ಮೈಸೂರು ಪ್ರಸಿದ್ಧ ಪೀಪಲ್ಸ್ ಪಾರ್ಕ್‍ನಲ್ಲಿ ಬಯಲು ವೇಶ್ಯಾವಾಟಿಕೆ! ರಾಶಿ ಬಿದ್ದಿವೆ ಬಳಸಿದ `ನಿರೋಧ್’
ಮೈಸೂರು

ಮೈಸೂರು ಪ್ರಸಿದ್ಧ ಪೀಪಲ್ಸ್ ಪಾರ್ಕ್‍ನಲ್ಲಿ ಬಯಲು ವೇಶ್ಯಾವಾಟಿಕೆ! ರಾಶಿ ಬಿದ್ದಿವೆ ಬಳಸಿದ `ನಿರೋಧ್’

July 26, 2022

ಮೈಸೂರು, ಜು.25(ಆರ್‍ಕೆಬಿ)- ಇಲ್ಲಿ ಬಳಸಿ ಬಿಸಾಡಿದ ರಾಶಿ ರಾಶಿ ಕಾಂಡೋಮ್‍ಗಳು, ಸಾವಿರಾರು ಖಾಲಿ ನಿರೋಧ್ ಬಾಕ್ಸ್‍ಗಳು. ಇಲ್ಲಿಗೆ ಭೇಟಿ ನೀಡಿದವರಿಗೆ ನಿಜಕ್ಕೂ ಇದು ಸ್ವಚ್ಛಂದ ಬಯಲು ವೇಶ್ಯಾವಾಟಿಕೆ ಹಾಗೂ ಅಶ್ಲೀಲ ಚಟುವಟಿಕೆಯ ತಾಣ ಎಂಬುದರ ಅರಿವಾಗದೇ ಇರದು.
ಮೈಸೂರಿನ ಹೃದಯ ಭಾಗದಲ್ಲಿರುವ, ಹಗಲೆಲ್ಲಾ ಸುತ್ತ ಸದಾ ಜನಜಂಗುಳಿ, ವಾಹನ ದಟ್ಟಣೆ ಇರುವ ಪ್ರಸಿದ್ಧ ಪೀಪಲ್ಸ್ ಪಾರ್ಕ್‍ನ ಇಂದಿನ ಅಸಹ್ಯ ಸ್ಥಿತಿ ಇದು. `ಮೈಸೂರು ಮಿತ್ರ’ ಸ್ಥಳಕ್ಕೆ ಭೇಟಿ ನೀಡಿ ರಿಯಾಲಿಟಿ ಚೆಕ್ ಮಾಡಿದ ಸಂದರ್ಭದಲ್ಲಿ ನಿಜಕ್ಕೂ ಅಲ್ಲಿನ ವಾತಾವರಣ ನೋಡಿ ಬೆಚ್ಚಿ ಬೀಳುವಂತಾಯಿತು. ಗುಡ್ಡೆ ಗುಡ್ಡೆಯಾಗಿ ಬಿದ್ದಿರುವ ನಿರೋಧ್ ಬಾಕ್ಸ್‍ಗಳು, ಬಳಸಿ, ಬಿಸಾಡಿದ ಕಾಂಡೋಮ್‍ಗಳು, ಕುಡಿದು ಬಿಸಾಡಿದ ಮದ್ಯದ ಬಾಟಲಿಗಳನ್ನು ನೋಡಿದರೆ ಈ ಪಾರ್ಕ್‍ನಲ್ಲಿ ಎಂತಹ ದಂಧೆ ನಡೆಯುತ್ತಿದೆ ಎಂಬುದರ ಅರಿವಾಗುತ್ತದೆ.

ಪ್ರತಿದಿನ ಕತ್ತಲಾಗುತ್ತಿದ್ದಂತೆಯೇ ಪೀಪಲ್ಸ್ ಪಾರ್ಕ್ ಅಶ್ಲೀಲ ಚಟುವಟಿಕೆ ಗಳ ತಾಣವಾಗುತ್ತಿದೆ. ಅದರಲ್ಲೂ ಸರ್ಕಾರಿ ಭವನ ವೃತ್ತದ ಬಳಿಯಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲೇ ಇರುವ ಪೀಪಲ್ಸ್ ಪಾರ್ಕ್‍ನ ಮಂಟಪದಲ್ಲಿ ರಾಶಿ ರಾಶಿ ನಿರೋಧ್, ಬಳಸಿ ಬಿಸಾಡಿರುವ ಕಾಂಡೋಮ್‍ಗಳು ಈ ಪಾರ್ಕ್‍ನ ಪರಿಸರವನ್ನು ಎಷ್ಟು ಹಾಳು ಮಾಡಿದೆ ಎಂದರೆ, ಒಳಹೋದವರು ನಾಚಿಕೆ ಪಡುವಂತಹ ಸ್ಥಿತಿಯಲ್ಲಿರುವುದು ಸ್ಥಳಕ್ಕೆ ಭೇಟಿ ನೀಡಿದವರಿಗೆ ತಿಳಿಯುತ್ತದೆ. ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರ ಪ್ರಕಾರ, ತಾವು ಇದೇ ರಸ್ತೆಯಲ್ಲಿ ಪ್ರತಿದಿನ ಮನೆಗೆ ತೆರಳುತ್ತಿದ್ದು, ಇಲ್ಲಿ ರಾತ್ರಿ ವೇಳೆ ಓಡಾಡಲು ಮುಜುಗರ ವಾಗುತ್ತದೆ. ಪಾರಂಪರಿಕ ಹಾಗೂ ಪ್ರತಿಷ್ಠಿತ ಸರ್ಕಾರಿ ಭವನದ ವೃತ್ತದ ಕೆಲವೇ ಗಜ ಅಂತರದಲ್ಲಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಕಾಲೇಜಿನ ಮುಖ್ಯ ದ್ವಾರದ ಬಳಿ ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್ ಇದೆ. ಪಕ್ಕದಲ್ಲೇ ಪಾರ್ಕ್‍ನ ಚಿಕ್ಕದೊಂದು ಗೇಟ್. ಆ ಗೇಟ್‍ನಿಂದ ಒಳಹೊಕ್ಕರೆ ಕೆಲ ಅಡಿ ಅಂತರದಲ್ಲೇ ಇರುವ ಮಂಟಪದ ಒಳ ಮತ್ತು ಹೊರ ಆವರಣದಲ್ಲಿ ಅಸಹ್ಯ ದೃಶ್ಯ ರಾರಾಜಿಸುತ್ತಿದೆ.

ಪೀಪಲ್ಸ್ ಪಾರ್ಕ್‍ನ ಸುತ್ತಮುತ್ತಲಿನ ಪ್ರಮುಖ ರಸ್ತೆಗಳು ಸಾವಿರಾರು ಜನ ಓಡಾಡುವ, ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಬ್ರಿಟಿಷರ ಕಾಲದ ಗೇಟ್‍ವೇ (ಆರ್ಚ್), ಸರ್ಕಾರಿ ಭವನ, ಸಾರ್ವಜನಿಕ ಗ್ರಂಥಾಲಯ, ತಾಲೂಕು ಕಚೇರಿ, ತಾಪಂ ಕಚೇರಿ ಇತ್ಯಾದಿ ಪ್ರಮುಖ ಕಚೇರಿಗಳನ್ನು ಸುತ್ತುವರಿದಿರುವ ಪೀಪಲ್ಸ್ ಪಾರ್ಕ್‍ನಲ್ಲಿ ಇಂತಹ ಕೆಟ್ಟ, ಅಶ್ಲೀಲ ಚಟುವಟಿಕೆಗಳು ನಡೆಯುತ್ತಿದೆ ಎಂದರೆ ಸಾಂಸ್ಕøತಿಕ ನಗರಿ ಮೈಸೂರಿಗೆ ಶೋಭೆ ತರುವಂಥದ್ದಲ್ಲ. ಪೊಲೀಸ್ ಇಲಾಖೆ ಮತ್ತು ಮೈಸೂರು ನಗರಪಾಲಿಕೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ನಾಗರಿಕರೊಬ್ಬರು `ಮೈಸೂರು ಮಿತ್ರ’ನಲ್ಲಿ ಬೇಸರದಿಂದ ಪ್ರಶ್ನಿಸಿದರು.

ನಿರ್ವಹಣೆ ಇಲ್ಲ: ಮೈಸೂರು ನಗರ ಪಾಲಿಕೆ ವತಿಯಿಂದ ಪೀಪಲ್ಸ್ ಪಾರ್ಕ್ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡಿದ್ದು, ಅವರ ನಿರ್ಲಕ್ಷ್ಯದಿಂದ ಇಲ್ಲಿ ಅಶ್ಲೀಲ ಚಟುವಟಿಕೆಗಳು ನಡೆಯು ವಂತಾಗಿದೆ. ಪಾರ್ಕ್‍ನ ನಿರ್ವಹಣೆಯೂ ಇಲ್ಲ. ರಾತ್ರಿಯಾಗುತ್ತಿದ್ದಂತೆಯೇ ಯಾರು ಬೇಕಾದರೂ ತಮ್ಮ ಚಟ ತೀರಿಸಿಕೊಳ್ಳಲು ಪೀಪಲ್ಸ್ ಪಾರ್ಕ್‍ಗೆ ಹೋಗುತ್ತಾರೆ ಎಂಬಂತಾಗಿದೆ. ಹೀಗಾಗಿ ಜನರಿಗೆ ಸ್ವಚ್ಛ ಗಾಳಿ, ವಾತಾವರಣ ನೀಡಬೇಕಾದ ಪಾರ್ಕ್, ಅಶ್ಲೀಲ ವಾತಾವರಣದ ತಾಣವಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಕೂಡಲೇ ಅಶ್ಲೀಲ ದಂಧೆಗೆ ಕಡಿವಾಣ ಹಾಕಬೇಕು. ವಾಯು ವಿಹಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳ ವ್ಯಾಸಂಗ ಹಾಗೂ ಹೊರ ಊರು ಗಳಿಂದ ಬರುವ ಸಾರ್ವಜನಿಕರಿಗೆ ವಿಶ್ರಾಂತಿ ಪಡೆ ಯಲು ಅನುಕೂಲವಾಗುವ ರೀತಿಯಲ್ಲಿ ಪೀಪಲ್ಸ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಬೇಕು ಎಂಬುದು ಕೆಲವು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ

Translate »