ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ
News

ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ

October 29, 2021

ಬೆಂಗಳೂರು,ಅ.28(ಕೆಎಂಶಿ)-ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾದ ಮೇಲೆಯೂ ರಾಜ್ಯದ ಆಡಳಿತಾರೂಢ ಪಕ್ಷ ಬಿಜೆಪಿ ಮತದಾರರಿಗೆ ಹಣ ಹಂಚುವ ಕೆಲಸಕ್ಕೆ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ. ಪ್ರವಾಸ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸಚಿವರಾದ ವಿ.ಸೋಮಣ್ಣ, ಸಿಸಿ ಪಾಟೀಲ್, ಗೋವಿಂದ ಕಾರಜೋಳ ಸೇರಿದಂತೆ ಏಳೆಂಟು ಮಂತ್ರಿಗಳು ಇವತ್ತಿಗೂ ಚುನಾವಣೆ ನಡೆ ಯುತ್ತಿರುವ ಕ್ಷೇತ್ರಗಳ ಸಮೀಪದ ರೆಸಾರ್ಟ್ ನಲ್ಲಿಯೇ ಇದ್ದಾರೆ ಎಂದು ಆರೋಪಿಸಿದರು.

ಮಾಹಿತಿ ಪ್ರಕಾರ ಪ್ರತಿ ಹಳ್ಳಿಗೆ 30ರಿಂದ 40 ಲಕ್ಷ ರೂ. ಹಣ ಹಂಚಿಕೆ ಆಗಿದೆ. ಖುದ್ದು ಸಚಿವರೇ ಈ ಕೃತ್ಯದಲ್ಲಿ ತೊಡಗಿರುವ ಮಾಹಿತಿ ಇದೆ. ಕಾಂಗ್ರೆಸ್ ಪಕ್ಷದಿಂದಲೂ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಕೆಲಸ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು. ಕೆಲವು ಹಳ್ಳಿಗಳಲ್ಲಿ ಐದರಿಂದ ಆರು ಮತಗಟ್ಟೆಗಳಿವೆ. ಪ್ರತೀ ಮತಗಟ್ಟೆಗೆ ತಲಾ 5 ಲಕ್ಷ ರೂ. ನೀಡಲಾಗುತ್ತಿದೆ. ಒಂದು ಮತಕ್ಕೆ 1,000 ರೂ. ಫಿಕ್ಸ್ ಮಾಡಿದ್ದಾರೆ, ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡಿದ ಮೇಲೆ ಎಲ್ಲ ಚುನಾವಣೆಗಳನ್ನು ಗೆದ್ದಿರುವುದು ಹಣದ ಹೊಳೆ ಹರಿಸಿಯೇ ಎಂದು ಕುಮಾರಸ್ವಾಮಿ ಹೇಳಿದರು.

ಮುಖ್ಯಮಂತ್ರಿ ಹೇಳುತ್ತಾರೆ, ಹಣದ ಚೀಲ ಹೊತ್ತು ಅಭ್ಯಾಸ ಇರುವುದು ಕಾಂಗ್ರೆಸ್ ನವರಿಗೆ ಅಂತಾರೆ. ಆದರೆ, ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಉಪಚುನಾ ವಣೆ ನಡೆದಾಗ ಸರಕಾರಿ ಅಧಿಕಾರಿಯ ಕಾರಿನಲ್ಲೇ ಹಣ ಸಿಕ್ಕಿಬಿತ್ತು. ಆ ಹಣ ಸಿಕ್ಕಿದ್ದು ಗುಂಡ್ಲುಪೇಟೆಯಲ್ಲಿ. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಪಕ್ಷದವರು ಆಗ ಮಾಡಿದ ತಂತ್ರಗಾರಿಕೆಯನ್ನೇ ಈಗ ಬಿಜೆಪಿ ಅಳವಡಿಸಿಕೊಂಡಿದೆ ಎಂದು ದೂರಿದರು.

ಇಷ್ಟಾದರೂ ಕ್ಷೇತ್ರದ ಮತದಾರರು ಹಣಕ್ಕಿಂತ ಹೆಚ್ಚಾಗಿ ತಮಗೆ ಬದುಕು ತೋರಿ ಸಿರುವ ಜೆಡಿಎಸ್ ಪಕ್ಷದ ಬಗ್ಗೆ ಒಲವು ಹೊಂದಿದ್ದಾರೆ. ಈವರೆಗೂ ನಾನು ಎಂಬತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಸುತ್ತಿದ್ದೇನೆ, ಎಲ್ಲೇ ಹೋದರೂ ಜನ ನಮ್ಮ ಪಕ್ಷ ನೀಡಿರುವ ಕೊಡುಗೆಗಳ ಬಗ್ಗೆಯೇ ಮಾತನಾಡಿದರು, ರಾಷ್ಟ್ರೀಯ ಪಕ್ಷಗಳು ಒಡ್ಡುವ ಆಮಿಷಗಳಿಗೆ ಜನರು ಒಳಗಾಗಬಾರದು ಎಂದು ಕುಮಾರಸ್ವಾಮಿ ಮನವಿ ಮಾಡಿದರು.

Translate »