ಮೈಸೂರು ಮೃಗಾಲಯದಲ್ಲಿಬೇಸಿಗೆ ಶಿಬಿರ ಆರಂಭ
ಮೈಸೂರು

ಮೈಸೂರು ಮೃಗಾಲಯದಲ್ಲಿಬೇಸಿಗೆ ಶಿಬಿರ ಆರಂಭ

April 17, 2022

ಮೈಸೂರು,ಏ.15(ಎಂಟಿವೈ)- ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಸೂರು ಮೃಗಾಲಯದ ಬೇಸಿಗೆ ಶಿಬಿರ ಪುನರಾರಂಭವಾಗಿದ್ದು, ಇಂದಿನಿಂದ ಹತ್ತು ದಿನಗಳ ಮೊದಲ ತಂಡದ ಬೇಸಿಗೆ ನಡೆಯಲಿದೆ. 12ರಿಂದ 18 ವರ್ಷದ ವಿವಿಧ ಶಾಲೆಗಳ 60 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಮೈಸೂರು ಮೃಗಾಲಯ ವತಿಯಿಂದ ಪರಿಸರ ಶಿಕ್ಷಣ ಕುರಿತು ಪ್ರತಿವರ್ಷ ನಡೆಯುವ ಬೇಸಿಗೆ ಶಿಬಿರಕ್ಕೆ ಬಾರಿ ಬೇಡಿಕೆ ಇತ್ತು. ಆದರೆ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಮೃಗಾಲಯದಲ್ಲಿ ಬೇಸಿಗೆ ಶಿಬಿರ ಸ್ಥಗಿತಗೊಳಿಸಲಾಗಿತ್ತು. ಕೋವಿಡ್ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣದಲ್ಲಿರುವುದರಿಂದ ಈ ಸಾಲಿನಲ್ಲಿ ಎರಡು ತಂಡಗಳಲ್ಲಿ ಬೇಸಿಗೆ ಶಿಬಿರ ನಡೆಸಲು ನಿರ್ಧರಿಸಿ ಅರ್ಜಿ ಆಹ್ವಾನಿಸಲಾಗಿತ್ತು.

ಮೊದಲ ತಂಡದ ಶಿಬಿರ ಇಂದಿನಿಂದ (ಏ.15) ಆರಂಭವಾಗಿ ಏ.24ರವರೆಗೆ ನಡೆಯಲಿದ್ದು, ಎರಡನೇ ತಂಡದ ಶಿಬಿರ ಮೇ.1ರಿಂದ 10ರವರೆಗೆ ಜರುಗಲಿದೆ. ಎರಡು ವರ್ಷದಿಂದ ಪಠ್ಯೇತರ ಚಟುವಟಿಕೆಯಿಂದ ದೂರವುಳಿದಿದ್ದ ವಿದ್ಯಾರ್ಥಿಗಳು ಇಂದಿನಿಂದ ಆರಂಭ ವಾದ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಚಾಲನೆ: ಮೃಗಾಲಯದ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಇದರಿಂದ ಸಮತೋಲನ ತಪ್ಪುವ ಅಪಾಯ ಎದುರಾಗಿದೆ. ಪರಿಸರ ಸಮ ತೋಲನ ಕಾಪಾಡದಿದ್ದರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ತೀರಾ ಹದಗೆಡಬಹುದು. ಈ ಹಿನ್ನೆಲೆಯಲ್ಲಿ ಎಲ್ಲರೂ ಪರಸರ ಸಮತೋಲನ ಕಾಪಾಡುವುದಕ್ಕೆ ಬದ್ಧವಾಗ ಬೇಕು. ಜೀವ ವೈವಿಧ್ಯತೆಯನ್ನು ಸಂರಕ್ಷಿಸುವುದಕ್ಕೆ ಪಣ ತೊಡಬೇಕು ಎಂದು ಸಲಹೆ ನೀಡಿದರು.
ಮಿತಿ ಮೀರಿದ ಪ್ರಮಾಣದಲ್ಲಿ ಪರಿಸರ ನಾಶ ವಾಗುತ್ತಿರುವುದರಿಂದ ಪ್ರವಾಹ ಸೇರಿದಂತೆ ಇನ್ನಿತರ ನೈಸರ್ಗಿಕ ವಿಕೋಪ ಸಂಭವಿಸುತ್ತಿವೆ. ಬಹುತೇಕ ಪ್ರವಾಹಗಳು ಮಾನವ ನಿರ್ಮಿತವೇ ಆಗಿದೆ. ಈ ನಿಟ್ಟಿನಲ್ಲಿ ಮನುಷ್ಯ ರಿಂದಲೇ ಆಗುತ್ತಿರುವ ಅರಣ್ಯ ನಾಶ ತಡೆಗಟ್ಟಬೇಕು. ಅದಕ್ಕಾಗಿ ನಾವೇನು ಮಾಡಬೇಕೆಂದು ಆಲೋಚಿಸಬೇಕು. ಹಾಗೇ ವನ್ಯಜೀವಿಗಳಿಗೆ ಮನುಷ್ಯರಂತೆಯೇ ಭೂಮಿ ಯಲ್ಲಿ ಬದುಕಲು ಸಮಾನ ಹಕ್ಕಿದೆ ಎಂಬುದನ್ನು ಅರಿಯಬೇಕು. ಶಿಬಿರದಲ್ಲಿ ಕಲಿತದ್ದನ್ನು ತಮ್ಮ ಸ್ನೇಹಿತರಿಗೆ ತಿಳಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕಾಣಿಕೆ ನೀಡಬೇಕು ಎಂದು ನುಡಿದರು.
ಅಭಯಾರಣ್ಯಕ್ಕೆ ತೋಳವೊಂದು ಪ್ರವೇಶಿಸಿದರೆ ನದಿಯ ದಿಕ್ಕು ಬದಲಾಗುತ್ತದೆ? ತೋಳ ಪ್ರವೇಶಕ್ಕೂ ನದಿ ಹರಿವು ಬದಲಾಯಿಸುವುದಕ್ಕೂ ಕಾರಣ ಏನು? ಎರ ಡಕ್ಕೂ ಇರುವ ಸಂಬಂಧ ಏನು? ಇದಕ್ಕೆ ಉತ್ತರ ವನ್ನು ವಿದ್ಯಾರ್ಥಿಗಳು ಕಂಡುಕೊಳ್ಳಬೇಕು ಎಂದು ಹೇಳಿದರು.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಮಾತನಾಡಿ, ಎರಡು ವರ್ಷದ ಬಳಿಕ ಮೃಗಾಲಯದಲ್ಲಿ ಬೇಸಿಗೆ ಶಿಬಿರ ಆಯೋಜಿ ಸಲಾಗಿದೆ. ಪರಿಸರ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಪ್ರತಿವರ್ಷ ಬೇಸಿಗೆ ಶಿಬಿರ ನಡೆಸಲಾಗುತ್ತಿತ್ತು. ವನ್ಯ ಜೀವಿಗಳ ಸಂರಕ್ಷಣೆ, ಪರಿಸರ ಸಂರಕ್ಷಣೆ ಕುರಿತಂತೆ ಮಕ್ಕಳಿಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೆ ಪ್ರಾಣಿ ಗಳ ಜೀವನ ಕ್ರಮ, ಆಹಾರ ಪದ್ಧತಿ ಸೇರಿದಂತೆ ವಿವಿಧ ವಿಷಯಗಳನ್ನು ಪರಿ ಣಿತರಿಂದ ವಿವರಿಸಲಾ ಗುತ್ತದೆ. ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿ ಗಳು ಇಲ್ಲಿ ಕಲಿತದ್ದನ್ನು ನಿಮ್ಮ ನಿಮ್ಮ ಊರಿಗೆ ಹೋದಾಗಲು ಸ್ನೇಹಿತರಿಗೆ ಪರಿಸರ, ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ವಿವರಿಸ ಬೇಕು. ಅಲ್ಲಿನ ಪರಿಸರ, ಜನ ಜೀವನ ತಿಳಿಯಲು ಪ್ರಯತ್ನಿಸಬೇಕು ಎಂದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾತನಾಡಿ, ಪರಿಸರ, ವನ್ಯಜೀವಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಪ್ರತಿ ವರ್ಷ ಶಿಬಿರ ನಡೆಸಲಾಗುತ್ತಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಬೇಡಿಕೆ ಹೆಚ್ಚಾಗಿದೆ. ಇದರಿಂದ ಮತ್ತಷ್ಟು ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಇನ್ನು 3-4 ಶಿಬಿರ ಸಂಘಟಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ. ಶಿಬಿರಾರ್ಥಿಗಳು ತಮ್ಮ ಮನೆ ಸಮೀಪ ಜಾಗ ಇದ್ದರೆ ಗಿಡ ನೆಡಬೇಕು. ತಮ್ಮ ಹುಟ್ಟುಹಬ್ಬದ ದಿನಂದು ಪ್ರಾಣಿ ದತ್ತು ಪಡೆದುಕೊಳ್ಳುವುದಕ್ಕೆ ಮುಂದಾಗುವ ಮೂಲಕ ಮೃಗಾಲಯಗಳನ್ನು ಉಳಿವಿಗೆ ಕೈಜೋಡಿ ಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಗೋಕುಲ್ ಗೋವರ್ಧನ್, ಜ್ಯೋತಿ ರೇಚಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಶಿಬಿರಾರ್ಥಿಗಳಾದ ಪ್ರಕೃತಿ ಸ್ವಾಗತಿಸಿದರೆ, ಕಸ್ತೂರಿ- ವೈಷ್ಣವಿ ಪ್ರಾರ್ಥಿಸಿದರು. ಚಿರಾಗ್ ವಂದಿಸಿದರು. ಸ್ವಯಂ ಸೇವಕ ನಂದೀಶ್ ನಿರೂಪಣೆ ಮಾಡಿದರು.

Translate »