ಎನ್‍ಟಿಎಂ ಶಾಲೆ, ನಿರಂಜನ ಮಠ, ವಿವೇಕ ಸ್ಮಾರಕ  ವಿಷಯ ಸುಖಾಂತ್ಯ: ಹೋರಾಟಗಾರರಲ್ಲಿ ಆಶಾಭಾವನೆ
ಮೈಸೂರು

ಎನ್‍ಟಿಎಂ ಶಾಲೆ, ನಿರಂಜನ ಮಠ, ವಿವೇಕ ಸ್ಮಾರಕ ವಿಷಯ ಸುಖಾಂತ್ಯ: ಹೋರಾಟಗಾರರಲ್ಲಿ ಆಶಾಭಾವನೆ

October 29, 2021

ಮೈಸೂರು, ಅ.28(ಪಿಎಂ)- ಎನ್‍ಟಿಎಂ ಕನ್ನಡ ಶಾಲೆ ಅದೇ ಜಾಗದಲ್ಲಿ ಉಳಿದು, ಶ್ರೀ ನಿರಂಜನ ಮಠದ ಅಸ್ಮಿತೆಗೂ ಯಾವುದೇ ಧಕ್ಕೆ ಬಾರದೇ, ವಿವೇಕ ಸ್ಮಾರಕವೂ ಆಗಲಿ ಎಂಬ ಮಹಾರಾಣಿ (ಎನ್‍ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದುದ್ದೇಶ ಈಡೇರುವ ಆಶಾ ಭಾವನೆ ಮೂಡಿದೆ. ಎಲ್ಲವೂ ಸುಖಾಂತ್ಯ ಕಾಣುವ ಇಂತಹ ಸನ್ನಿವೇಶದಲ್ಲಿ ಈ ಹಿಂದೆ ನಮ್ಮಲ್ಲೇ ಇದ್ದ ಕೆಲವರು ಶಾಲೆಯನ್ನು ಬೇರೆಡೆ ನಿರ್ಮಿಸಬಹುದೆಂಬ ಬಗ್ಗೆ ಪ್ರಚಾರ ಮಾಡುವ ಮೂಲಕ ಶಾಲೆ ಉಳಿಸುವ ಒಕ್ಕೂಟದ ಹೋರಾಟ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಒಕ್ಕೂಟದ ಮುಖಂಡರು ಆರೋಪಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂ ಡರೂ ಆದ ಮಾಜಿ ಮೇಯರ್ ಪುರುಷೋತ್ತಮ್, 1881 ರಲ್ಲಿ ಪ್ರಾರಂಭವಾದ ಎನ್‍ಟಿಎಂ ಶಾಲೆಯು ಈಗಿರುವ ಕಟ್ಟಡದಲ್ಲಿ ಕಳೆದ 50 ವರ್ಷಗಳಿಂದ ನಡೆಯುತ್ತಿದೆ. ಇಷ್ಟು ಸುದೀರ್ಘ ಅವಧಿಯಿಂದ ನಡೆಯುತ್ತಿರುವ ಶಾಲೆಯನ್ನು ಏಕಾಏಕಿ ರಾಮಕೃಷ್ಣ ಆಶ್ರಮಕ್ಕೆ ಸರ್ಕಾರ ನೀಡಿದ್ದು ಸರಿ ಯಲ್ಲ. ಈ ವಿಚಾರದಲ್ಲಿ ಕೋರ್ಟ್ ಸಹ ನಮ್ಮ ಅಹವಾಲು ಪರಿಗಣಿಸದೇ ನಮ್ಮ ವಿರುದ್ಧ ತೀರ್ಪು ನೀಡಿದರೂ ನಾವು ಎದೆಗುಂದಲಿಲ್ಲ. ಈ ಶಾಲೆ ಉಳಿಸಲು ನೂರಾರು ಸಂಘಟನೆಗಳು ಕೈಜೋಡಿಸಿವೆ ಎಂದು ತಿಳಿಸಿದರು.

ಇದೀಗ ಸಂಧಾನಕ್ಕಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಹಾಗೂ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಜೊತೆ ಮಾತುಕತೆ ನಡೆದಿದೆ. ಇಂತಹ ಸನ್ನಿವೇಶ ದಲ್ಲಿ ಶಾಲೆಯನ್ನು ಬೇರೆಡೆ ಕಟ್ಟಲು ಒಪ್ಪಿಗೆ ಇದೆ ಎಂಬ ಹೇಳಿಕೆ ಮೂಲಕ ಹೋರಾಟ ಹತ್ತಿಕ್ಕಲು ನಮ್ಮೊಂದಿಗಿದ್ದು ಹೊರ ಹೋದವರು ಸುದ್ದಿ ಹರಡುತ್ತಿದ್ದಾರೆ. ಆ ಮೂಲಕ ನಮ್ಮ ಹೋರಾಟ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಒಕ್ಕೂಟದಡಿ ನಡೆಯುತ್ತಿರುವುದೇ ನಿಜವಾದ ಹೋರಾಟ ಎಂದು ತಿಳಿಸಿದರು.

ಮುಂದಿನ 10ರಿಂದ 15 ದಿನದಲ್ಲಿ ಸಂಧಾನ ಪ್ರಕ್ರಿಯೆ ಆರಂಭಗೊಂಡು ಎಲ್ಲವೂ ಸುಖಾಂತ್ಯ ಕಾಣುವ ಭರವಸೆ ಮೂಡಿದೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಕ್ಕೂಟ ದಿಂದ ಐವರನ್ನು ಆಯ್ಕೆ ಮಾಡಲಾಗಿದೆ. ನಾನು ಸೇರಿ ದಂತೆ ಒಕ್ಕೂಟದ ಮುಖಂಡರಾದ ಪ.ಮಲ್ಲೇಶ್, ಸ.ರ. ಸುದರ್ಶನ, ಮೋಹನಕುಮಾರ್‍ಗೌಡ, ಹೊಸಕೋಟೆ ಬಸವರಾಜು ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಕ್ಕೂಟದಲ್ಲಿ ನಿರ್ಣಯವಾಗಿದೆ ಎಂದರು.
ಒಕ್ಕೂಟದ ಸ.ರ.ಸುದರ್ಶನ ಮಾತನಾಡಿ, `ಶಾಲೆಯೂ ಉಳಿಯಲಿ, ಸ್ಮಾರಕವೂ ಆಗಲಿ’ ಎಂಬ ಆಶಯದಲ್ಲಿ ಸುತ್ತೂರು ಶ್ರೀಗಳು ಮತ್ತು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಮಧ್ಯಸ್ಥಿಕೆಯಲ್ಲಿ ಉಭಯ ಕಡೆಯವರ ನಡುವೆ ಎರಡು-ಮೂರು ಸುತ್ತಿನ ಮಾತುಕತೆ ನಡೆದಿದೆ. ಇದ ರಿಂದ ಎರಡೂ ಕಡೆಯವರ ನಡುವಿನ ಅಂತರ ತಗ್ಗಿದ್ದು, ಶೀಘ್ರದಲ್ಲೇ ಎಲ್ಲರೂ ಒಪ್ಪುವ ಒಂದು ಪರಿಹಾರ ದೊರೆ ಯುವ ಆಶಾಭಾವನೆ ಮೂಡಿದೆ ಎಂದು ತಿಳಿಸಿದರು.

ಜಿಲ್ಲಾಡಳಿತ ಎನ್‍ಟಿಎಂ ಶಾಲೆ ಸ್ವಚ್ಛತೆಗೆ ಗಮನ ನೀಡಿಲ್ಲ. ಸಮಿತಿಯವರು ಕಳೆದ 4 ದಿನಗಳಿಂದ ತಾರಸಿ ಮೇಲೆ ಸ್ವಚ್ಛತೆಗೊಳಿಸಿದ್ದೇವೆ. ಜಿಲ್ಲಾಡಳಿತ ಶಾಲೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಕೂಡಲೇ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ಮುಖಂಡರಾದ ಬಸವ ರಾಜು, ಮೋಹನ್‍ಕುಮಾರ್‍ಗೌಡ, ದ್ಯಾವಪ್ಪನಾಯಕ, ನಾ.ದಿವಾಕರ್, ಭಾನುಮೋಹನ್, ಬೆಮೆಲ್ ಸಿದ್ದಲಿಂಗಪ್ಪ, ಬೆಮೆಲ್ ರಾಜಕಿಶೋರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »