ಸೆ.6ರಂದು ಮೈಸೂರು ಜಿಲ್ಲಾ ನೃತ್ಯ ನಿರ್ದೇಶಕರು, ನೃತ್ಯ ಕಲಾವಿದರ ಸಂಘದ ಉದ್ಘಾಟನೆ
ಮೈಸೂರು

ಸೆ.6ರಂದು ಮೈಸೂರು ಜಿಲ್ಲಾ ನೃತ್ಯ ನಿರ್ದೇಶಕರು, ನೃತ್ಯ ಕಲಾವಿದರ ಸಂಘದ ಉದ್ಘಾಟನೆ

September 4, 2020

ಮೈಸೂರು, ಸೆ.3(ಪಿಎಂ)- ಮೈಸೂರು ಜಿಲ್ಲೆಯ ನೃತ್ಯ ಕಲಾವಿದರ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಅಸ್ತಿತ್ವಕ್ಕೆ ತಂದಿರುವ ಮೈಸೂರು ಜಿಲ್ಲಾ ನೃತ್ಯ ನಿರ್ದೇಶಕರು ಹಾಗೂ ನೃತ್ಯ ಕಲಾವಿದರ ಸಂಘದ ಉದ್ಘಾಟನಾ ಸಮಾರಂಭವನ್ನು ಸೆ.6ರಂದು ಹಮ್ಮಿ ಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಚಾಮರಾಜ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಲಾಕ್‍ಡೌನ್‍ನಿಂದ ನೃತ್ಯ ಕಲಾವಿದರು ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು. ಹೀಗಾಗಿ ಸಂಘಟಿತರಾಗಿ ಪರಸ್ಪರ ಸ್ಪಂದಿಸುವ ಮೂಲಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಂಘ ಸ್ಥಾಪಿಸಿ, ಕಳೆದ ಒಂದೂವರೆ ತಿಂಗಳ ಹಿಂದೆಯೇ ನೋಂದಣಿ ಸಹ ಮಾಡಿಸಲಾಗಿದೆ ಎಂದು ಹೇಳಿದರು.

ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯ ಹೋಟೆಲ್ ಕಲ್ಯಾಣಿಯಲ್ಲಿ ಅಂದು ಸಂಜೆ 5.30ಕ್ಕೆ ಸಂಘದ ಉದ್ಘಾಟನೆಯನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೆರವೇರಿಸಲಿದ್ದು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಲಿ ದ್ದಾರೆ. ಅತಿಥಿಗಳಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಚಲನಚಿತ್ರ ನಿರ್ದೇಶಕ ಫೈವ್ ಸ್ಟಾರ್ ಗಣೇಶ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಂಘದಲ್ಲಿ ಪ್ರಸ್ತುತ 45 ಮಹಿಳಾ ಸದಸ್ಯರು ಸೇರಿದಂತೆ ಒಟ್ಟು 185 ಮಂದಿ ಸದಸ್ಯರಿ ದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟ ಇರುವ ಕಾರಣ ಉಚಿತವಾಗಿ ಸದಸ್ಯತ್ವ ಪಡೆಯಲು ಅವಕಾಶ ನೀಡಲಾಗಿದೆ. ಆಸಕ್ತ ವೃತ್ತಿ ಬಾಂಧವರು ಸಂಘದ ಸದಸ್ಯತ್ವ ಪಡೆಯಬಹುದು ಎಂದರು. ಲಾಕ್‍ಡೌನ್ ಅವಧಿಯಲ್ಲಿ ನೃತ್ಯ ತರಬೇತಿ ನಡೆಸಲು ಅವಕಾಶ ಇರಲಿಲ್ಲ. ಈಗ ಲಾಕ್‍ಡೌನ್ ಇಲ್ಲವಾದರೂ ಪೋಷಕರು ಮಕ್ಕಳನ್ನು ತರಬೇತಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಇದರಿಂದ ಬರುತ್ತಿದ್ದ ಆದಾಯ ಈಗ ಕಡಿತವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕ್ಷೇತ್ರದ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾ ರಣೆ ಕಂಡಿಲ್ಲ. ನಮ್ಮ ಸಂಘದಲ್ಲಿರುವ ಬಹುತೇಕರು ಪಾಶ್ಚಿಮಾತ್ಯ ನೃತ್ಯ ಶಾಲೆಯ ನಿರ್ದೇಶಕರು ಹಾಗೂ ನೃತ್ಯ ಕಲಾವಿದರಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು. ಸಂಘದ ಸಲಹೆಗಾರ ರಾಜು, ಕಾರ್ಯಾಧ್ಯಕ್ಷ ಮಹೇಶ್ ಜೈನ್, ಉಪಾಧ್ಯಕ್ಷ ವಿಶ್ವನಾಥ್, ಸಹ ಕಾರ್ಯದರ್ಶಿ ಲಕ್ಷ್ಮೀಪ್ರಸಾದ್, ಖಜಾಂಚಿ ಆದರ್ಶ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »