ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ: ನವೀನ್ ರಾಜ್‍ಸಿಂಗ್ ಸೂಚನೆ
ಹಾಸನ

ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ: ನವೀನ್ ರಾಜ್‍ಸಿಂಗ್ ಸೂಚನೆ

September 18, 2018

ಹಾಸನ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಸೆ.23ರಂದು ವಿವಿಧ ಇಲಾಖೆಗಳ ಹತ್ತಾರು ಕಾಮಗಾರಿ ಗಳ ಶಿಲಾನ್ಯಾಸ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಸಂಘಟಿಸುವಂತೆ ರಾಜ್ಯ ಮಿನರಲ್ ಕಾರ್ಪೋರೇಷನ್ ಲಿ. ವ್ಯವಸ್ಥಾಪಕ ನಿರ್ದೇಶಕರೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೆ.23ರಂದು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ಧತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೋಕೋಪಯೋಗಿ ಇಲಾಖೆಯ ಕಟ್ಟಡಗಳು ಹಾಗೂ ರಸ್ತೆಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಸಣ್ಣ ನೀರಾ ವರಿ, ಕೃಷಿ, ತೋಟಗಾರಿಕೆ ಗ್ರಾಮೀಣ ಅಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸಕ್ಕೆ ಸಿದ್ಧವಿರುವ ಕಾಮಗಾರಿಗಳ ವಿವರವನ್ನು ಪಡೆದ ಅವರು, ಎಲ್ಲಾ ಇಲಾಖೆಗಳು ಸಾಂಘಿಕ ವಾಗಿ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸ ಬೇಕು ಎಂದು ನಿರ್ದೇಶನ ನೀಡಿದರು.

ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯ ಕ್ರಮದ ಜೊತೆಗೆ ವೈಯಕ್ತಿಕ ಫಲಾನುಭವಿಗಳಿಗೆ ಸೌಲತ್ತು ವಿತರಣೆ ಕಾರ್ಯಕ್ರಮಗಳೂ ಇರುತ್ತದೆ. ಈಗಾಗಲೇ ಯೋಜನೆವಾರು ಪಟ್ಟಿ ಮಾಡಿ ಸೌಲಭ್ಯ ಪಡೆಯುವವರಿಗೆ ಪೂರ್ವ ಮಾಹಿತಿ ನೀಡಿ, ಎಲ್ಲರನ್ನು ಸುರಕ್ಷಿತ ವಾಗಿ ಕರೆತಂದು ವಾಪಸ್ ತಲುಪಿಸುವ ಕೆಲಸ ಮಾಡಿ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಎಲ್‍ಇಡಿ ವಾಲ್ ಬಳಕೆ ಬಗ್ಗೆ ಗಮನ ಹರಿಸಿ. ಕಾಮ ಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳುವ ಯೋಜನೆಗಳ ಬಗ್ಗೆ ಆಯಾಯ ಇಲಾಖಾ ಅಧಿಕಾರಿಗಳು ಫೋಟೋ ವೀಡಿಯೋಗಳನ್ನು ಮೊದಲೇ ಸಿದ್ಧಪಡಿಸಿಕೊಂಡು ಕಾರ್ಯ ಕ್ರಮದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರಲ್ಲದೆ, ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಕಾರ್ಯ ಕ್ರಮ ರೂಪಿಸುವಂತೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸೆ.23ರಂದು ಉದ್ಘಾಟನೆ ಹಾಗೂ ಶಿಲಾ ನ್ಯಾಸಕ್ಕೆ ಸಿದ್ಧವಿರುವ ಅಭಿವೃದ್ಧಿ ಕಾಮಗಾರಿಗಳ ಕಾಮಗಾರಿಗಳ ವಿವರ ನೀಡಿದರು.

ಎಲ್ಲಾ ಇಲಾಖೆಗಳು ಅವರವರ ಕಾಮ ಗಾರಿಗಳ ಪ್ರತ್ಯೇಕ ಆಹ್ವಾನ ಪತ್ರಿಕೆಯನ್ನು ಮುದ್ರಿಸಿದರೂ ಜಿಲ್ಲಾಡಳಿತದಿಂದ ಒಂದು ಏಕರೂಪದ ಆಹ್ವಾನ ಪತ್ರಿಕೆ ತಯಾರಿಸ ಲಾಗುವುದು. ಲೋಕೋಪಯೋಗಿ ಇಲಾಖೆ ವೇದಿಕೆ ನಿರ್ಮಾಣ ಕಾರ್ಯ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟಸ್ವಾಮಿ ಹಾಗೂ ಜಿಲ್ಲಾ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಅವರು ಜಿಪಂ ಕಾಮಗಾರಿಗಳ ಕುರಿತು ವಿವರಿಸಿದರು. ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ, ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್. ನಾಗರಾಜ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

Translate »