ಬೆಮೆಲ್ ಖಾಸಗೀಕರಣ ಪ್ರಸ್ತಾಪಕ್ಕೆ ವಿರೋಧ; ಕೇಂದ್ರದ ಅಧೀನ ಇಲಾಖೆಗಳ ಅಣಕ ಶವಯಾತ್ರೆ ನಡೆಸಿ ಬೆಮೆಲ್ ಕಾರ್ಮಿಕರ ಪ್ರತಿಭಟನೆ
ಮೈಸೂರು

ಬೆಮೆಲ್ ಖಾಸಗೀಕರಣ ಪ್ರಸ್ತಾಪಕ್ಕೆ ವಿರೋಧ; ಕೇಂದ್ರದ ಅಧೀನ ಇಲಾಖೆಗಳ ಅಣಕ ಶವಯಾತ್ರೆ ನಡೆಸಿ ಬೆಮೆಲ್ ಕಾರ್ಮಿಕರ ಪ್ರತಿಭಟನೆ

February 18, 2021

ಮೈಸೂರು,ಫೆ.17(ಪಿಎಂ)- ಸಾರ್ವಜನಿಕ ಉದ್ದಿಮೆ ಯಾದ ಬೆಮೆಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿ ಟೆಡ್) ಅನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಬೆಮೆಲ್‍ನ ಮೈಸೂರು ಉತ್ಪಾದನಾ ಘಟಕದ ಕಾರ್ಮಿಕರ ಪ್ರತಿಭಟನೆ ಮೂರನೇ ದಿನವಾದ ಬುಧವಾರವೂ ಮುಂದುವರೆಯಿತು.

ಭಾರತ್ ಅರ್ಥ್ ಮೂವರ್ಸ್ ಎಂಪ್ಲಾಯಿಸ್ ಅಸೋಸಿ ಯೇಷನ್ ಆಶ್ರಯದಲ್ಲಿ ಕಾರ್ಮಿಕರು ಸೋಮವಾರದಿಂದ ಹೂಟಗಳ್ಳಿ-ಕೆಆರ್‍ಎಸ್ ರಸ್ತೆಯ ಕಾರ್ಖಾನೆ ಮುಖ್ಯದ್ವಾರ ದಲ್ಲಿ ಗಂಟೆ ಕಾಲ ಪ್ರತಿಭಟನೆ ನಡೆಸುತ್ತಿದ್ದು, ಅದೇ ರೀತಿ ಇಂದೂ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ನೀತಿ ಆಯೋಗ, ಹೂಡಿಕೆ ಮತ್ತು ಸಾರ್ವ ಜನಿಕ ಆಸ್ತಿ ನಿರ್ವಹಣೆ ಇಲಾಖೆ (ದೀಪಂ) ಹಾಗೂ ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರ ಸಮಿತಿ (ಸಿಸಿಇಎ) ಶಿಫಾರಸ್ಸು ಗಳೇ ಬೆಮೆಲ್ ಸಂಸ್ಥೆ ಖಾಸಗೀಕರಣ ಪ್ರಸ್ತಾಪಕ್ಕೆ ಕಾರಣ ಎಂದು ಆರೋಪಿಸಿದರು. ಅಲ್ಲದೆ, ಮಾನವ ಆಕಾರದ ಪ್ರತಿಕೃತಿ ಗಳಿಗೆ ಈ ಮೂರರ ಹೆಸರು ಅಂಟಿಸಿ ಅವುಗಳ ಅಣಕ ಶವ ಯಾತ್ರೆ ನಡೆಸಿ, ಕಾರ್ಮಿಕರು ಕಿಡಿಕಾರಿದರು. ಖಾಸಗಿ ಕಾರ್ಪೊ ರೇಟ್ ಸಂಸ್ಥೆಗಳಿಗೆ ಮಣೆ ಹಾಕಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಖಂಡನಾರ್ಹ. ಸರ್ಕಾರದ ಇಂತಹ ನಿಲುವಿ ನಿಂದ ದೇಶದ ಸಮಗ್ರತೆ ಹಾಗೂ ಭದ್ರತೆಗೆ ಧಕ್ಕೆಯಾಗಲಿದೆ. ಜೊತೆಗೆ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಮೆಲ್ ಸಂಸ್ಥೆಯಲ್ಲಿ ಪ್ರಸ್ತುತ 13 ಸಾವಿರ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು, ಖಾಸಗಿಕರಣದಿಂದ ಉದ್ಯೋಗ ಭದ್ರತೆಗೆ ಧಕ್ಕೆ ಉಂಟಾಗಲಿದೆ. ಅಲ್ಲದೆ, ಮೀಸಲಾತಿ ಆಧಾರದ ನೇಮಕ ಪ್ರಕ್ರಿಯೆಗಳು ಸ್ಥಗಿತಗೊಂಡು ಸಾಮಾಜಿಕ ನ್ಯಾಯ ಮರೀಚಿಕೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಂಸ್ಥೆಯನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.

ಭಾರತ್ ಅರ್ಥ್ ಮೂವರ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಹೆಚ್.ವೈ.ಮುನಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ಡಿ. ರಾಜಶೇಖರಮೂರ್ತಿ, ಉಪಾಧ್ಯಕ್ಷ ಗೋವಿಂದರೆಡ್ಡಿ, ಕಾರ್ಯದರ್ಶಿ ಸುರೇಶ್, ಖಜಾಂಚಿ ಜಗದೀಶ್ ಸೇರಿದಂತೆ 600ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Translate »