ಶ್ರೀರಾಮನನ್ನು ಸ್ಮರಿಸುವಾಗ ಖಂಡಿತ ಸೀತೆಯನ್ನು ಮರೆಯಬಾರದು
ಮೈಸೂರು

ಶ್ರೀರಾಮನನ್ನು ಸ್ಮರಿಸುವಾಗ ಖಂಡಿತ ಸೀತೆಯನ್ನು ಮರೆಯಬಾರದು

March 1, 2021

ಮೈಸೂರು, ಫೆ.28 (ಪಿಎಂ)- ಒಂದರ್ಥದಲ್ಲಿ ಶ್ರೀರಾಮನಿಗಿಂತ ಸೀತೆ ದೊಡ್ಡವಳು. ಆದರೆ ರಾಮನ ಸ್ಮರಿಸು ವಾಗ ಸೀತೆ ಮರೆಯುವುದೇ ಹೆಚ್ಚುತ್ತಿದೆ. ರಾಮನನ್ನು ಸ್ಮರಿಸುವಾಗ ಸೀತೆಯನ್ನು ಖಂಡಿತ ಮರೆಯಬಾರದು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಲ್‍ಬಿ ರಸ್ತೆಯ ಮಾಧವ ಕೃಪ ಸಭಾಂಗಣದಲ್ಲಿ ಅಖಿಲ ಭಾರ ತೀಯ ಸಾಹಿತ್ಯ ಪರಿಷದ್ ವತಿಯಿಂದ `ಅಯೋಧ್ಯೆಯಲ್ಲಿ ರಾಮಮಂದಿರ-ಹೃದಯ ದಲ್ಲಿ ರಾಮಚಂದಿರ’ ಶೀರ್ಷಿಕೆಯಡಿ ಭಾನು ವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸ್ಪರ್ಧಾತ್ಮಕ ಕವಿಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೀತೆಯ ಮಹತ್ಚರಿತ್ರೆ ಎಂಬುದು ರಾಮಾ ಯಣದ ಮತ್ತೊಂದು ಹೆಸರು. ರಾಮಾ ಯಣ ಸೀತಾಯಣವೂ ಹೌದು. `ಸೀತೆ ಪರಿಶುದ್ಧಕ್ಕಿಂತಲೂ ಶುದ್ಧವಾದವಳು’ ಎಂಬ ಸ್ವಾಮಿ ವಿವೇಕಾನಂದರ ಹೇಳಿಕೆ ಸೀತೆಯ ಮಹತ್ವವನ್ನು ಪುಷ್ಟೀಕರಿಸುತ್ತದೆ. ಹೀಗಾಗಿ ರಾಮನ ಸ್ಮರಿಸುವಾಗ ಸೀತೆಯನ್ನು ಮರೆಯಬಾರದು ಎಂದು ಹೇಳಿದರು.

ಇಡೀ ಭರತಖಂಡ ಒಂದುಗೂಡಿಸಿದ ಶಕ್ತಿ `ಸೀತೆ’. ಇದರಲ್ಲಿ ರಾಮ-ಆಂಜ ನೇಯರ ಪಾತ್ರವು ಇದ್ದರೂ ಸೀತೆ ಇಲ್ಲಿ ಮುಖ್ಯ. ಭರತಖಂಡದಲ್ಲಿ ಜಲಪಾತ, ಕೆರೆ ಗಳು ಇರುವಲ್ಲಿ ಸೀತೆ ಜಳಕ ಮಾಡಿದ್ದಳು ಎಂಬ ಪ್ರತೀತಿ ಇದೆ. ಇದನ್ನು ಸೀತೆ ಪರಿ ಶುದ್ಧಳು ಎಂಬರ್ಥದಲ್ಲಿ ತೆಗೆದುಕೊಳ್ಳಬೇಕು. `ಸೀತೆಗೆ 24 ಗಂಟೆ ಸ್ನಾನ ಮಾಡುವುದು ಬಿಟ್ಟು ಬೇರೆ ಕೆಲಸವೇ ಇರಲಿಲ್ಲವೇನೋ’ ಎಂದು ಮಾಸ್ತಿಯವರು ತಮಾಷೆಯಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ವಾಲ್ಮೀಕಿ ರಾಮಾಯಣ ಭರತಖಂಡದ ಆತ್ಮ. ಮಹಾಭಾರತ ಇದ್ದರೂ ಅದರ ಸ್ವರೂಪ ಬೇರೆ. ರಾಮಾಯಣ ಬಿಟ್ಟರೆ ನಮ್ಮ ಭರತಖಂಡ ಶೂನ್ಯವಾಗುತ್ತದೆ. ರಾಮಾ ಯಣದ ಶಿಲ್ಪಿಯಾದ ವಾಲ್ಮೀಕಿ ಆದಿಕವಿ ಹಾಗೂ ಅಗ್ರಕವಿ. ಭವಿಶಃ ಜಗತ್ತಿನ ಆದಿಕವಿ ಎಂದರೂ ತಪ್ಪಿಲ್ಲ. ವಾಲ್ಮೀಕಿ ರಾಮಾಯಣ ಪರ್ವತ, ನದಿ ಸರೋವರ ಇರುವವರೆಗೂ ಶಾಶ್ವತ. ರಾಮಾಯಣ ನಮ್ಮ ಆದಿಕಾವ್ಯ. ಹಾಗೆಯೇ ರಾಮಾಯಣದ ಆದಿಯಲ್ಲಿ ಕಾವ್ಯ ಮೀಮಾಂಸೆ ಬರುತ್ತದೆ. ರಾಮಾ ಯಣ ಕಾವ್ಯವೂ ಹೌದು ಹಾಗೂ ಕಾವ್ಯ ಮೀಮಾಂಸೆಯೂ ಹೌದು ಎಂದರು.

ರಾಮನಿಗಿಂತಲೂ ರಾಮಾಯಣ ಮುಖ್ಯ. ರಾಮ ಒಬ್ಬ ಪರಿಪೂರ್ಣ ವ್ಯಕ್ತಿ ಯಾದರೆ, ರಾಮಾಯಣ ಒಂದು ಶಕ್ತಿ. ರಾಮಾಯಣ ಎಂದರೆ ರಾಮನ ದಾರಿ ಎಂಬುದಾಗಿದೆ. ರಾಮನ ದಾರಿ ಉದ್ಧಾರದ ದಾರಿ. ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ನಲ್ಲಿ ಪ್ರತಿಪಾದಿತವಾಗಿರುವ ಯುಗ ಧರ್ಮ `ಸರ್ವೋದಯ’. ಇನ್ನು ಸರ್ವೋದಯ ಸಿದ್ಧಿಸಿಲ್ಲದ ಕಾರಣ ನಾವು ರಾಮನ ದಾರಿಯಲ್ಲಿ ಸರ್ವೋದಯದ ಕಡೆ ಸಾಗಬೇಕು. ಗಾಂಧಿಯವರ `ಸರ್ವೋ ದಯ’ದಲ್ಲಿ ನಮ್ಮ ಎಲ್ಲಾ ವ್ಯಾಧಿಗಳಿಗೆ ರಾಮ ನಾಮವೇ ಮದ್ದು ಎಂಬುದಿದೆ ಎಂದರು.

ತಾತ್ವಿಕ ಹಿನ್ನೆಲೆಯಲ್ಲಿ ನೋಡಿದರೆ ಇಂದಿ ನದು ಸ್ಪರ್ಧಾತ್ಮಕ ಕವಿಗೋಷ್ಠಿಯಲ್ಲ. ಬದಲಿಗೆ ಇದು `ಶ್ರದ್ಧಾತ್ಮಕ ಕವಿಗೋಷ್ಠಿ’. ಏಕೆಂದರೆ ಸ್ಪರ್ಧೆಗಿಂತ ಶ್ರದ್ಧೆ ಬಹಳ ಮುಖ್ಯ. ನಮ್ಮ ಅಯೋಧ್ಯೆ ಶ್ರದ್ಧೆ ಹಾಗೂ ಶ್ರೀರಾಮ ಶ್ರದ್ಧೆ ಇಲ್ಲಿಗೆ ತಂದು ಕೂರಿಸಿದೆ. ಆನಂದ ಉಂಟು ಮಾಡುವವನೇ ರಾಮ. ಆದರೆ ಬಹಳ ಮಂದಿಗೆ ಈ ಮೂಲಾರ್ಥದ ಅರಿ ವಿಲ್ಲ. ರಾಮ ಕೇವಲ `ರಾಮ’ ಮಾತ್ರ ವಲ್ಲ, ಅವನು `ರಾಮಚಂದ್ರ’ ಎಂಬುದನ್ನು ನಾವು ಗಮನಿಸಬೇಕು. ಸ್ವಾರಸ್ಯವೆಂದರೆ ರಾಮ ಸೂರ್ಯ ವಂಶದವನೂ ಹೌದು. `ಚಂದ್ರ’ನೂ ಹೌದು. ಇದು ಸ್ವಾರಸ್ಯ ಪೂರ್ಣ ಎಂದು ತಿಳಿಸಿದರು.

`ಅಯೋಧ್ಯೆ’ ಎಂದರೆ ಅಜಯ: `ಅಯೋಧ್ಯೆ’ಯ ಅರ್ಥ ಬಹಳ ಜನಕ್ಕೆ ಗೊತ್ತಿಲ್ಲ. ಅಯೋಧ್ಯೆ ಎಂದರೆ ಗೆಲ್ಲಲು ಆಗದ, ಅಜಯವಾದ ಎಂಬ ಅರ್ಥ ಬರು ತ್ತದೆ. ಹೀಗಾಗಿ ರಾಮ ಮತ್ತು ಅಯೋಧ್ಯೆ ಅಜಯ. ರಾಮ ಮತ್ತು ಅಯೋಧ್ಯೆಯನ್ನು ಪಡೆದಿರುವ ನಮ್ಮ ಭರತಖಂಡ ಅಜಯ ಎಂಬುದನ್ನು ನಾವಿಲ್ಲಿ ಮನಗಾಣಬೇಕು. ರಾಮಮಂದಿರ ನಿರ್ಮಾಣ ಸಮಸ್ತ ಭಾರತದ ಹಾಗೂ ಭಾರತೀಯರ ಅಸ್ಮಿತೆಯ ಪ್ರತೀಕ ಎಂದು ಹೇಳಿದರು.

ರಾಮಮಂದಿರ ನಿರ್ಮಾಣ ಕೇವಲ ಚರಿತ್ರಾರ್ಹವಾದ ಘಟನೆ ಮಾತ್ರವಲ್ಲ. ಕಾವ್ಯಾರ್ಹವಾದ ಘಟನೆಯೂ ಹೌದು. ಇಲ್ಲವಾಗಿದ್ದರೆ ಕವಿಗೋಷ್ಠಿ ಆಯೋ ಜಿಸುತ್ತಿರಲಿಲ್ಲ. ಇದಕ್ಕಿಂತ ಕಾವ್ಯೋಚಿತ ವಾದ ಪ್ರಕ್ರಿಯೆ ಬೇರೊಂದಿಲ್ಲ. ಏಕೆಂ ದರೆ ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಮೂಲ ಪುರುಷ ಅರಿಸ್ಟಾಟಲ್ `ಕಾವ್ಯ ಚರಿತ್ರೆ ಗಿಂತ ಹೆಚ್ಚು ತಾತ್ವಿಕತೆಯಿಂದ ಕೂಡಿರು ತ್ತದೆ’ ಎಂದಿದ್ದಾನೆ. ಹೀಗಾಗಿ ಕವಿಗೋಷ್ಠಿ ಹಮ್ಮಿಕೊಂಡಿರುವುದು ಸೂಕ್ತವಾಗಿದೆ. ಧರ್ಮ ಮತ್ತು ಸತ್ಯ ಎರಡು ರಾಮಾ ಯಣದ ಎರಡು ಕಣ್ಣುಗಳು. ಈ ನಿಟ್ಟಿನಲ್ಲಿ ರಾಮ ಮತ್ತು ರಾಮಾಯಣ ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ರಾಜ್ಯ ಉಪಾಧ್ಯಕ್ಷ ಎಸ್.ಜಿ.ಕೋಟಿ ಕವಿ ಗೋಷ್ಠಿ ಉದ್ಘಾಟಿಸಿದರು.

ವಾಗ್ಮಿ ಹಿರೇಮಗಳೂರು ಕಣ್ಣನ್, ಪರಿಷದ್‍ನ ರಾಜ್ಯ ಪ್ರಧಾನ ಕಾರ್ಯ ದರ್ಶಿ ರಘುನಂದನ ಭಟ್, ಮೈಸೂರು ವಿಭಾಗೀಯ ಸಂಯೋಜಕ ಡಾ.ಸುಧಾ ಕರ್ ಹೊಸಳ್ಳಿ, ಮೈಸೂರು ಜಿಲ್ಲಾಧ್ಯಕ್ಷ ಡಾ. ವಿ.ರಂಗನಾಥ್ ಮತ್ತಿತರರು ಹಾಜರಿದ್ದರು.

Translate »