ಜಿಲ್ಲೆಯಲ್ಲಿ ವರ್ಷಧಾರೆ ಒಂದೆಡೆ ಹರ್ಷ, ಮತ್ತೊಂದೆಡೆ ಆತಂಕ
ಕೊಡಗು

ಜಿಲ್ಲೆಯಲ್ಲಿ ವರ್ಷಧಾರೆ ಒಂದೆಡೆ ಹರ್ಷ, ಮತ್ತೊಂದೆಡೆ ಆತಂಕ

March 3, 2020

ಮಡಿಕೇರಿ,ಮಾ.2-ಕೊಡಗು ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳಲ್ಲಿ ಕಳೆದ 2 ದಿನಗಳಿಂದ ತುಂತುರು ಮಳೆಯಾಗು ತ್ತಿದೆ. ಸೋಮವಾರ ಬೆಳಗಿನ ಜಾವ ಭಾಗ ಮಂಡಲದಲ್ಲಿ ಕೆಲ ಹೊತ್ತು ಮಳೆಯಾದರೆ ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ.

ಮಡಿಕೇರಿ ಮತ್ತು ಸುತ್ತಲ ಗ್ರಾಮ ಗಳಲ್ಲಿ ದಟ್ಟ ಮೋಡ ಮತ್ತು ಮಂಜು ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಿದೆ. ನಾಪೋಕ್ಲು, ಚೇರಂ ಬಾಣೆ, ಮಕ್ಕಂದೂರು, ಕಾಲೂರು, ಕುಶಾಲ ನಗರದ ಬಸವನಹಳ್ಳಿಯಲ್ಲಿ ವ್ಯಾಪಕ ಮಳೆಯಾಗಿದೆ. ದಕ್ಷಿಣ ಕೊಡಗಿನ ನಾಲ್ಕೇರಿ, ಸೊಡ್ಲೂರು ವ್ಯಾಪ್ತಿಯಲ್ಲಿ ಈ ವರ್ಷದ ಮೊದಲ ಮಳೆ ಹನಿಗಳು ಬಿದ್ದಿವೆ. ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರ ಮಾ.2 ಮತ್ತು 3 ರಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ತುಂತುರು ಮಳೆ ಸುರಿಯುತ್ತದೆ ಎಂದು ಮುನ್ಸೂಚನೆ ನೀಡಿದೆ. ಅದರಂತೆ ಕೆಲವು ಕಡೆಗಳಲ್ಲಿ ತುಂತರು ಮತ್ತು ಕೆಲವು ಕಡೆಗಳಲ್ಲಿ ಉತ್ತಮ ಮಳೆ ಸುರಿದಿದೆ ಎಂದು ಮೂಲಗಳು ತಿಳಿಸಿವೆ.

ಇದೀಗ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆ ಸುರಿಯುತ್ತಿರುವುದು ಕೆಲವು ಬೆಳೆ ಗಾರರ ಹರ್ಷಕ್ಕೆ ಕಾರಣವಾಗಿದ್ದರೆ, ಮತ್ತೆ ಕೆಲವರಿಗೆ ದುಗುಡ ಮೂಡಿಸಿದೆ. ಇಂದಿಗೂ ಕಾಫಿ ಹಣ್ಣು ಕುಯ್ಯುವ ಕಾರ್ಯ ನಡೆಯು ತ್ತಿದ್ದು, ಕೆಲವು ಕಡೆಗಳಲ್ಲಿ ಸ್ಪ್ರಿಂಕ್ಲರ್ ಮೂಲಕ ಕಾಫಿ ಗಿಡಗಳಿಗೆ ನೀರು ಹಾಯಿಸಲಾ ಗುತ್ತಿದೆ. ಒಂದು ಕಡೆ ಕಾಫಿ ಬೆಳೆಗಾರರಿಗೆ ಈ ಮಳೆ ವರವಾಗಿ ಪರಿಣಮಿಸಿದರೆ ಮತ್ತೆ ಕೆಲವು ಕಡೆಗಳಲ್ಲಿ ಶಾಪವಾಗುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಇದೀಗ ಮಳೆ ಸುರಿದಲ್ಲಿ ಕಾಫಿ ಗಿಡಗಳಲ್ಲಿ ಹೂವು ಕಟ್ಟುವ ಪ್ರಕ್ರಿಯೆ ಆರಂಭವಾಗಲಿದ್ದು, ಹಣ್ಣಾಗಿರುವ ಕಾಫಿಯನ್ನು ಕುಯ್ಯಲು ಸಾಧ್ಯವಾಗುವುದಿಲ್ಲ. ಕಾಫಿ ಹೂವು ಕಾಯಿ ಕಟ್ಟುವವರೆಗೆ ಕಾಯಬೇಕಾದ ಅನಿ ವಾರ್ಯತೆಗೆ ಬೆಳೆಗಾರರು ಸಿಲುಕಲಿದ್ದು, ಗಿಡದಲ್ಲಿಯೇ ಕಾಫಿ ಹಣ್ಣು ಒಣಗಿ ಉದುರುವ ಆತಂಕವೂ ಕಾಫಿ ಬೆಳೆಗಾರರನ್ನು ಕಾಡುತ್ತಿದೆ.

ಅದು ಮಾತ್ರವಲ್ಲದೇ, ಈಗಾಗಲೇ ಕಾಫಿ ಕುಯ್ಲು ಮಾಡಿರುವ ಬೆಳೆಗಾರರು ಕಾಫಿ ಹಣ್ಣನ್ನು ಒಣಗಿಸುತ್ತಿದ್ದು, ಮೋಡ ಕವಿದ ವಾತಾವರಣ ಮತ್ತು ಮಳೆಯ ಆತಂಕ ಬೆಳೆಗಾರರನ್ನು ಬಿಟ್ಟು ಬಿಡದಂತೆ ಕಾಡ ತೊಡಗಿದೆ. ಮಳೆಯಿಂದ ಕಾಫಿಯನ್ನು ಕಾಪಾಡುವುದೇ ಒಂದು ದೊಡ್ಡ ತಲೆನೋವಾಗಿ ಬಿಂಬಿತವಾಗುತ್ತಿದೆ.

ಕುಶಾಲನಗರ ವರದಿ: ಪಟ್ಟಣ ಸೇರಿ ದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನ ಧಾರಾಕಾರ ವರ್ಷಧಾರೆ ಅಬ್ಬರಿಸಿತು.ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣದಿಂದ ಕೂಡಿತ್ತು. ಮಧ್ಯಾಹ್ನ 11.30 ಗಂಟೆಗೆ ತುಂತುರು ಹನಿಗಳಿಂದ ಆರಂಭಗೊಂಡ ಮಳೆ ನಂತರ ಜೋರಾಗಿ ಸುರಿಯಿತು.

ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ನಿರಂತರವಾಗಿ ಸುರಿದ ಮಳೆಯಿಂದ ಚರಂಡಿಗಳು ತುಂಬಿ ನೀರು ರಸ್ತೆ ಮೇಲೆ ಹರಿಯಿತು. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ದಿಢೀರನೆ ಮಳೆ ಬಂದ ಹಿನ್ನೆಲೆಯಲ್ಲಿ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಬಿಟ್ಟು ಅಕ್ಕಪಕ್ಕದ ಅಂಗಡಿಗಳಿಗೆ ಓಡಿ ಹೋಗಿ ರಕ್ಷಣೆ ಪಡೆದರು. ಬಸ್ ನಿಲ್ದಾಣ, ಕಾರು ನಿಲ್ದಾಣ ಮುಂಭಾಗದ ರಸ್ತೆಗಳ ಮೇಲೆ ಅರ್ಧ ಅಡಿಯಷ್ಟು ನೀರು ಹರಿಯಿತು. ಬಿಸಿಲಿನಿಂದ ಕಾದು ನಿಂತಿದ್ದ ಭೂಮಿ ಹಾಗೂ ವಾತಾವರಣ ಮಳೆರಾಯನ ಆಗಮನವು ತಂಪಾಗಿಸಿತು.

ರೈತರಿಗೆ ಸಂತಸ : ಬೇಸಿಗೆಯಲ್ಲಿ ರೈತಾಪಿ ವರ್ಗವು ಕೈಗೊಂಡಿರುವ ಬೇಸಿಗೆ ಕೃಷಿ ಚಟುವಟಿಕೆಗಳಿಗೆ ಮಳೆ ಯಿಂದ ತುಂಬ ಅನುಕೂಲಕರ ವಾಗಿದ್ದು, ರೈತಾಪಿ ವರ್ಗದಲ್ಲಿ ಸಂತಸ ಉಂಟುಮಾಡಿದೆ. ಕಾಫಿ ಗಿಡಗಳಿಗೆ ಹೂವುಗಳು ಅರಳಲು ಕೂಡ ಈ ಮಳೆ ಅನುಕೂಲವಾಗಿದೆ.

Translate »