ಆಪರೇಷನ್ ಕಮಲ ಆಡಿಯೋ ಪ್ರಕರಣ ಸಿಎಂ ಬಿಎಸ್‍ವೈಗೆ ತಾತ್ಕಾಲಿಕ ರಿಲೀಫ್
ಮೈಸೂರು

ಆಪರೇಷನ್ ಕಮಲ ಆಡಿಯೋ ಪ್ರಕರಣ ಸಿಎಂ ಬಿಎಸ್‍ವೈಗೆ ತಾತ್ಕಾಲಿಕ ರಿಲೀಫ್

December 17, 2019

ಕಲಬುರಗಿ: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಆಪರೇಷನ್ ಕಮಲ ಆಡಿಯೋ ಆರೋಪ ಪ್ರಕರಣದ ತನಿಖೆಗೆ ನೀಡಿದ್ದ ತಡೆಯಾಜ್ಞೆ ಯನ್ನು ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು. ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠ ಜನವರಿ ಮೊದಲ ವಾರಕ್ಕೆ ಮುಂದೂಡಿದೆ. ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರ ನೇಮಕವಾಗದ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರ ಸರ್ಕಾರಿ ರಜಾ ದಿನಗಳ ನಂತರ ವಿಚಾರಣೆಯನ್ನು ಮುಂದೂಡಲಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಯಾದಗಿರಿ ಜಿಲ್ಲೆ ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರ ಜೆಡಿಎಸ್ ತೊರೆದು ಬಿಜೆಪಿಗೆ ಬಂದರೆ 10 ಕೋಟಿ ರೂ. ನೀಡುವುದಾಗಿ ಯಡಿಯೂರಪ್ಪ ಆಫರ್ ನೀಡಿದ್ದಾರೆ ಎಂದು ಶಾಸಕ ನಾಗನಗೌಡ ಪುತ್ರ ಶರಣಗೌಡ ಕಂದಕೂರ್ ಆಡಿಯೋ ಬಹಿರಂಗಗೊಳಿಸಿದ್ದರು. ಆ ಕುರಿತಂತೆ ರಾಯಚೂರು ಜಿಲ್ಲೆಯ ದೇವದುರ್ಗ ಪೆÇಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.

ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದ ಯಡಿಯೂರಪ್ಪ ತನಿಖೆಗೆ ತಡೆಯಾಜ್ಞೆ ತಂದಿದ್ದರು. ಬಳಿಕ ತಡೆಯಾಜ್ಞೆ ತೆರವಿಗಾಗಿ ಶರಣಗೌಡ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಶರಣಗೌಡ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ಹಾಗೂ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಈಗಾಗಲೇ ಬಹುತೇಕ ವಾದ ಮಂಡಿಸಿದ್ದಾರೆ. ಕಳೆದ ನ.28ರಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ಪೀಠ ಡಿ.16ಕ್ಕೆ ಮುಂದೂಡಿತ್ತು. ಇದೀಗ ಜನವರಿ ಮೊದಲ ವಾರದವರೆಗೆ ಪ್ರಕರಣದ ವಿಚಾರಣೆಯನ್ನ ಮುಂದೂಡಲಾಗಿದೆ.

Translate »