ ತಂಡದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಆಪ್ತರಿದ್ದು, ಅವರು ಹೇಳಿದಂತೆ ಅಧಿಕಾರಿಗಳು ಕೇಳುತ್ತಾರೆ. ಆದ್ದರಿಂದ ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರ ಬರಬೇಕಾದರೆ ಸಿಬಿಐ ತನಿಖೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಸಂತ್ರಸ್ತೆ ಎನ್ನಲಾದ ಯುವತಿಯ ಮೊದಲಿನ ವೀಡಿಯೋ ದಲ್ಲಿ ಆಕೆ ವಿಜಯಪುರ ಭಾಷೆಯಲ್ಲಿ ಮಾತನಾಡಿದ್ದಾರೆ. ಶನಿವಾರ ಬಿಡುಗಡೆಯಾದ 34 ಸೆಕೆಂಡ್‍ಗಳ ವೀಡಿಯೋದಲ್ಲಿ ಬೆಂಗಳೂರಿನ ಭಾಷೆಯಲ್ಲಿ ಮಾತನಾಡಿದ್ದಾರೆ. ದಿಢೀರನೆ ಭಾಷೆ ಬದಲಾಗಿದ್ದು ಹೇಗೆ? ಎಂದು ಯತ್ನಾಳ್ ಅನುಮಾನ ವ್ಯಕ್ತಪಡಿಸಿದರು.

Translate »