ಕೃಷ್ಣರಾಜ ಕ್ಷೇತ್ರದ  ವಸತಿರಹಿತರಿಗೆ ಸೂರು
ಮೈಸೂರು

ಕೃಷ್ಣರಾಜ ಕ್ಷೇತ್ರದ ವಸತಿರಹಿತರಿಗೆ ಸೂರು

October 6, 2021

ಮೈಸೂರು, ಅ.5(ಆರ್‍ಕೆಬಿ)- ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ನಿವೇಶನ ಮತ್ತು ವಸತಿರಹಿತರಿಗೆ ಸೂರು ಕಲ್ಪಿಸುವ ಉದ್ದೇಶ ದಿಂದ ಮೈಸೂರಿನ ಹೊರವಲಯದ ಗೊರೂರು ಪ್ರದೇಶದಲ್ಲಿ ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ಭೂಮಿ ಪೂಜೆ ನೆರವೇರಿಸಿದರು.

ಸರ್ವರಿಗೂ ಸೂರು ಯೋಜನೆಯಡಿ ಜಿ+3 ಮಾದರಿಯಲ್ಲಿ 2,212 ಮನೆಗಳನ್ನು ನಿರ್ಮಿಸಲಾಗುತ್ತಿದೆ. 78.01 ಕೋಟಿ ರೂ. ವೆಚ್ಚದಲ್ಲಿ 1,344 ಮನೆಗಳ ನಿರ್ಮಾಣ ಗುತ್ತಿಗೆಯನ್ನು ಬೆಂಗ ಳೂರಿನ ಗೌರಿ ಇನ್ಫೋಟೆಕ್ ಪ್ರೈ.ಲಿ. ಹಾಗೂ 51.38 ಕೋಟಿ ರೂ. ವೆಚ್ಚದಲ್ಲಿ 868 ಮನೆಗಳ ನಿರ್ಮಾಣದ ಗುತ್ತಿಗೆಯನ್ನು ಬೆಂಗಳೂರಿನ ಮೇವರಿಕ್ ಹೋಲ್ಡಿಂಗ್ಸ್ ಅಂಡ್ ಇನ್ವೆಸ್ಟ್ಮೆಂಟ್ ಪ್ರೈ.ಲಿ. ಅವರಿಗೆ ವಹಿಸಲಾಗಿದೆ. 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

ಪರಿಶಿಷ್ಟ ಜಾತಿಯ 508, ಪರಿಶಿಷ್ಟ ಪಂಗಡದ 207, ಅಲ್ಪ ಸಂಖ್ಯಾತರು- 203, ಹಿಂದುಳಿದ ವರ್ಗಗಳ 845 ಹಾಗೂ ಇತರೆ ಸಮುದಾಯಕ್ಕೆ ಸೇರಿದ 449 ಫಲಾನುಭವಿಗಳಿಗೆ ಮನೆ ನೀಡಲು ನಿರ್ಧರಿಸಲಾಗಿದೆ. 277.88 ಚದರಡಿಯಲ್ಲಿ ಹಾಲ್, ಬೆಡ್‍ರೂಂ, ಅಡುಗೆ, ಸ್ನಾನದ ಮನೆ, ಶೌಚಾಲಯ, ಪ್ಯಾಸೇಜ್ ಸೌಲಭ್ಯ ಹೊಂದಿರುವ ಪ್ರತಿ ಮನೆ ನಿರ್ಮಾಣಕ್ಕೆ 4.90 ಲಕ್ಷ ರೂ. ವೆಚ್ಚವಾಗಲಿದೆ. 2,212 ಮನೆಗಳುಳ್ಳ ಈ ಬಡಾವಣೆ ಅಗತ್ಯ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಒಳಚರಂಡಿ, ವಿದ್ಯುಚ್ಛಕ್ತಿ, ಮಳೆ ನೀರು ಕೊಯ್ಲು ಮತ್ತು ಸಮುದಾಯ ಭವನ ನಿರ್ಮಾಣಕ್ಕೆ 158 ಕೋಟಿ ರೂ. ಒದಗಿಸಲಾಗಿದೆ ಎಂದರು.

ಈ ವೇಳೆ ಗುತ್ತಿಗೆದಾರರ ವಿರುದ್ಧ ಹರಿಹಾಯ್ದ ಸೋಮಣ್ಣ, ಅನು ದಾನದ ಕೊರತೆ ನೆಪ ಅಥವಾ ಇನ್ನಾವುದೇ ಸಬೂಬು ನೀಡದೆ ನಿರ್ಮಾಣ ಕಾರ್ಯ ಸ್ಥಗಿತಗೊಳಿಸದೆ ಮನೆಗಳನ್ನು ಶೀಘ್ರ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ನನ್ನ ಕ್ಷೇತ್ರ ವಿಜಯನಗರದಲ್ಲೂ ವಸತಿ ಯೋಜನೆಯ ಮನೆಗಳ ನಿರ್ಮಾಣ ಸರಿಯಾಗಿ ಆಗಿಲ್ಲ. ಅದೇ ರೀತಿ ಇಲ್ಲಿಯೂ ಆದರೆ ಎಫ್‍ಐಆರ್ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಎ.ರಾಮ ದಾಸ್, ಸಂಸದ ಪ್ರತಾಪ್‍ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »