ನಿವೃತ್ತ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜುಗೆ ನುಡಿನಮನ
ಮೈಸೂರು

ನಿವೃತ್ತ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜುಗೆ ನುಡಿನಮನ

July 19, 2018

ಮೈಸೂರು: ಇತ್ತೀಚೆಗೆ ನಿಧನರಾದ ನಿವೃತ್ತ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜುರವರಿಗೆ ಮಂಗಳವಾರ ಮೈಸೂರಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕನ್ನೇಗೌಡ ಕೊಪ್ಪಲಿನಲ್ಲಿರುವ ನೇಗಿಲಯೋಗಿ ಮರುಳೇಶ್ವರ ಸೇವಾಭವನದಲ್ಲಿ ಎಸ್.ಎನ್.ನಾಗರಾಜುರವರ ಅಭಿಮಾನಿ ಬಳಗ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು ನಾಗರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರ್ ಪ್ರಸಾದ್ ಮಾತನಾಡಿ, ಎಸ್.ಎನ್.ನಾಗರಾಜುರವರು ಶಿಸ್ತಿನ ಸಿಪಾಯಿಯಾಗಿದ್ದು, ಮೈಸೂರು ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವರಾಗಿದ್ದ ವೇಳೆ ಪರೀಕ್ಷಾ ಫಲಿತಾಂಶವನ್ನು ಗಣಕೀಕರಣಗೊಳಿಸಿ, ಕೇವಲ 10-15 ದಿನಗಳಲ್ಲಿ ಫಲಿತಾಂಶ ಹೊರಬೀಳುವಂತೆ ಮಾಡಿದ್ದರು. ಇದು ಅವರ ಕಾರ್ಯ ದಕ್ಷತೆಯನ್ನು ತೋರಿಸುತ್ತದೆ.ಆದರೆ, ಪ್ರಸ್ತುತ ದಿನಗಳಲ್ಲಿ ಗಣಕೀಕರಣವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾನಸಗಂಗೋತ್ರಿಯ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳಿಗಿಂತ ಹೊರಗಿನವರೇ ಹೆಚ್ಚಾಗಿರುತ್ತಿದ್ದರು. ಇದನ್ನು ಮನಗಂಡ ನಾಗರಾಜುರವರು ಅನಧಿಕೃತವಾಗಿ ವಾಸವಿದ್ದವರನ್ನು ಹೊರಹಾಕುವ ಮೂಲಕ ವಿವಿಯ ಗೌರವ ಕಾಪಾಡಿದರು ಎಂದು ಶ್ಲಾಘಿಸಿದರು.

ಮಾಜಿ ಶಾಸಕ ವಾಸು ಮಾತನಾಡಿ, ಸಾಹಸ ಸ್ವಭಾವ ಹೊಂದಿದ್ದ ನಾಗರಾಜುರವರು ಎಂತಹ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅವರು ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಂದಾಯ ಅಧಿಕಾರಿಯಾಗಿದ್ದಾಗ, ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಬಾಡಿಗೆಗೆ ನೀಡುವ ವಿಚಾರದಲ್ಲಿ ಅವರ ಪಾತ್ರ ಅವಿಸ್ಮರಣಿಯವಾಗಿತ್ತು. ಪಾಲಿಕೆಯ ಅದಾಯ ತುಂಬಾ ಕಡಿಮೆ ಇದ್ದಂತಹ ಸಂದರ್ಭದಲ್ಲಿ ತಮ್ಮ ಚಾಣಕ್ಷತೆಯಿಂದ ಆದಾಯ ಹೆಚ್ಚುವಂತೆ ಮಾಡಿದ್ದರು ಎಂದು ಸ್ಮರಿಸಿದರು.

ಇಂತಹ ದಕ್ಷ ಅಧಿಕಾರಿಯನ್ನು ಕಳೆದುಕೊಂಡಿರುವುದು ನಮ್ಮೆಲ್ಲರ ದೌರ್ಭಾಗ್ಯ. ಅತಿಯಾದ ಉತ್ಸಾಹವೇ ಅವರಿಗೆ ಮಾರಕವಾಯಿತು ಎಂದು ವಿಷಾದಿಸಿದರು.

ಮಾಜಿ ಮೇಯರ್ ಹಾಗೂ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಸ್ವಾಭಿಮಾನಿ ಕನ್ನಡಿಗ ಪ್ರಶಸ್ತಿ ಪುರಸ್ಕøತ ಸ.ತಮ್ಮೇಗೌಡ, ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಪುಟ್ಟಮಾದಯ್ಯ, ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಸಿ. ಜಯಣ್ಣ, ವಿವೇಕಾನಂದ ಲಾ ಕಾಲೇಜು ಪ್ರಾಂಶುಪಾಲ ಡಾ. ಬಿ. ಕೆಂಪೇಗೌಡ, ಆಂಜನೇಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ದೇವೇಗೌಡ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್. ದೇವರಾಜ್, ನೇಗಿಲಯೋಗಿ ಮರುಳೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ನಂಜಯ್ಯ ಸೇರಿದಂತೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »