ಈಗ ರೈತರ ಅಳಿವು-ಉಳಿವಿನ ಹೋರಾಟ ನಡೆಯುತ್ತಿದೆ
ಮೈಸೂರು

ಈಗ ರೈತರ ಅಳಿವು-ಉಳಿವಿನ ಹೋರಾಟ ನಡೆಯುತ್ತಿದೆ

January 28, 2021

ಮೈಸೂರು,ಜ.27(ಎಂಕೆ)-ಬಲಿಷ್ಠ ಕಂಪನಿಗಳು ಮತ್ತು ಯಾರ ಬೆಂಬಲವೂ ಇಲ್ಲದ ರೈತರ ನಡುವೆ ಅಳಿವು-ಉಳಿವಿನ ಪೈಪೋಟಿ ನಡೆಯುತ್ತಿದ್ದು, ಕೃಷಿಕರೇ ಇರಬಾರದು ಎಂಬ ಕಾನೂನುಗಳನ್ನು ರೂಪಿಸಲಾಗುತ್ತಿದೆ ಎಂದು ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಕೃಷಿ ಹಾಗೂ ಅಭಿವೃದ್ಧಿ ಕೆಂದ್ರದ ಮ್ಯಾನೆಜಿಂಗ್ ಟ್ರಸ್ಟಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂ ಗಣದಲ್ಲಿ ರೋಟರಿ ಮೈಸೂರು ಮಿಡ್‍ಟೌನ್ ವತಿಯಿಂದ ಆಯೋಜಿಸಿದ್ದ ‘ಪ್ರಗತಿಪರ ರೈತ ಪ್ರಶಸ್ತಿ’ ಪ್ರದಾನ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಮಾರುಕಟ್ಟೆಯಲ್ಲಿ ಕೇಳಿದ್ದನ್ನು ರೈತರು ಬೆಳೆದುಕೊಡುವಂತಾಗಿದೆ. ಯಾವ ಕಾಯ್ದೆಗಳೂ ಕೃಷಿಕರಿಗೆ ಪೂರಕವಾಗಿಲ್ಲ. ಕಳೆದ ಎರಡು ತಿಂಗಳಿಂದ ದೆಹಲಿಯ ಕೊರೆಯುವ ಚಳಿಯಲ್ಲಿಯೂ ರೈತರು, ರೈತ ಮಹಿಳೆಯರು ಕೃಷಿ ಕಾಯ್ದೆಗೆ ತಂದಿರುವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರೆ ಕಾರಣ ಇರಬಹುದಲ್ಲವೆ? ಎಂದು ಪ್ರಶ್ನಿಸಿದರು.

ನೀತಿ-ನಿಯಮಗಳನ್ನು ರೂಪಿಸುವ ಅಂತರರಾಷ್ಟ್ರೀಯ ಕಂಪನಿಗಳ ಮಾಲೀಕರಾದ ಶ್ರೀಮಂತರು ಕೃಷಿ ಪ್ರಧಾನ ವಾದ ದೇಶದಲ್ಲಿ ರೈತರಿಂದ ಕೃಷಿ ನಡೆಯಬಾರದು ಎಂಬ ಪ್ರಯತ್ನಗಳನ್ನು ಮಾಡಿದ್ದರು. ಈವರೆಗೆ ಮಾಡಿದ ಪ್ರಯತ್ನ ಗಳಿಗೆ ವಿರೋಧ ವ್ಯಕ್ತವಾಗಿದ್ದರಿಂದ ಇಂದು ಬೇರೆ ಬೇರೆ ಆಯಾಮಗಳಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಬಹುಪಕ್ಷೀಯ ಹಾಗೂ ಮುಕ್ತವಾಗಿ ನಡೆಯುತ್ತಿದ್ದ ವಾಣಿಜ್ಯ ಒಪ್ಪಂದಗಳು ಮುರಿದು ಬಿದ್ದಿದ್ದು, ದ್ವಿಪಕ್ಷೀಯ ಅಂದರೆ ಎರಡೆರಡು ದೇಶಗಳ ನಡುವೆ ಗೌಪ್ಯವಾಗಿ ಒಪ್ಪಂದಗಳಾಗುತ್ತಿವೆ ಎಂದರು.

ಇತ್ತೀಚೆಗೆ ಆರ್‍ಸಿಇಪಿ(ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಎಂಬುದು ಶುರುವಾಗಿದೆ. ಇದರಲ್ಲಿ ಆಸ್ಟ್ರೇ ಲಿಯಾ, ನ್ಯೂಜಿಲ್ಯಾಂಡ್ ಹಾಗೂ ಆಗ್ನೇಯ ದೇಶಗಳಿದ್ದು, ಭಾರತವೂ ಯಾವಾಗ ಬೇಕಾದರೂ ಸೇರಬಹುದು. ಒಂದು ವೇಳೆ ಸೇರಿದರೆ ದೇಶದ ಸಣ್ಣ ಸಣ್ಣ ಹಿಡುವಳಿ ದಾರರು, ಮಹಿಳೆಯರ ಕೈಯ್ಯಲ್ಲಿ ನಡೆಯುತ್ತಿರುವ ಡೈರಿ ಸೆಕ್ಟರ್‍ಗಳು ಸಂಪೂರ್ಣ ಹಾಳಾಗುತ್ತವೆ. ನ್ಯೂಜಿಲ್ಯಾಂಡ್ ನವರು ಇಲ್ಲಿಗೇ ನೂರಾರು ಹಸುಗಳನ್ನು ತಂದು ಹಾಲು ಕರೆದು ಮಾರಾಟ ಮಾಡಲು ತುದಿಗಾಲಿನಲ್ಲಿ ನಿಂತಿ ದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರ ಆತ್ಮಹತ್ಯೆ: ಕಳೆದ 25 ವರ್ಷಗಳಿಂದ ಅಂದರೆ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ಬಳಿಕ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಾಣಿಜ್ಯ ಒಪ್ಪಂದಕ್ಕೂ ಮುನ್ನ ರೈತರು ಸಾಲ ಮಾಡುತ್ತಿದ್ದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಸಾಲ ತೀರಿಸಲಾಗದೆ ರೈತರ ಆತ್ಮಹತ್ಯೆ ಪ್ರಾರಂಭವಾಯಿತು. ಇಲ್ಲಿಯವರೆಗೆ ದೇಶದಲ್ಲಿ ಸುಮಾರು 3 ರಿಂದ 4 ಲಕ್ಷ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದ ಶೇ.75 ರಷ್ಟಿರುವ ಕೃಷಿ ಕ್ಷೇತ್ರ ಗಂಭೀರವಾದ ಬಿಕ್ಕಟ್ಟಿ ನಲ್ಲಿ ಸಿಕ್ಕಿಹಾಕಿಕೊಂಡಿದ್ದೆ. ಈ ಬಿಕ್ಕಟ್ಟಿನಿಂದ ಹೊರಬರ ಲಾರದೆ ರೈತರು ಸಿಲುಕಿ ಒದ್ದಾಡುತ್ತಿದ್ದಾರೆ. ಯಾವ ರಾಜ ಕೀಯ ಪಕ್ಷದವರು ಆಡಳಿತಕ್ಕೆ ಬಂದರೂ ರೈತರ ಸಮಸ್ಯೆ ಗಳ ನಿವಾರಣೆಗೆ ಪೂರಕವಾದ ಯೋಜನೆಗಳನ್ನು ಮಾಡಿಲ್ಲ. ಅಲ್ಲದೆ ಇಷ್ಟೂ ವರ್ಷಗಳಾದರೂ ರೈತರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಧ್ಯಮ ವರ್ಗದವರಾಗಲೀ, ನಗರವಾಸಿ ಗಳಾಗಲೀ ಪ್ರಶ್ನಿಸಿಲ್ಲ. ಹಾಗೆಯೇ ಗೌರವದ ಮಾತು ಗಳನ್ನು ಆಡಲಿಲ್ಲ ಎಂದು ವಿಷಾದಿಸಿದರು.

ಸನ್ಮಾನ: ಇದೇ ವೇಳೆ ರೋಟರಿ ಮಿಡ್‍ಟೌನ್ ಹೆಚ್. ರಾಮಚಂದ್ರೇಗೌಡ ಸ್ಮಾರಕ ಪ್ರಗತಿಪರ ರೈತ ಪ್ರಶಸ್ತಿಯನ್ನು ನಂಜನಗೂಡು ತಾಲೂಕಿನ ತಾಂಡವಪುರದ ರೈತ ಟಿ.ಆರ್. ವಿದ್ಯಾಸಾಗರ್ ಅವರಿಗೆ ಪ್ರದಾನ ಮಾಡಲಾಯಿತು. ರೋಟರಿ ಮೈಸೂರು ಮಿಡ್‍ಟೌನ್ ಪದಾಧಿಕಾರಿಗಳಾದ ಎ.ಎನ್. ಅಯ್ಯಣ್ಣ, ಹೆಚ್.ಎಸ್.ವೀರೇಶ್, ಆರ್.ರವೀಂದ್ರಬಾಬು, ಭಾನುಚಂದ್ರ, ಅನುಪಮ ಮತ್ತಿತರರು ಉಪಸ್ಥಿತರಿದ್ದರು.

Translate »