ನ.3ರಂದು `ನವನವೋನ್ಮೇಷಶಾಲಿನಿ-ನಾದರೂಪಿಣಿ’ ವಿಶೇಷ ಸಂಗೀತ-ದೃಶ್ಯ ರೂಪಕ
ಮೈಸೂರು

ನ.3ರಂದು `ನವನವೋನ್ಮೇಷಶಾಲಿನಿ-ನಾದರೂಪಿಣಿ’ ವಿಶೇಷ ಸಂಗೀತ-ದೃಶ್ಯ ರೂಪಕ

October 30, 2018

ಮೈಸೂರು: ಗೋಕುಲಂ ಸುರಭಿ ಗಾನಕಲಾಮಂದಿರ ಚಾರಿ ಟಬಲ್ ಟ್ರಸ್ಟ್‍ನ ವಾರ್ಷಿಕೋತ್ಸವದ ಅಂಗವಾಗಿ ನ.3ರಂದು ಸಂಜೆ 6 ಗಂಟೆಗೆ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ `ನವನವೋನ್ಮೇಷಶಾಲಿನಿ-ನಾದರೂಪಿಣಿ’ ವಿಶೇಷ ಸಂಗೀತ -ದೃಶ್ಯ ರೂಪಕ ಆಯೋಜಿಸಲಾಗಿದೆ ಎಂದು ವಿದುಷಿ ಡಾ.ಸುಕನ್ಯಾ ಪ್ರಭಾಕರ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಸುರಭಿಯ ಗೌರವಾಧ್ಯಕ್ಷ ಕೆ.ವಿ.ಮೂರ್ತಿ ಅಧ್ಯಕ್ಷತೆ ವಹಿಸ ಲಿದ್ದು, ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ ಹೆಚ್.ಶ್ರೀನಿವಾಸ್, ಸಂಗೀತ ವಿದ್ವಾನ್ ಡಾ.ಆರ್.ಎಸ್.ನಂದಕುಮಾರ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ನವರಾತ್ರಿಯ 9 ದಿನಗಳಲ್ಲಿ ದೇವಿ ಪ್ರತಿ ದಿನವೂ ಒಂದೊಂದು ಹೊಸ ರೂಪ ತಳೆದು ನವನವೋನ್ಮೇಷಶಾಲಿನಿಯಾಗಿ ಗೋಚರಿಸುತ್ತಾಳೆ ಎಂಬ ನಂಬಿಕೆ ಇದೆ. ಇಂತಹ ದೇವಿಯನ್ನು ಅಂಬಾ, ಬಾಲಾ, ಅಖಿಲಾಂಡೇಶ್ವರಿ, ಗೌರಿ, ಅನ್ನಪೂರ್ಣೆ, ದುರ್ಗೆ, ಭುವನೇಶ್ವರಿ, ಗಾಯತ್ರಿ ಮತ್ತು ರಾಜರಾಜೇಶ್ವರಿ ಎಂದು ನವರೂಪಗಳಲ್ಲಿ ಕಂಡು ಸ್ತುತಿಸಲಾಗುತ್ತದೆ. ಅವರ ದಿವ್ಯ ಸೌಂದರ್ಯದ ಕಲ್ಪನೆಯನ್ನು ಬೆಳಕು-ನೆರಳಿನಾಟದೊಂದಿಗೆ ಬೆಳ್ಳಿ ಪರದೆಯ ಮೇಲೆ ಮೂಡಿಸಿ, ಅವಳ ಮಹಿಮೆಯನ್ನು ಸಂಗೀತದ ಮೂಲಕ ಭಜಿಸಲಾಗುತ್ತದೆ ಎಂದು ಹೇಳಿದರು.

ಇದೇ ಮೊದಲ ಬಾರಿಗೆ ಸಂಗೀತ-ದೃಶ್ಯ ರೂಪಕ ಆಯೋಜಿಸಿದ್ದು, ಉಚಿತ ಪ್ರವೇಶವಿದೆ. ಬೆಂಗಳೂರಿನ ವಿದುಷಿ ಅಪರ್ಣಾ ಶಶಾಂಕ್ ನೆರಳು-ಬೆಳಕು-ದೃಶ್ಯ ಸಂಯೋಜನೆ ಮಾಡಿದ್ದಾರೆ. ಡಾ.ವೀಣಾ ರವಿಕುಮಾರ್ ಚಿತ್ರ ಸಂಯೋಜನೆ ಮಾಡಿದ್ದಾರೆ. ಹಲವು ಗಾಯಕರು ಹಾಡುಗಾರಿಕೆಗೆ ಸಾಥ್ ನೀಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಲಲಿತಾ ಶ್ರೀನಿವಾಸನ್, ವಿಜಯಮಾಲ ಸರಳಾಯ, ವಿದುಷಿ ಮೀರಾ ಮಂಜುನಾಥ್, ಪ್ರಭಾಕರ್ ಉಪಸ್ಥಿತರಿದ್ದರು.

Translate »