ಮೈಸೂರು, ಜು.23 (ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಕುರಿತಂತೆ ವಿವಿಧ ಲೇಖಕರ ಬರಹ ಗಳನ್ನು ಒಳಗೊಂಡ `ಸಿದ್ದರಾಮಯ್ಯ ಆಡಳಿತ: ನೀತಿ ನಿರ್ಧಾರ’ ಗ್ರಂಥ ವಿವಿಧ ಮಠಾಧೀಶರ ಸಾನ್ನಿಧ್ಯ, ಹಲವು ಗಣ್ಯರ ಉಪಸ್ಥಿತಿ ಯಲ್ಲಿ ಇಂದು ಮೈಸೂರು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು. ಸಿದ್ದರಾಮಯ್ಯ ಬೆಂಬಲಿಗರು, ಹಿತೈಷಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಿಂದ ಕಲಾಮಂದಿರ ಕಿಕ್ಕಿರಿದು ತುಂಬಿತ್ತು.
ಬೆಂಗಳೂರಿನ ಜನಮನ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಕಾಗಿನೆಲೆ ಮಠಾಧೀಶ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯಸಭೆಯಲ್ಲಿ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಂiÀರ್iಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ವಿಧಾನಪರಿಷತ್ ಮಾಜಿ ಸಭಾಪತಿ ಡಾ.ಬಿ.ಎಲ್.ಶಂಕರ್, ಸ್ವಾಮೀಜಿಗಳು ಜಂಟಿಯಾಗಿ `ಸಿದ್ದರಾಮಯ್ಯ ಆಡಳಿತ: ನೀತಿ ನಿರ್ಧಾರ’ ಗ್ರಂಥವನ್ನು ಬಿಡುಗಡೆ ಮಾಡಿದರು. ಆ.3ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯನವರ 75ನೇ ಜನ್ಮದಿನಾಚರಣೆ `ಸಿದ್ದರಾಮೋತ್ಸವ’ದ
ಪೂರ್ವಭಾವಿ ಕಾರ್ಯಕ್ರಮದಂತೆ ಅದ್ಧೂರಿಯಾಗಿ ಇಂದಿನ ಗ್ರಂಥ ಬಿಡುಗಡೆ ಕಾರ್ಯ ಕ್ರಮ ನಡೆದದ್ದು ವಿಶೇಷ. 436 ಪುಟಗಳ ಗ್ರಂಥವು ಸಿದ್ಧರಾಮಯ್ಯನವರ ಹೋರಾಟ, ಸಾಧನೆಗಳು, ನೀತಿ ನಿರ್ಧಾರಗಳು ಮತ್ತು ಅವರು ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿನ ಜನಪರ ಕಾರ್ಯಕ್ರಮಗಳ ಕುರಿತಂತೆ ರಾಜ್ಯಾದ್ಯಂತದ 27 ಲೇಖಕರು ಬರೆದ ಲೇಖನ ಗಳನ್ನು ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಗ್ರಂಥ ಪ್ರಕಟಣೆಗೆ ಲೇಖನಗಳನ್ನು ನೀಡಿದ ಎಲ್ಲಾ ಲೇಖಕರನ್ನು ಗಣ್ಯರು ಸನ್ಮಾನಿ ಸಿದರು. ಕಾರ್ಯಕ್ರಮದ ಆರಂಭದಲ್ಲಿ ಡಾ.ಕೃಪಾಫಡ್ಕೆ ಶಿಷ್ಯವೃಂದದಿಂದ ರೈತ ಗೀತ ನೃತ್ಯ ನಡೆಯಿತು. ಪಿಚ್ಚಳ್ಳಿ ಶ್ರೀನಿವಾಸ್ ಅವರು ಸಂವಿಧಾನ ಪೀಠಿಕೆ ಗಾಯನ ಗಮನ ಸೆಳೆಯಿತು. ವಿಶ್ರಾಂತ ಕುಲಪತಿ ಡಾ.ಸಬೀಹಾ ಭೂಮಿಗೌಡ ಗ್ರಂಥ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಉಪಸ್ಥಿತರಿದ್ದರು. ವಿಧಾನ ಪರಿಷತ್ ಮಾಜಿ ಸಭಾಪತಿ ಡಾ.ಬಿ.ಎಲ್.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಗ್ರಂಥ ಸಂಪಾದಕರಾದ ಕಾ.ತ.ಚಿಕ್ಕಣ್ಣ, ಲಕ್ಷ್ಮಣ ಕೊಡಸೆ, ಸಂಯೋಜಕ ಎಂ.ರಾಮಯ್ಯ, ಕಾರ್ಯದರ್ಶಿ ಡಾ. ಪ್ರಜ್ವಲ್ ಜಿ.ರಾಜ್, ಮಾಜಿ ಸಂಸದರು, ಹಾಲಿ ಮತ್ತು ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರು, ಇನ್ನಿತರರು ಉಪಸ್ಥಿತರಿದ್ದರು.