ಮೈಸೂರು,ಸೆ.23(ಆರ್‍ಕೆ)-ಶೈಕ್ಷಣಿಕ ಚಟುವಟಿಕೆ ಗಳನ್ನು ವಿಸ್ತರಿಸಲು ಮುಂದಾಗಿರುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‍ಓಯು)ವು ರಾಜ್ಯದ ಕರಾವಳಿ ಪ್ರದೇಶದ ಮಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದ ಕಲಬುರಗಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಚಿಂತನೆ ನಡೆಸಿದೆ.
ದೂರ ಶಿಕ್ಷಣ ನೀಡಲು ಕೇವಲ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾತ್ರ ಅವಕಾಶ ಇದೆ ಎಂದು ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ (ಯುಜಿಸಿ) ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿದ್ದು, ಇದರಿಂದ ಘೋಷಿತ ಗೊಂಡಿರುವ ಮುಕ್ತ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯೂ ರಾಜ್ಯಾದ್ಯಂತ ತನ್ನ ಶಿಕ್ಷಣ ಸೌಲಭ್ಯ ಗಳನ್ನು ವಿಸ್ತರಿಸಲು ಯೋಜಿಸಿದೆ. ಅಲ್ಲದೆ ರಾಜ್ಯ ಸಚಿವ ಸಂಪುಟಸಭೆಯಲ್ಲಿ ದೂರ ಶಿಕ್ಷಣ ವ್ಯವಸ್ಥೆಯನ್ನು ಕೇವಲ ಮೈಸೂರು, ಹಾಸನ, ಚಾಮರಾಜನಗರ, ಮಂಡ್ಯ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಷ್ಟೇ ಸೀಮಿತಗೊಳಿ ಸದೇ, ಕರಾವಳಿ, ಉತ್ತರ ಕರ್ನಾಟಕ ಹಾಗೂ ಹೈದರಾ ಬಾದ್ ಕರ್ನಾಟಕ ಭಾಗಗಳಿಗೂ ವಿಸ್ತರಿಸುವಂತೆ ಸಚಿವರು ಮಾಡಿರುವ ಪ್ರಸ್ತಾಪದ ಹಿನ್ನೆಲೆಯಲ್ಲಿ ಮಂಗಳೂರು, ಕಲಬುರಗಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಮುಂದಾಗಿದೆ.
ಈ ಕುರಿತಂತೆ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲ ಯದ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್, ಮೊದಲ ಹಂತದಲ್ಲಿ ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಿಸಲು ಈಗಾಗಲೇ ನಕ್ಷೆ ವಿನ್ಯಾಸ ತರಿಸಿ ಕೊಂಡಿದ್ದೇವೆ. ಮುಂದಿನ ಆಡಳಿತ ಮಂಡಳಿ ಸಭೆ (bom)ಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ನಂತರ ಕರಾವಳಿ ಪ್ರದೇಶದ ಅಭ್ಯರ್ಥಿಗಳಿಗಾಗಿ ಮಂಗಳೂರಿನಲ್ಲಿ ಕಟ್ಟಡ ನಿರ್ಮಿಸಿ, ವಿವಿಧ ಕೋರ್ಸ್‍ಗಳನ್ನು ಆರಂಭಿಸಲಾಗುವುದು ಎಂದರು. ನಮ್ಮದೇ ಆದ ಸ್ವಂತ ಕಟ್ಟಡ, ಸಿಬ್ಬಂದಿ ಮೂಲ ಸೌಲಭ್ಯ ಹೊಂದಿದ್ದಲ್ಲಿ ಆ ಭಾಗದ ಸುತ್ತ ಮುತ್ತಲ ಜಿಲ್ಲೆಯ ಪದವಿ ಆಕಾಂಕ್ಷಿಗಳಿಗೆ ಪ್ರವೇಶಾತಿ ನೀಡಿ, ಬೋಧನಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ಉನ್ನತ ಶಿಕ್ಷಣ ನೀಡಲು ಅನುಕೂಲವಾಗು ತ್ತದೆ. ಆದ್ದರಿಂದ ಮುಕ್ತ ವಿಶ್ವವಿದ್ಯಾನಿಲಯವು ದೂರದ ಊರುಗಳ ಯುವಕರಿಗೂ ಈ ಸೌಲಭ್ಯ ವನ್ನು ಒದಗಿಸಿದಂತಾಗುತ್ತದೆ ಎಂದರು.
50,000 ಪ್ರವೇಶಾತಿ ನಿರೀಕ್ಷೆ: ದೂರ ಶಿಕ್ಷಣ ಸೌಲಭ್ಯ ಒದಗಿಸಲು ಕೇವಲ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ಮಾತ್ರ ಅವಕಾಶವಿರುವುದರಿಂದ ಹಾಗೂ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪದವಿ, ಸ್ನಾತ ಕೋತ್ತರ ಪದವಿ ಪಡೆದ 18ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಯಲ್ಲಿ ಅತ್ಯುನ್ನತ ಅಂಕಗಳೊಂದಿಗೆ ಉತ್ತೀರ್ಣರಾಗಿ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾಗಿರುವುದರಿಂದ ನಮ್ಮಲ್ಲಿ ಪ್ರವೇಶ ಪಡೆಯಲು ಹೆಚ್ಚು ಮಂದಿ ಪ್ರೇರೇ ಪಿತರಾಗಿದ್ದಾರೆ. ಈಗಾಗಲೇ ಸೆ.1ರಿಂದ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಈವರೆಗೆ ಕೇವಲ 23 ದಿನ ಗಳಲ್ಲಿ 2000 ಅಭ್ಯರ್ಥಿಗಳು ಪದವಿ ಕೋರ್ಸ್‍ಗಳಿಗೆ ಪ್ರವೇಶ ಪಡೆದಿದ್ದಾರೆ. ರಾಜ್ಯದ ಎಲ್ಲಾ ಸಾಂಪ್ರದಾಯಕ ವಿಶ್ವವಿದ್ಯಾನಿಲಯಗಳಲ್ಲಿ ಅಕ್ಟೋಬರ್ 30ರವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ಪ್ರವೇಶ ಪ್ರಕ್ರಿಯೆ ಅಂತ್ಯವಾದ ನಂತರ ಮುಕ್ತ ವಿಶ್ವವಿದ್ಯಾನಿಲಯ ದಲ್ಲಿ ಪ್ರವೇಶ ಕೋರಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವು ದುಂಟು ಆದ್ದರಿಂದ ನಮಗೆ ಪ್ರವೇಶಾತಿ ಪಡೆಯಲು ನ.30ರವರೆಗೆ ಕಾಲಾವಕಾಶ ನೀಡಬೇಕೆಂದು ನಾವು ಯುಜಿಸಿಗೆ ಮನವಿ ಮಾಡುತ್ತೇವೆ. ಈ ಬಾರಿ ಮುಕ್ತ ವಿಶ್ವವಿದ್ಯಾನಿಲಯಕ್ಕೆ 50 ಸಾವಿರ ಅಭ್ಯರ್ಥಿಗಳು ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‍ಗಳಿಗೆ ಪ್ರವೇಶ ಪಡೆಯಬಹುದೆಂದು ನಿರೀಕ್ಷಿಸಲಾಗಿದೆ ಎಂದು ಪ್ರೊ. ವಿದ್ಯಾಶಂಕರ್ ತಿಳಿಸಿದರು.
88 ಅಧ್ಯಯನ ಕೇಂದ್ರಗಳು: ಕರ್ನಾಟಕ ರಾಜ್ಯಾ ದ್ಯಂತ ಮುಕ್ತ ವಿಶ್ವವಿದ್ಯಾನಿಲಯದ 88 ಅಧ್ಯಯನ ಕೇಂದ್ರಗಳಿದ್ದು, ಇದೇ ಮೊದಲ ಬಾರಿಗೆ ನಾವು ಆ ಕೇಂದ್ರಗಳಿಂದ ತಲಾ 20,000 ರೂ. ಭದ್ರತಾ ಠೇವಣಿ ಯನ್ನಾಗಿ ಪಡೆದಿದ್ದೇವೆ. ಇದರಿಂದ ಆ ಕೇಂದ್ರಗಳ ಮೇಲೆ ನಮಗೆ ಆಡಳಿತಾತ್ಮಕ ನಿಯಂತ್ರಣ ಇರುತ್ತದೆ. ಅಲ್ಲದೆ ಪತ್ರ ವ್ಯವಹಾರ ಇನ್ನಿತರ ಆಡಳಿತಾತ್ಮಕ Zಟು ವಟಿಕೆಗಳ ವೆಚ್ಚವನ್ನು ಆ ಹಣದಿಂದ ಭರಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
4 ವರ್ಷ ಸ್ಥಗಿತ: ವಿಶ್ವವಿದ್ಯಾಲಯಗಳ ಅನುದಾನ ಆಯೋಗವು ಮಾನ್ಯತೆ ರದ್ದುಗೊಳಿಸಿದ ಕಾರಣ 4 ವರ್ಷ ಗಳ ಕಾಲ ಯಾವುದೇ ಶೈಕ್ಷಣಿಕ ಚಟುವಟಿಕೆಗಳಿಲ್ಲದೆ ಸ್ಥಗಿತಗೊಂಡಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ಲಯವು ಅಷ್ಟೂ ಅವಧಿಯವರೆಗೆ ನಿಶ್ಚಿತ ಠೇವಣಿ(ಈಆ) ಹಣದಿಂದ 700 ಮಂದಿ ಸಿಬ್ಬಂದಿಗೆ ಮಾಸಿಕ 4 ಕೋಟಿ ರೂ.ಗಳಂತೆ ಸಂಬಳ ನೀಡುತ್ತಿತ್ತು. ಅಲ್ಲದೇ ಕಟ್ಟಡಗಳ ನಿರ್ವಹಣೆ, ಲೇಖನಾ ಸಾಮಗ್ರಿ, ವಿದ್ಯುತ್ ಶುಲ್ಕ, ದೂರ ವಾಣಿ ಶುಲ್ಕ ಸೇರಿದಂತೆ ವಿವಿಧ ಬಾಬ್ತುಗಳಿಗೆ ಅನಿ ವಾರ್ಯವಾಗಿ ಸಾಕಷ್ಟು ಹಣ ವೆಚ್ಚವಾಗುತ್ತಿತ್ತು, ಈ ವೆಚ್ಚವನ್ನು ನಿರ್ವಹಿಸಲು ನಮಗೆ ಪ್ರತೀ ವರ್ಷ ಕನಿಷ್ಠ 50,000 ವಿದ್ಯಾರ್ಥಿಗಳು ಪ್ರವೇಶ ಪಡೆಯಲೇಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ನಾವು ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದೇವೆ ಎಂದು ಪ್ರೊ.ವಿದ್ಯಾ ಶಂಕರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.