ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ಕೇವಲ   ಶೇ.40ರಷ್ಟು ಆಸನಗಳು ಭರ್ತಿ
ಮೈಸೂರು

ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ಕೇವಲ  ಶೇ.40ರಷ್ಟು ಆಸನಗಳು ಭರ್ತಿ

October 2, 2020

ಮೈಸೂರು, ಅ.1(ಆರ್‍ಕೆ)- ಕೊರೊನಾ ಅಟ್ಟಹಾಸ ಮುಂದುವರೆದಿರುವುದರಿಂದ ಸಾರ್ವಜನಿಕ ಸಾರಿಗೆ ಬಳಸಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ)ಯು ಕೋವಿಡ್-19 ಲಾಕ್ ಡೌನ್ ನಿರ್ಬಂಧ ತೆರವುಗೊಂಡ ನಂತ ರವೂ ಕೇವಲ ಶೇ.60ರಷ್ಟು ಬಸ್ಸುಗಳನ್ನು ಓಡಿಸುತ್ತಿದೆಯಾದರೂ ಅವುಗಳಲ್ಲೂ ಪೂರ್ಣ ಪ್ರಮಾಣದ ಆಸನಗಳ ಬಳ ಸಲು ಅವಕಾಶವಿದೆಯಾದರೂ, ಒಂದು ಬಸ್ಸಿನಲ್ಲಿ ಕೇವಲ 20ರಿಂದ 25 ಮಂದಿ ಮಾತ್ರ ಪ್ರಯಾಣಿಸುತ್ತಿದ್ದಾರೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ 30 ಮಂದಿ ಪ್ರಯಾಣಿಕರಿಗೆ ಅವಕಾಶವಿದ್ದಾಗಲೂ ಕೇವಲ 15ರಿಂದ 20 ಮಂದಿ ಮಾತ್ರ ಪ್ರಯಾಣಿಸುತ್ತಿದ್ದರು. ನಂತರ ಪೂರ್ಣ ಪ್ರಮಾಣದ ಆಸನಗಳನ್ನು ಭರ್ತಿ ಮಾಡಲು ಅವಕಾಶ ನೀಡಿದ್ದಾಗಲೂ ಪ್ರಯಾಣಿಕರು ಕೆಎಸ್‍ಆರ್‍ಟಿಸಿ ಬಸ್ ಹತ್ತಲು ಹಿಂಜರಿಯುತ್ತಿದ್ದರು. ಇದೀಗ ಮತ್ತೆ ಕೇವಲ ಶೇ.50ರಷ್ಟು ಪ್ರಯಾಣಿಕ ರೊಂದಿಗೆ ಬಸ್ ಓಡಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ. ಆದರೆ, ಈಗಲೂ ಒಂದು ಬಸ್ಸಿನಲ್ಲಿ 20ರಿಂದ 30 ಮಂದಿ ಮಾತ್ರ ಪ್ರಯಾಣಿಸುತ್ತಿರುವುದರಿಂದ ಸಂಸ್ಥೆಗೆ ಭಾರೀ ನಷ್ಟವಾಗುತ್ತಿದೆ ಎಂದು ಕೆಎಸ್‍ಆರ್‍ಟಿಸಿ ಮೈಸೂರು ನಗರ ವಿಭಾಗದ ವಿಭಾಗೀಯ ನಿಯಂತ್ರಕರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಪ್ರವಾಸೋದ್ಯಮ ಆರಂಭವಾಗಿಲ್ಲ, ದೇವಸ್ಥಾನಗಳಲ್ಲಿ ಶನಿವಾರ, ಭಾನುವಾರ ಹಾಗೂ ವಿಶೇಷ ದಿನಗಳಂದು ಪ್ರವೇಶವಿರುವುದಿಲ್ಲ, ಶಾಲಾ-ಕಾಲೇಜು ಆರಂಭವಾಗಿಲ್ಲ. ಸಾಫ್ಟ್‍ವೇರ್ ಕಂಪನಿಗಳೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸದಿರುವುದ ರಿಂದ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ತೀರಾ ಕಡಿಮೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಡ್ರೈವರ್‍ಗಳು, ಕಂಡಕ್ಟರ್‍ಗಳು ಕೆಲಸವಿಲ್ಲದೇ ತಮ್ಮ ಎಲ್ಲಾ ರಜೆಗಳನ್ನೂ ಕಳೆದುಕೊಂಡಿರುವುದರಿಂದ ನಾವು ಎಲ್ಲೆಲ್ಲಿ ಬೇಡಿಕೆ ಇದೆ ಎಂಬುದನ್ನು ನೋಡಿಕೊಂಡು ಅಲ್ಲಿಗೆ ಸಿಟಿ ಬಸ್ಸುಗಳನ್ನು ಓಡಿಸಲು ಮುಂದಾಗಿದ್ದೇವೆ ಎಂದರು. ಉಳಿದಂತೆ ಗ್ರಾಮಾಂತರ ವಿಭಾಗದಿಂದ ಅಂತರ ಜಿಲ್ಲೆಗಳಿಗೆ ಓಡಿಸುತ್ತಿರುವ ಸಾರಿಗೆ ಬಸ್ಸುಗಳಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬರುತ್ತಿಲ್ಲ. ಇದರಿಂದ ಸಂಸ್ಥೆಗೆ ನಷ್ಟವಾಗುತ್ತಿದ್ದು, ಬೇರೆ ಮಾರ್ಗವಿಲ್ಲದೇ ಬಸ್ಸುಗಳನ್ನು ಆಪರೇಟ್ ಮಾಡುತ್ತಿದ್ದೇವೆ ಎಂದು ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

 

 

 

 

 

Translate »