ಮೈಸೂರು, ಜು. 23(ಆರ್‍ಕೆ)- ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗಾಗಿ ಮೈಸೂರಿನ ಎನ್‍ಆರ್ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಕೋವಿಡ್ ಕೇರ್ ಸೆಂಟರ್ ಗುರುವಾರದಿಂದ ಕಾರ್ಯಾರಂಭ ಮಾಡಿದೆ.
ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ನೆರವಿನಿಂದ ಉದಯಗಿರಿಯ ಫಾರೂಖಿಯಾ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಸಂಘ-ಸಂಸ್ಥೆಗಳು ಸಿದ್ಧಪಡಿಸಿರುವ ಕೋವಿಡ್ ಕೇರ್ ಸೆಂಟರ್‍ಅನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಟೇಪು ಕತ್ತರಿಸುವ ಮೂಲಕ ಉದ್ಘಾಟಿಸಿದರು.
135 ಹಾಸಿಗೆ ಸಾಮಥ್ರ್ಯದ ಸೆಂಟರ್‍ನಲ್ಲಿ ಕುಡಿಯಲು, ಸ್ನಾನಕ್ಕೆ ಬಿಸಿ ನೀರು, ಶೌಚಾಲಯ, ಚಿಕಿತ್ಸೆಗಾಗಿ ವೆಂಟಿ ಲೇಟರ್, ಸೆಂಟ್ರಲೈಸಡ್ ಆಕ್ಸಿಜನ್ ಪೂರೈಕೆ, ಸ್ವಚ್ಛತೆ, ಮನರಂಜನೆಗಾಗಿ ಟಿವಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಎನ್‍ಆರ್ ಕ್ಷೇತ್ರದಾದ್ಯಂತ ರ್ಯಾಪಿಡ್ ಆ್ಯಂಟಿಜೆನ್ ಕಿಟ್‍ಗಳ ಮೂಲಕ ಕೊರೊನಾ ಟೆಸ್ಟ್ ಮಾಡಲಾಗುತ್ತಿದ್ದು, ಪಾಸಿಟಿವ್ ಬಂದ ವ್ಯಕ್ತಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಗುಣ ಪಡಿಸಲು ಕೋವಿಡ್ ಕೇರ್ ಸೆಂಟರ್‍ನಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಸ್ಥಳೀಯ ಜನಪ್ರತಿ ನಿಧಿಗಳು, ಮೌಲ್ವಿಗಳು, ಸಂಘ-ಸಂಸ್ಥೆಗಳು ಆಸಕ್ತಿ ವಹಿಸಿ ಶೈಕ್ಷಣಿಕ ಸಂಸ್ಥೆ ಮುಖ್ಯಸ್ಥರ ಮನವೊಲಿಸಿ ಕಾಲೇಜು ಕಟ್ಟಡವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಿ ಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಕೋವಿಡ್ ನಿರ್ವಹಿಸಲು ಜಿಲ್ಲಾಡಳಿತಕ್ಕೆ ಅನುಕೂಲವಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.
ಮಾಜಿ ಮೇಯರ್ ಅಯೂಬ್‍ಖಾನ್, ಪಾಲಿಕೆ ವಕ್ರ್ಸ್ ಸಮಿತಿ ಅಧ್ಯಕ್ಷ ಅಸ್ರತ್‍ಉಲ್ಲಾ ಖಾನ್, ಪಾಲಿಕೆ ಸದಸ್ಯ ಶೌಕತ್ ಪಾಷಾ, ಪಾಲಿಕೆ ಕಮೀಷ್ನರ್ ಗುರುದತ್ ಹೆಗ್ಡೆ, ಧಾರ್ಮಿಕ ಮುಖಂಡರು, ಕಾರ್ಪೊರೇಟರ್‍ಗಳು ಕೋವಿಡ್ ಕೇರ್ ಸೆಂಟರ್‍ಗೆ ಚಾಲನೆ ನೀಡುವ ವೇಳೆ ಉಪಸ್ಥಿತರಿದ್ದರು.
ಅದೇ ರೀತಿ ರಾಜೀವನಗರದ ಆಂಡಲುಸ್ ಪಬ್ಲಿಕ್ ಶಾಲೆ ಮತ್ತು ಅಜೀಜ್‍ಸೇಠ್‍ನಗರದ ಬೀಡಿ ಕಾರ್ಮಿಕರ ಮಜ್ದೂರ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿ ಸುವ ಕಾರ್ಯವೂ ಭರದಿಂದ ಸಾಗಿದ್ದು, ಒಟ್ಟಾರೆ ಎನ್‍ಆರ್ ಕ್ಷೇತ್ರದಲ್ಲಿ 450 ಹಾಸಿಗೆ ಸಾಮಥ್ರ್ಯದ 3 ಕೋವಿಡ್ ಕೇರ್ ಸೆಂಟರ್‍ಗಳು ತಲೆಎತ್ತಿದಂತಾಗಲಿದೆ. ಸ್ವ್ಯಾಬ್ ಪರೀಕ್ಷೆಯಲ್ಲಿ ಸ್ಥಳದಲ್ಲೇ ವರದಿ ಬರುತ್ತಿರುವುದರಿಂದ ಕೊರೊನಾ ವೈರಸ್ ದೃಢಪಡುವ ವ್ಯಕ್ತಿಗಳನ್ನು ಅಲ್ಲಿಂದಲೇ ನೇರವಾಗಿ ಆಂಬುಲನ್ಸ್ ಮೂಲಕ ಕೋವಿಡ್ ಕೇರ್ ಸೆಂಟರ್‍ಗೆ ಕರೆದೊಯ್ದು ದಾಖಲಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಸಕಲ ವ್ಯವಸ್ಥೆ ಮಾಡುತ್ತಿದ್ದಾರೆ.
ಪಾಲಿಕೆ ಹಾಗೂ ಆರೋಗ್ಯ ಇಲಾಖೆಯಿಂದ ಪ್ರತಿನಿತ್ಯ ಸ್ಯಾನಿಟೈಸ್ ಮಾಡಿ, ಸ್ವಚ್ಛಗೊಳಿಸಲಾಗುತ್ತಿದ್ದು, ಉದಯ ಗಿರಿ ಠಾಣೆ ಇನ್‍ಸ್ಪೆಕ್ಟರ್ ಪೂಣಚ್ಚ ನೇತೃತ್ವದಲ್ಲಿ ಸೆಂಟರ್ ಗಳಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.