ಬೆಂಗಳೂರಿಗೆ ವಕ್ಕರಿಸಿದ `ಒಮಿಕ್ರಾನ್’
News

ಬೆಂಗಳೂರಿಗೆ ವಕ್ಕರಿಸಿದ `ಒಮಿಕ್ರಾನ್’

December 3, 2021

ಬೆಂಗಳೂರು, ಡಿ.2-ವಿದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರಿ ವೈರಸ್ `ಒಮಿಕ್ರಾನ್’ ಕರ್ನಾಟಕದ ಮೂಲಕ ಭಾರತಕ್ಕೂ ಕಾಲಿಟ್ಟಿದ್ದು, ತೀವ್ರ ಆತಂಕ ಸೃಷ್ಟಿಸಿದೆ.

ರಾಜ್ಯ ರಾಜಧಾನಿ ಬೆಂಗಳೂರಿ ನಲ್ಲಿ ಈ `ಒಮಿಕ್ರಾನ್’ ಸೋಂಕು ಪತ್ತೆಯಾಗಿದ್ದು, ದೇಶದಲ್ಲೇ ಇದು ಮೊದಲ ಪ್ರಕರಣವಾಗಿದೆ. ಎಲ್ಲರ ದೃಷ್ಟಿ ಈಗ ಬೆಂಗಳೂರಿನತ್ತ ನೆಟ್ಟಿದೆ. `ಒಮಿಕ್ರಾನ್’ ಸೋಂಕಿತರು ಮತ್ತು ಅವರ ಜೊತೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಸಹ ಪತ್ತೆ ಹಚ್ಚಲಾಗಿದೆ. ಬೆಂಗಳೂರಿನ 66 ಮತ್ತು 46 ವರ್ಷ ವಯಸ್ಸಿನ ಇಬ್ಬರಲ್ಲಿ ಈ `ಒಮಿಕ್ರಾನ್’ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಇದು ರಾಜ್ಯದ ಪಾಲಿಗೆ ಆಘಾತಕಾರಿ ಸುದ್ದಿಯಾಗಿದೆ. ರಾಜ್ಯದಲ್ಲಿ `ಒಮಿಕ್ರಾನ್’ ಸೋಂಕು ಪತ್ತೆಯಾದ ಬೆನ್ನಲ್ಲೇ ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ (ಡಿ.3) ಬೆಂಗಳೂರಿಗೆ ವಾಪಸ್ಸಾಗುತ್ತಿದ್ದು, ಆರೋಗ್ಯ ಇಲಾಖೆ ಮತ್ತು ತಜ್ಞರ ಜೊತೆಗೆ ಸಭೆ ನಡೆಸುವರು ಎಂದು ತಿಳಿದು ಬಂದಿದೆ. 66 ವರ್ಷದ ಉದ್ಯಮಿ ಬೆಂಗಳೂರು ಮೂಲದವರಾಗಿದ್ದು, ಅವರು ನ.20ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದರು. ಅವರನ್ನು ಮಾರ್ಗಸೂಚಿಯಂತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಬಂದಿತು. ತಕ್ಷಣ ಅವರನ್ನು ಖಾಸಗಿ ಹೋಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನ.23ರಂದು ಮತ್ತೆ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿತ್ತು. ಹಾಗಾಗಿ ಅವರನ್ನು ಆರೋಗ್ಯ ಇಲಾಖೆಯವರು ಮನೆಗೆ ಕಳುಹಿಸಿದ್ದರು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಈ ವ್ಯಕ್ತಿ ಅಲ್ಲಿಂದ ನೇರವಾಗಿ ಬೊಮ್ಮಸಂದ್ರಕ್ಕೆ ತೆರಳಿ ಕೆಲವು ಮೀಟಿಂಗ್‍ನಲ್ಲಿ ಭಾಗವಹಿಸುವುದರೊಂದಿಗೆ ಕುಟುಂಬದವರ ಸಂಪರ್ಕದಲ್ಲಿದ್ದ. ಇದರಿಂದಾಗಿ 40 ಮಂದಿ ಪ್ರಾಥಮಿಕ ಮತ್ತು 240 ಮಂದಿ ದ್ವಿತೀಯ ಸಂಪರ್ಕದಲ್ಲಿದದ್ದು ತಿಳಿದು ಬಂದಿದ್ದು, ಅವರುಗಳನ್ನೆಲ್ಲಾ ಪತ್ತೆ ಮಾಡಿ ತಪಾಸಣೆಗೊಳಪಡಿಸಲಾಗಿದೆ. ಅವರಲ್ಲಿ ಕೆಲವರಿಗೆ ಪಾಸಿಟಿವ್ ಬಂದಿದ್ದು, ಅವರನ್ನು ಸಹ ಐಸೋಲೇಷನ್‍ನಲ್ಲಿ ಇರಿಸಲಾಗಿದೆ.
ಇದೀಗ ಈ ವ್ಯಕ್ತಿ ನ.27ರಂದು ದುಬೈಗೆ ತೆರಳಿದ್ದು, ಇವರಿಂದ ಪಡೆದಿದ್ದ ಸ್ಯಾಂಪಲ್ ಅನ್ನು ಜಿನೋಮಾ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಪರೀಕ್ಷಾ ವರದಿ ಬಂದಿದ್ದು, ಅವರಿಗೆ ಒಮಿಕ್ರಾನ್ ವೈರಸ್ ಇರುವುದು ದೃಢಪಟ್ಟಿದೆ ಎಂದು ಅವರು 66 ವರ್ಷದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನು ವಿವರಿಸಿದರು.

ಮತ್ತೋರ್ವ 46 ವರ್ಷದ ವೈದ್ಯರಿಗೂ `ಒಮಿಕ್ರಾನ್’ ಸೋಂಕು ದೃಢಪಟ್ಟಿದ್ದು, ಈತನನ್ನು ನ.22ರಂದು ತಪಾಸಣೆಗೊಳಪಡಿಸಿದಾಗ, ಕೊರೊನಾ ಪಾಸಿಟಿವ್ ಬಂದಿತ್ತು. ಅವರು ಹೋಂ ಐಸೋಲೇಷನ್‍ನಲ್ಲಿದ್ದು, ಈಗ ಹೊರ ಬಂದು ಓಡಾಡಿದ್ದಾರೆ. ಅವರ ಸ್ಯಾಂಪಲ್ ಅನ್ನು ಜಿನೋಮಾ ಸ್ವೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ವರದಿಯೂ ಇದೀಗ ಬಂದಿದ್ದು, ಇವರಿಗೂ ಒಮಿಕ್ರಾನ್ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಹೇಳಿದರು.

ಈತ ಎಲ್ಲಿಂದ, ಹೇಗೆ ಬಂದ ಎಂಬ ಬಗ್ಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈತ 13 ಮಂದಿಯೊಂದಿಗೆ ಪ್ರಥಮ ಸಂಪರ್ಕ ಹೊಂದಿದ್ದು, ಇದರಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. 205 ಮಂದಿಯ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದ ಪರಿಣಾಮ ಅವರಲ್ಲಿ ಮೂವರಿಗೆ ಪಾಸಿಟಿವ್ ಬಂದಿದ್ದು, ಉಳಿದವರಿಗೆ ನೆಗೆಟಿವ್ ವರದಿ ಬಂದಿದೆ. ಅವರುಗಳನ್ನು ಐಸೋಲೇಷನ್‍ನಲ್ಲಿರಿಸಲಾಗಿದೆ ಎಂದು ವಿವರಿಸಿದರು.

ಬಿಬಿಎಂಪಿ ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ತಜ್ಞರ ಸಲಹೆ ಪಡೆದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುವುದು ಎಂದ ಅವರು, ಪಾಸಿಟಿವ್ ಬಂದಿರುವವರ ಸ್ಯಾಂಪಲ್‍ಗಳನ್ನು ಜಿನೋಮಾ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಲ್ಲಿಂದ ಇನ್ನಷ್ಟೇ ವರದಿಗಳು ಬರಬೇಕಾಗಿದೆ ಎಂದರು.

ರಾಜ್ಯದಲ್ಲಿ `ಒಮಿಕ್ರಾನ್’ ಸೋಂಕು ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಆತಂಕ ಶುರುವಾಗಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರುವಂತೆಯೂ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ತಿಳಿಸಲಾಗಿದೆ. ಈ ಸೋಂಕು ಮಾರಣಾಂತಿಕವಲ್ಲದಿ ದ್ದರೂ ಬಹು ಬೇಗ ಹರಡುವ ಸಾಧ್ಯತೆಗಳಿವೆ. ಜೊತೆಗೆ ಈ ಸೋಂಕು ಬಂದ ವ್ಯಕ್ತಿ ವಿಪರೀತ ಬಾಧೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಕೂಡ ಹೇಳಲಾಗುತ್ತಿದೆ.

Translate »